ADVERTISEMENT

ಆಡಾಡುತ್ತಾ ಅಡುಗೆ ಮಾಡುವ ಪುಟಾಣಿ

ಪೃಥ್ವಿರಾಜ್ ಎಂ ಎಚ್
Published 13 ನವೆಂಬರ್ 2019, 19:30 IST
Last Updated 13 ನವೆಂಬರ್ 2019, 19:30 IST
ಅಡುಗೆ ತಯಾರಿಯಲ್ಲಿ ಮಗ್ನನಾಗಿರುವ ಯಶ್‌
ಅಡುಗೆ ತಯಾರಿಯಲ್ಲಿ ಮಗ್ನನಾಗಿರುವ ಯಶ್‌   

ಅಕ್ಷರ ಕಲಿಯಲು ಆರಂಭಿಸಿದ ವಯಸ್ಸಿನಲ್ಲೇ ಅಡುಗೆ ಕಲೆಯನ್ನೂ ಕಲಿಯಲು ಆರಂಭಿಸಿದ ಯಶ್. 1ನೇ ತರಗತಿಯಲ್ಲಿದ್ದಾಗಿನಿಂದಲೇ ಮನೆಯಲ್ಲಿ ಅಮ್ಮ ಪದ್ಮಾ ವಿನೋದ್‌ ಮಾಡುತ್ತಿದ್ದ ಅಡುಗೆಗಳನ್ನು ತದೇಕ ಚಿತ್ತದಿಂದ ಗಮನಿಸುತ್ತಿದ್ದ. ತಲೆಗೆ ತೋಚಿದ ಪ್ರಶ್ನೆಗಳನ್ನೆಲ್ಲಾ ಕೇಳುತ್ತಿದ್ದ. ಅವನ ಆಸಕ್ತಿ ಗಮನಿಸಿ ಅಡುಗೆ ಕಲಿಯುವುದಕ್ಕೆ ಪದ್ಮಾ ಪ್ರೋತ್ಸಾಹ ನೀಡಿದರು.

ಆರಂಭದಲ್ಲಿ ಬೆಂಕಿಯ ನೆರವಿಲ್ಲದೇ ತಯಾರಿಸಬಹುದಾದ ಸಲಾಡ್‌, ಸ್ಯಾಂಡ್‌ವಿಚ್‌ನಂತಹ ಖಾದ್ಯಗಳನ್ನು ಕಲಿತು, ರುಚಿಕರವಾಗಿ ತಯಾರಿಸಿ ಪೋಷಕರೇ ಬೆರಗಾಗುವಂತೆ ಮಾಡಿದ. ಅಡುಗೆ ಬಗ್ಗೆ ಅವನಿಗಿರುವ ಆಸಕ್ತಿ ಗಮನಿಸಿ, ಬೇಕಿಂಗ್ ಮತ್ತು ಕುಕಿಂಗ್‌ ತರಬೇತಿ ಕೊಡಿಸಿದ್ದಾರೆ.

ಪ್ರಸ್ತುತ ಮಾರತ್‌ಹಳ್ಳಿಯ ವಿಬ್‌ಗಯಾರ್ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವ ಯಶ್‌, ಬಗೆ ಬಗೆಯ ಖಾದ್ಯಗಳನ್ನು ತಯಾರಿಸುತ್ತಾನೆ. ಮನೆಗೆ ಅತಿಥಿಗಳು ಬಂದರೆ ತಾನೇ ಖುದ್ದಾಗಿ ತಯಾರಿಸಿ ಬಡಿಸುವುದಕ್ಕೆ ಇಷ್ಟಪಡುತ್ತಾನೆ. ಸಾಧ್ಯವಾದಷ್ಟು ಅಲಂಕಾರ ಮಾಡಿ ನೋಡಿದ ಕೂಡಲೇ ಬಾಯಲ್ಲಿ ನೀರೂರುವಂತೆ ಮಾಡುತ್ತಾನೆ.

ADVERTISEMENT

ಅಡುಗೆ ಮಾಡುವುದಷ್ಟೇ ಅಲ್ಲದೆ, ಪ್ರಯೋಗಗಳನ್ನು ಮಾಡುತ್ತಾ ಹೊಸ ಖಾದ್ಯಗಳನ್ನು ತಯಾರಿಸುವುದಕ್ಕೂ ಮುಂದಾಗುತ್ತಾನೆ. ಈಗಾಗಲೇ ಪಿಜ್ಜಾ ನೂಡಲ್ಸ್, ಸ್ಟಫ್‌ ಇಡ್ಲಿಯಂತಹ ವಿಶೇಷ ಖಾದ್ಯಗಳನ್ನೂ ತಯಾರಿಸಿದ್ದಾನೆ. ಚಾಕಲೇಟ್, ಪಫಿನ್ಸ್‌, ಮೊಮೊಸ್‌, ಗ್ರಿಲ್‌, ಬಿರಿಯಾನಿಗಳನ್ನು ಅನಾಯಾಸವಾಗಿ ಮಾಡುತ್ತಾನೆ.

