ADVERTISEMENT

ಹೈಟೆಕ್‌ ಗೌಳಿ

​ಪ್ರಜಾವಾಣಿ ವಾರ್ತೆ
Published 29 ಮೇ 2019, 19:30 IST
Last Updated 29 ಮೇ 2019, 19:30 IST
   

ಓದಿದ್ದು ಸಿವಿಲ್‌ ಎಂಜಿನಿಯರಿಂಗ್‌. ಆದರೆ, ಕಾಯಕ ಹಾಲು ಮಾರುವುದು! ಎತ್ತಣದಿಂತೆತ್ತ ಸಂಬಂಧವಯ್ಯಾ.. ಎನ್ನುವ ಸಾಲು ತಟ್ಟನೆ ನೆನಪಿಗೆ ಬರುತ್ತದಲ್ಲವೇ? ಸಾಮಾನ್ಯವಾಗಿ ಗೌಳಿಗರು ಹಾಲು ಮಾರುವ ಸಹಜದ ಕಾಯಕ ಇವರದಲ್ಲ. ಕೊಂಚ ಭಿನ್ನ. ಆಧುನಿಕ ಮಾರುಕಟ್ಟೆಯ ಪಟ್ಟುಗಳ ಬಳಸಿಕೊಂಡ ವಿಧಾನವೂ ಅಲ್ಲ. ಅತ್ಯಂತ ಸಾವಯವ ವಿಧಾನದ ಸ್ವಾವಲಂಬಿ ಕಾಯಕವಿದು.

ಬೆಳಗಿನ ಜಾವ ನಾಲ್ಕು ಗಂಟೆ ಸಮಯ. ಗರುಡಾಚಾರ್‌ ಪಾಳ್ಯದಲ್ಲಿರುವ ಒಂದು ಬೃಹತ್‌ ಅಪಾರ್ಟ್‌ಮೆಂಟ್‌ನಲ್ಲಿ ಗೆಳಯರೊಬ್ಬರ ಫ್ಲ್ಯಾಟ್‌ನಲ್ಲಿ ರಾತ್ರಿ ಭೋಜನಕೂಟಕ್ಕೆಂದು ತಂಗಿದ್ದೆ. ತಡರಾತ್ರಿ ಊಟ, ಹರಟೆ ಮುಗಿದು ಮನೆಗೆ ಹೊರಡಲು ಟ್ಯಾಕ್ಸಿ ಬುಕ್‌ ಮಾಡಿ ಕಾಯುತ್ತಿದ್ದೆ. ಅಪಾರ್ಟ್‌ಮೆಂಟ್‌ ಪ್ರವೇಶದ್ವಾರದಲ್ಲಿ ಹಾಲು ತುಂಬಿದ ಕ್ಯಾನ್‌ಗಳನ್ನು ಸಾಲಾಗಿ ಜೋಡಿಸಿಟ್ಟಿದ್ದನ್ನು ಗಮನಿಸಿದೆ. ರೆಡ್‌ ಕಲರ್‌ ಟೀ-ಶರ್ಟ್‌ಧಾರಿ ಯುವಕರೊಬ್ಬರು ನಿಂತು ಹುಡುಗರಿಗೆ ಸಲಹೆ ನೀಡುತ್ತಿದ್ದರು. ಹುಡುಗನೊಬ್ಬ ಕ್ಯಾನ್‌ ಎತ್ತಿ ತನಗೆ ನಿಗದಿಪಡಿಸಿದ ಫ್ಲ್ಯಾಟ್‌ಗಳತ್ತ ಹಾಲು ಸರಬರಾಜು ಮಾಡಲು ಹೊರಟ. ಕುತೂಹಲದಿಂದ, ಏನ್ ಗುರು ಇದು ಇಷ್ಟು ಬೇಗ ಹಾಲು ಇಲ್ಲಿಗೆ ತಂದು ತಲುಪಿಸುತ್ತಿದ್ದೀರಾ, ನಂದಿನಿಯವರಿಗಿಂತ ಫಾಸ್ಟ್‌ ನೀವು ಎಂದೆ. ‘ಹೌದು. ನಾವೂ ಒಂಥರ ಹಾಗೆನೇ‘ ಎನ್ನುತ್ತ, ಹೆಸರು ಮೋಹನ ಮೂರ್ತಿ ಎಂದು ಪರಿಚಯಿಸಿಕೊಂಡರು.

