ADVERTISEMENT

ರಸ್ತೆಯಲ್ಲಿ ದನಗಳ ಹಾವಳಿ

ಪ್ರಕಾಶ ನಾಯ್ಕ್‌ ಎಸ್‌.
Published 23 ಜೂನ್ 2019, 19:30 IST
Last Updated 23 ಜೂನ್ 2019, 19:30 IST
ರಸ್ತೆ ಮಧ್ಯೆ ನಿಂತ ದನಗಳು
ರಸ್ತೆ ಮಧ್ಯೆ ನಿಂತ ದನಗಳು   

ಕೆ.ಆರ್. ಮಾರುಕಟ್ಟೆ, ವಿಜಯನಗರ, ರಾಜಾಜಿನಗರ, ಶಿವಾಜಿನಗರ ಇನ್ನು ಕೆಲವು ಸ್ಥಳಗಳ ಸುತ್ತಮುತ್ತ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಕಸದ ರಾಶಿ ಸುತ್ತ ಸೇರುವ ದನಗಳು ಏನೇನೋ ತಿಂದು ಬದುಕುತ್ತವೆ. ಇದರಲ್ಲಿ ಕೆಲವು ಬೀಡಾಡಿ ದನಗಳು ಇನ್ನು ಕೆಲವು ಸಾಕು ದನಗಳು. ಈ ಸಾಕು ದನಗಳ ಮಾಲೀಕರು ಕೇವಲ ಹಾಲಿಗಾಗಿ ಅವುಗಳನ್ನು ಉಪಯೋಗಿಸಿಕೊಂಡು ಬೀಡಾಡಿ ದನಗಳ ಜೊತೆ ಬಿಟ್ಟಿ ಮೇಯಲು ಬಿಡುತ್ತಾರೆ. ವಿಶೇಷವೆಂದರೆ ಇಂಥ ದನಗಳ ಕಿವಿಯಲ್ಲಿ ಅವುಗಳಿಗೆ ಒಂದೊಂದು ಸಂಖ್ಯೆ ಮತ್ತು ಮಾಲೀಕರ ಫೋನ್ ನಂಬರನ್ನು ನಮೂದಿಸಿ ಬೆಳಿಗ್ಗೆಯಿಂದ ಸಂಜೆಯವರೆಗೆ ಬೀದಿಗೆ ಬಿಟ್ಟಿರುತ್ತಾರೆ. ಸಂಜೆಯಾಗುತ್ತಿದ್ದಂತೆ ಈ ದನಗಳನ್ನು ಮನೆಗೆ ಎಳೆದೊಯ್ದು ಹಾಲು ಕರೆದು ಮತ್ತೆ ಬೀದಿಗೆ ಬಿಡುತ್ತಾರೆ.

ಸಂಚಾರಕ್ಕೆ ಅಡ್ಡಿ

ಬೀಡಾಡಿ ದನಗಳು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಮಾಡುತ್ತವೆ. ರಸ್ತೆ ತುಂಬ ವಿಶ್ರಮಿಸುವ ಬೀದಿ ದನಗಳು ಸಾರ್ವಜನಿಕರು, ವಾಹನ ಸವಾರರಿಗೆ ತೊಂದರೆ ನೀಡುತ್ತವೆ. ಎಷ್ಟೋ ಸಂದರ್ಭಗಳಲ್ಲಿ ರಸ್ತೆ ಬಿಟ್ಟು ಕದಲುವುದೇ ಇಲ್ಲ. ರಸ್ತೆ ತುಂಬ ಸಗಣಿ ಹಾಕುತ್ತವೆ. ಕಸದ ತೊಟ್ಟಿಯಲ್ಲಿ ಎಂಥದೋ ತ್ಯಾಜ್ಯ ವಸ್ತುಗಳನ್ನು ಮೇಯುವುದರಿಂದ ಇವುಗಳ ಸಗಣಿಯ ವಾಸನೆ ಅಸಹನೀಯ. ಗಡಿಬಿಡಿಯಲ್ಲಿ ಕೆಲವರು ಗಮನಿಸದೇ ತುಳಿದುಕೊಂಡು ಒಡಾಡುವುದುಂಟು ಎಂದು ಜನ ಬೇಸರಿಸಿಕೊಳ್ಳುತ್ತಾರೆ. ‘ನಮ್ಮ ಗಮನಕ್ಕೂ ಬಂದಿದೆ. ಈ ದನಗಳನ್ನು ದಿನನಿತ್ಯ ಓಡಿಸಿದರೂ ಮತ್ತೆ ಬಂದು ನಿಲ್ಲುತ್ತವೆ’ ಎಂದು ಟ್ರಾಫಿಕ್ ಫೊಲಿಸರು ತಮ್ಮ ಅಸಹಾಯಕತೆಯನ್ನು ಹೇಳುತ್ತಾರೆ. ಈ ದನಗಳ ಮಾಲೀಕರಿಗೆ ಮತ್ತು ಬಿಬಿಎಂಪಿಗೆ ಅದೆಷ್ಟು ಸಲ ದೂರು ನೀಡಿದರೂ ಏನೂ ಪ್ರಯೋಜವಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಅಳಲು.‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.