ಬಿಡುವಿನ ವೇಳೆಯಲ್ಲಿ ಅಡುಗೆ ಕಲಿಯುತ್ತಾ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾನೆ. ದೊಡ್ಡವನಾದ ಮೇಲೆ ರೊಬೋಟಿಕ್ ಸೈಂಟಿಸ್ಟ್‌ ಆಗಬೇಕೆಂಬ ಬಯಕೆ ಹೊಂದಿರುವ ಯಶ್‌, ಜೀವನ ಪರ್ಯಂತ ಅಡುಗೆ ಕಲೆಯನ್ನು ಕಲಿಯುತ್ತೇನೆ ಎಂದು ಹೇಳುತ್ತಾನೆ.

ಖಾದ್ಯಗಳನ್ನು ತಯಾರಿಸುವಾಗ ವಿಡಿಯೊಗಳನ್ನು ಮಾಡಿ ಯೂಟ್ಯೂಬ್‌ಗೆ ಸೇರಿಸುತ್ತಾನೆ. ಇದಕ್ಕಾಗಿ ‘ಯಮ್ಮಿ ಟ್ರೀಟ್ಸ್‌ ವಿತ್‌ ಯಶ್‌’ ಹೆಸರಿನ ಸ್ವಂತ ಚಾನೆಲ್ ಕೂಡ ನಿರ್ವಹಿಸುತ್ತಿದ್ದಾನೆ. ಈಗಾಗಲೇ ಸುಮಾರು 800 ಮಂದಿ ಚಾನೆಲ್‌ಗೆ ಚಂದಾದಾರರನ್ನೂ ಪಡೆದುಕೊಂಡಿದ್ದಾನೆ. ಯಶ್‌ ತಾಯಿ ಪದ್ಮಾ ಕೂಡ ಅಡುಗೆಗೆ ಸಂಬಂಧಿಸಿದಂತೆ ‘ತಮಿಳಾಚ್ಚಿ ಪದ್ಮಾಲೋಗ್ಸ್‌’ ಎಂಬ ಯೂ ಟ್ಯೂಬ್‌ ಚಾನೆಲ್‌ ನಿರ್ವಹಿಸುತ್ತಿದ್ದಾರೆ. ಇದು ಯಶ್‌ ಮೇಲೆ ಪ್ರಭಾವ ಬೀರಿತ್ತು.

ಮಕ್ಕಳಿಗೆ ಅಡುಗೆ ಕಲಿಸಬೇಕು

ಅಥ್ಲೆಟಿಕ್ಸ್‌, ಈಜು, ಚಿತ್ರಕಲೆ, ಕವನ ರಚನೆ, ನಾಟಕ, ನೃತ್ಯಕಲೆಗಳನ್ನು ಕಲಿಸುವಂತೆ ಎಲ್ಲ ಮಕ್ಕಳಿಗೂ ಅಡುಗೆ ಕಲೆಯನ್ನೂ ಕಲಿಸಿಕೊಡಬೇಕು. ಯಶ್‌ ಅಡುಗೆ ಕಲಿಯುತ್ತೇನೆ ಎಂದಾಗ, ನಾವು ಪ್ರೋತ್ಸಾಹಿಸಿ ತರಬೇತಿ ನೀಡಿದ್ದೇವೆ. ಸ್ವಂತ ಚಾನೆಲ್ ಆರಂಭಿಸಬೇಕು ಎಂದು ಪಟ್ಟು ಹಿಡಿದು ಆರಂಭಿಸಿದ. ಅವನು ಅಡುಗೆ ಮಾಡುವುದನ್ನು ನೋಡಿ ಖುಷಿ ಪಡುವವರು ಹಲವರು. ಅಡುಗೆ ಎಂದರೆ, ಕತ್ತಿಗಳನ್ನು ಬಳಸುವುದು, ಗ್ರೈಂಡ್ ಮಾಡುವುದು ಇದ್ದೇ ಇರುತ್ತದೆ. ಇದಕ್ಕೆಲ್ಲಾ ತರಬೇತಿ ನೀಡಿದ್ದೇವೆ, ಈಗ ಅವನಿಗೆ ಉಪಕರಣಗಳನ್ನು ಬಳಸುವುದು ಸಲೀಸು. ಹೊಸ ಬಗೆಯ ಖಾದ್ಯಗಳನ್ನು ತಯಾರಿಸುವುದಕ್ಕೆ ಸದಾ ಪ್ರಯತ್ನಿಸುತ್ತಾನೆ. ಓದಿಗೆ ತೊಂದರೆಯಾಗದಂತೆ ಬಿಡುವಿನ ವೇಳೆಯಲ್ಲಿ ತರಬೇತಿ ಪಡೆಯುತ್ತಾನೆ. ಅವನ ವಿಡಿಯೊಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಬೇಕೆಂಬ ಉದ್ದೇಶವಿರಲಿಲ್ಲ. ಆದರೆ ಕಲಿಯುವ ಮಕ್ಕಳಿಗೆ ನೆರವಾಗಲಿ ಎಂದು ಅಪ್‌ಲೋಡ್ ಮಾಡುತ್ತಿದ್ದೇವೆ. ಮಕ್ಕಳು, ಹೊಸದಾಗಿ ಕಲಿಯುವವರಿಗೆ ಇವು ನೆರವಾಗುತ್ತವೆ.

ಪದ್ಮಾ ವಿನೋದ್‌, ಯಶ್ ತಾಯಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.