ಹಂಗದ್ರೆ?.. ‘ನಮ್ಮದೇ ಹಸು ಸಾಗಾಣಿಕೆಯ ವ್ಯವಸ್ಥೆ ಇಲ್ಲ. ನಾವು ಕೂಡ ರೈತರಿಂದ ನೇರವಾಗಿ ಹಾಲು ತೆಗೆದುಕೊಳ್ಳುತ್ತೇವೆ. ಸ್ಟೋರೇಜ್‌ನಲ್ಲಿಟ್ಟು ಅದರ ತಾಜಾತನವನ್ನು ಕಾಪಿಡುತ್ತೇವೆ. ನಮ್ಮದೇ ವ್ಯವಸ್ಥೆಯ ಮೂಲಕ ಸರಬರಾಜು ಮಾಡುತ್ತೇವೆ’ ಎಂದರು.

ADVERTISEMENT

ಕುತೂಹಲ ಕೆರಳಿತು. ಹೇಗೆ ಇದೆಲ್ಲ... ಎಂದೆ. ‘ರೈತರಿಗೆ ಯೋಗ್ಯ ಬೆಲೆ ಸಿಗಬೇಕು ತಾನೆ? ಅದಕ್ಕೆ ನಾವು ನಂದಿನಿಯವರಿಗಿಂತ ಹೆಚ್ಚು ಬೆಲೆ ನೀಡಿ ಹಾಲು ತುಂಬಿಸಿಕೊಳ್ಳುತ್ತೇವೆ. ಗುಣಮಟ್ಟದ ಹಾಲು ನೀಡುವ ಆರೋಗ್ಯಯುತ ಹಸು ಸಾಕುವವರನ್ನೇ ಆಯ್ಕೆ ಮಾಡುತ್ತೇವೆ. ಹಾಗೆ ಸಮೀಕ್ಷೆ ನಡೆಸಿ ಹಸುಗಳನ್ನು ಆಯ್ಕೆ ಮಾಡಲು ಒಂದು ಟೀಂ ಇದೆ. ಸಂಗ್ರಹಿಸಿಕೊಂಡ ಹಾಲಿನ ಗುಣಮಟ್ಟ ಪರೀಕ್ಷಿಸಿ ಫ್ರೀಜರ್‌ ಮೂಲಕ ಶೇಖರಣೆ ಮಾಡಿಟ್ಟುಕೊಂಡು ಅದರ ತಾಜಾತನವನ್ನು ಉಳಿಸಿಕೊಳ್ಳುತ್ತೇವೆ. ನಾವು ಪ್ಯಾಶ್ಚರೀಕರಿಸುವುದಿಲ್ಲ. ರಾತ್ರಿ ಎರಡು ಗಂಟೆಯಷ್ಟೊತ್ತಿಗೆ ಫ್ರೀಜರ್‌ನಿಂದ ಹಾಲು ತೆಗೆದುಕೊಂಡು ಕ್ಯಾನ್‌ಗಳಿಗೆ ತುಂಬಿ ಬೆಳಿಗ್ಗೆ ಇಷ್ಟೊತ್ತಿನಲ್ಲಿ ಇಲ್ಲಿಗೆ ತಲುಪಿಸುತ್ತೇವೆ.

ನಮ್ಮ ಹುಡುಗರು ಇದನ್ನು ಆಯಾ ಗ್ರಾಹಕರ ಫ್ಲ್ಯಾಟ್‌ಗಳಿಗೆ ತಲುಪಿಸುತ್ತಾರೆ. ನನ್ನ ಸುತ್ತಮುತ್ತಲಿನ ಯುವಕರಿಗೆ ಈ ಮೂಲಕ ಉದ್ಯೋಗ ಸೃಷ್ಟಿಸಿದ್ದೇನೆ. ರೈತರಿಗೆ ಉತ್ತಮ ಬೆಲೆ ನೀಡುವುದು, ಯುವಕರಿಗೆ ಸಾಧ್ಯವಾದಷ್ಟು ಉದ್ಯೋಗ ಸೃಷ್ಟಿಸುವುದು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಪೂರೈಸುವುದು ಈ ಮೂರು ನೆಲೆಯಲ್ಲಿ ನನ್ನ ಒಟ್ಟಾರೆ ಪರಿಕಲ್ಪನೆ ರೂಪುಗೊಂಡಿದೆ’ ಎನ್ನುವ ಸಮಗ್ರ ಮಾಹಿತಿ ನೀಡಿದರು.

‘ಇಪ್ಪತ್ತು ಸಾವಿರ ಲೀಟರ್‌ ಸಂಗ್ರಹಿಸಿಟ್ಟುಕೊಳ್ಳು ವಷ್ಟು ಮೂಲಸೌಕರ್ಯ ನಮ್ಮ ಯೂನಿಟ್‌ನಲ್ಲಿದೆ. ಪ್ಯಾಕಿಂಗ್‌ ಮಾಡುವುದಿಲ್ಲ. ಸಾಂಪ್ರದಾಯಿಕ ವಿಧಾನದಲ್ಲೇ ಸರಬರಾಜು ಮಾಡುತ್ತಿದ್ದೇವೆ. ನಾನ್‌ ಪ್ಯಾಶ್ಚರೈಸ್ಡ್‌ ಹಾಲನ್ನು ಪ್ಯಾಕಿಂಗ್‌ ಮಾಡುವುದಕ್ಕೆ ಒಂದು ಪರ್ಮಿಷನ್‌ಗಾಗಿ ಅಪ್ಲೈ ಮಾಡಿಕೊಂಡಿದಿನಿ. ಅದು ಸಿಕ್ಕರೆ ಪ್ಯಾಕಿಂಗ್‌ ಹಾಲನ್ನು ನಾನೂ ಸರಬರಾಜು ಮಾಡಬಹುದು.

ಮಾರುಕಟ್ಟೆಯಲ್ಲಿರುವ ಹಾಲಿನ ದರಕ್ಕಿಂತ ನಮ್ಮದು ತುಸು ದುಬಾರಿ. ಹಸುವಿಗೆ ಏನಾದರೂ ಕಾಯಿಲೆ ಬಂದರೆ, ಆ್ಯಂಟಿಬಯೊಟಿಕ್‌ ಅಥವಾ ಲಸಿಕೆ ಏನಾದರೂ ಹಾಕಿದ್ದರೆ ಅಂಥ ಹಸುವಿನ ಹಾಲನ್ನು ನಾವು ಸಂಗ್ರಹಿಸಿಕೊಳ್ಳುವುದಿಲ್ಲ.ಇದು ಒಂದರ್ಥದಲ್ಲಿ ಸಾವಯವ ವಿಧಾನದ ಉತ್ಪನ್ನ. ಇಂಥ ತಾಜಾ ಹಾಲು ಮನೆ ಬಾಗಿಲಿಗೆ ತಂದು ಕೊಡುತ್ತೇವಲ್ಲ. ಅದಕ್ಕೆ ನಮ್ಮದು ಬೆಲೆ ಹೆಚ್ಚು. ಏಕೆಂದರೆ ಆದಾಯದ ಹಿಂದೆ ರೈತರಿಗೆ ಉತ್ತಮ ಬೆಲೆ ತಂದುಕೊಡುವ ಕಾಳಜಿ ಕೂಡ ಇದೆಯಲ್ಲ’ ಎಂದು ತಮ್ಮ ಕಾಯಕವನ್ನು ಅವರು ಸಮರ್ಥಿಸಿಕೊಳ್ಳುತ್ತಾರೆ.

***

ನಗರಕ್ಕೆ ಸಮೀಪದ ಕೋಲಾರದಿಂದ ಹಾಲು ತಂದು ಇಲ್ಲಿ ಮಾರುವ ಮೋಹನ ಮೂರ್ತಿ, ಅದಕ್ಕೊಂದು ಆಫೀಸ್‌ ಮಾಡಿಕೊಂಡಿದ್ದಾರೆ. ಅಲ್ಲಿ ಕೆಲವು ಯುವಕರನ್ನು ಹಾಲು ಸಂಗ್ರಹಕ್ಕೆ ನೇಮಿಸಿದ್ದಾರೆ. ಫ್ರೀಜರ್‌ ವ್ಯವಸ್ಥೆಯಿಂದ ರಾತ್ರಿ ಎರಡು ಗಂಟೆಯಷ್ಟೊತ್ತಿಗೆ ಹಾಲನ್ನು ಹೊರತೆಗೆದು ಕ್ಯಾನ್‌ಗಳಿಗೆ ತುಂಬಿಸಿ ಮತ್ತೆ ಫ್ರಿಡ್ಜ್‌ ವ್ಯವಸ್ಥೆಯ ವಾಹನದ ಮೂಲಕ ಬೆಂಗಳೂರಿಗೆ ಬೆಳಗಿನ ಜಾವದಷ್ಟೊತ್ತಿಗೆ ತಲುಪಿಸುತ್ತಾರೆ. ಅಲ್ಲಿಂದ ತಮ್ಮ ಗ್ರಾಹಕರಿರುವ ಅಪಾರ್ಟ್‌ಮೆಂಟ್‌ಗಳಿಗೆ ಹಾಲು ತಲುಪಿಸುತ್ತಾರೆ. 2017ರಿಂದ ಈ ಕಾಯಕ ಆರಂಭಿಸಿರುವ ಮೋಹನ ಮೂರ್ತಿ ಈಗಾಗಲೇ ಒಂದು ಸಾವಿರ ಲೀಟರ್‌ ಹಾಲು ಮಾರುತ್ತಿದ್ದಾರೆ. ಸಾವಿರಾರು ಹಾಲು ಲೀಟರ್‌ ಹಾಲು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯದ ತಂತ್ರಜ್ಞಾನದ ವ್ಯವಸ್ಥೆ ತಮ್ಮ ಬಳಿ ಇದೆ ಎಂದು ಹೇಳಿಕೊಳ್ಳುವ ಮೋಹನ ಮೂರ್ತಿ ಪ್ಯಾಶ್ಚರೀಕರಿಸಿದ ಹಾಲನ್ನು ಪ್ಯಾಕ್‌ ಮಾಡಿ ಅಥವಾ ಬಾಟಲ್‌ಗಳಲ್ಲಿ ಸಂಗ್ರಹಿಸಿ ನೀಡುವ ವ್ಯವಸ್ಥೆ ಹೊಂದಲು ಅಗತ್ಯ ಅನುಮತಿಗಳಿಗಾಗಿ ಪ್ರಯತ್ನಿಸುತ್ತಿರುವುದಾಗಿಯೂ ಹೇಳುತ್ತಾರೆ.

***

ಮೋಹನ ಮೂರ್ತಿ ಓದಿದ್ದು ಎಂಜಿನಿಯರಿಂಗ್‌. ಆದನ್ನು ಬಿಟ್ಟು ಹಾಲು ಮಾರುವ ಕಾಯಕಕ್ಕೆ ಇಳಿದು ಯಶಸ್ವಿಯಾಗಿದ್ದಾರೆ. ಸಾಮಾಜಿಕ ಚಟುವಟಿಕೆಯಲ್ಲೂ ಸಕ್ರಿಯರಾಗಿರುವ ಇವರು ರಾಜಕೀಯವನ್ನೂ ತುಂಬ ಇಷ್ಟ ಪಡುತ್ತಾರೆ. ಇತ್ತೀಚೆಗೆ ಅವರು ಕಾರ್ಪೊರೇಷನ್‌ ಎಲೆಕ್ಷನ್‌ಗೂ ಸ್ಪರ್ಧಿಸಿದ್ದರಂತೆ. ದಿನಕ್ಕೆ ಹೆಚ್ಚೆಂದರೆ ನಾಲ್ಕು ಗಂಟೆ ನಿದ್ರೆ ಮಾಡುವ ಮೋಹನ ಮೂರ್ತಿ ಬೆಳಗಿನ ಜಾವ ಹಾಲು ಗ್ರಾಹಕರನ್ನು ತಲುಪಿದೆಯೇ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಲು ತಮ್ಮ ಹುಡುಗರ ಜೊತೆ ಸದಾ ಸಂಪರ್ಕದಲ್ಲಿರುತ್ತಾರೆ. ಅವರ ಜೊತೆ ಫೀಲ್ಡ್‌ಗೂ ಧಾವಿಸುತ್ತಾರೆ. ಬೆಳಗಿನ ಜಾವ ನೀಟಾಗಿ ಶೇವ್‌ ಮಾಡಿಕೊಂಡು ಲವಲವಿಕೆಯಿಂದ ಓಡಾಡುತ್ತಿದ್ದ ಅವರ ಪರಿಯನ್ನು ಕಂಡಾಗಲೇ ಕಾಯಕ ಶ್ರದ್ಧೆ ಗಮನ ಸೆಳೆಯುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.