ADVERTISEMENT

ಹಾಯಿದೋಣಿ | ಬದುಕು ಕಟ್ಟಿದ ಪ್ರೀತಿ

ಸ್ನೇಹಾ ಖೈತಾನ್ ಜೈಸ್ವಾಲ್
Published 7 ಏಪ್ರಿಲ್ 2020, 4:26 IST
Last Updated 7 ಏಪ್ರಿಲ್ 2020, 4:26 IST
ಸ್ನೇಹಾ
ಸ್ನೇಹಾ   

ನನ್ನ ಶಾಲಾ ದಿನಗಳಲ್ಲಿ ವ್ಯಾಯಾಮದ ತರಗತಿ ಬಂತೆಂದರೆ ಅದೇನೋ ಸಂಕಟ. ಎರಡೂ ಕೈಗಳನ್ನು ಒಮ್ಮೆಲೆ ಮೇಲೆತ್ತುವುದು ನನ್ನಿಂದಾಗದ ಮಾತಾಗಿತ್ತು. ಕೈ ಎತ್ತಿದ ಮರುಕ್ಷಣವೇ ಆಯ ತಪ್ಪಿದಂತಾಗಿ ಕೆಳಗಿಳಿಸಿಬಿಡುತ್ತಿದ್ದೆ. ಇವಳು ಸೋಂಬೇರಿ ಎಂಬ ಮಾತನ್ನೂ ಕೇಳಿಸಿಕೊಂಡೆ. ನಾನು ಹೀಗೆ ಮಾಡುತ್ತಿರುವುದು ಉದ್ದೇಶಪೂರ್ವಕವಾಗಿ ಅಲ್ಲ ಎಂಬುದು ಕ್ರಮೇಣ ಅವರ ಅರಿವಿಗೆ ಬರತೊಡಗಿತು.

‘ಲಿಂಬ್ ಗ್ರಿಡ್ಲ್ ಮಸ್ಕ್ಯೂಲರ್ ಡಿಸ್ಟ್ರೊಫಿ’ (Limb Griddle Muscular Dystrophy–LGMD) ಎಂಬ ಆರೋಗ್ಯ ಸಂಬಂಧಿ ಸಮಸ್ಯೆ ಇದೆ ಎಂದು ತಿಳಿದಾಗ ನನಗೆ 13 ವರ್ಷ.ದಿನಗಳೆದಂತೆ ಸಮಸ್ಯೆ ಉಲ್ಬಣಿಸಿತು. ನಡೆಯುವುದು ಕಷ್ಟವಾಯಿತು. ಹಿಮ್ಮಡಿಗಳು ಮಡಚಿಕೊಂಡವು. ಬೆನ್ನು ಮೂಳೆ ಬಾಗಲು ಆರಂಭವಾಯಿತು. 24ನೇ ವಯಸ್ಸಿನಲ್ಲಿ ಗಾಲಿಕುರ್ಚಿ ಅನಿವಾರ್ಯವಾಯಿತು.

ಬಿಹಾರದ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಾನು ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಪೂರೈಸಿದೆ. ಬಾಗಲ್ಪುರದ ಕಾಲೇಜಿಗೆ ಪ್ರವೇಶ ದೊರೆಯಿತಾದರೂ, ಅಲ್ಲಿಗೆ ತಲುಪಲು 70 ಕಿಲೋಮೀಟರ್ ಕ್ರಮಿಸಬೇಕಿತ್ತು. ಓದುವ ಅದಮ್ಯ ಹಂಬಲವಿದ್ದರೂ, ಒಂದು ದಿನವೂ ಕಾಲೇಜಿಗೆ ಹೋಗಲಾಗಲಿಲ್ಲ.

ADVERTISEMENT

ಅಂಗ ಸ್ವಾಧೀನವಿಲ್ಲದ ಈ ಹುಡುಗಿಯನ್ನು ಯಾರು ಮದುವೆಯಾಗುತ್ತಾರೆ ಎಂಬ ಜನರ ಮಾತುಗಳಿಂದ ನನ್ನ ಚಿತ್ತ ಬೆರೆಡೆ ಹರಿಸಲು ಗ್ರಾಫಿಕ್ ಡಿಸೈನಿಂಗ್‌ ಕಲಿಯಲು ನಿರ್ಧರಿಸಿದೆ. ಒಂದು ದಿನ ನಾನು ರಚಿಸಿದ ವಿನ್ಯಾಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ. ‘ನಿಮ್ಮ ವಿನ್ಯಾಸಗಳು ಇಷ್ಟವಾಗಿವೆ’ ಎಂಬುದಾಗಿ ಅಪರಿಚಿತನೊಬ್ಬ ಸಂದೇಶ ಕಳಹಿಸಿದ. ಆತನಿಗೆ ಧನ್ಯವಾದ ಹೇಳಿ, ಸುಮ್ಮನಾದೆ. ಆದರೆ ಮುಂದಿನ ದಿನಗಳಲ್ಲಿ ನಾವು ಮಾತನಾಡಲು ಶುರು ಮಾಡಿದೆವು.

ಗೆಳೆತನವೂ ಚಿಗುರೊಡೆಯಿತು. ಆ ದಿನವೂ ಬಂದಿತು. ‘ನೀವಂದ್ರೆ ಇಷ್ಟ’ ಎಂದು ಆತ ಹೇಳಿಯೇಬಿಟ್ಟ. ಆದರೆ ನಾನು ಸುತಾರಾಂ ಒಪ್ಪಲಿಲ್ಲ. ನನ್ನ ಪರಿಸ್ಥಿತಿಯನ್ನು ಕೂಲಂಕುಷವಾಗಿ ವಿವರಿಸಿ ಹೇಳಿದೆ. ಗಾಲಿ ಕುರ್ಚಿಗೆ ಅಂಟಿಕೊಂಡಿರುವ ನನಗೆ ನನ್ನ ಸ್ವಂತ ಕೆಲಸಗಳನ್ನು ಮಾಡಿಕೊಳ್ಳಲೂ ಆಗುತ್ತಿಲ್ಲ ಎಂದು ಮನದಟ್ಟು ಮಾಡಿದೆ. ಆದರೆ ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ‘ಎಲ್ಲವನ್ನೂ ತಿಳಿದುಕೊಂಡೇ ಪ್ರೀತಿಸಲು ಮುಂದಾದೆ’ ಎಂದು ನಿರ್ಧಾರದ ಗಟ್ಟಿ ದನಿಯಲ್ಲಿ ಹೇಳಿಬಿಟ್ಟ. ಆತನ ಪೋಷಕರೂ ಮಗನ ಮಾತಿಗೆ ತಲೆಯಾಡಿಸಿದರು.

ಅಪರಿಚಿತನಾಗಿದ್ದ ವ್ಯಕ್ತಿ 2017ರ ಜೂನ್ 18ರಂದು ಗಂಡನ ಸ್ಥಾನ ತುಂಬಿದ. ಮದುವೆಯಾದ ಬಳಿಕ ನಾನು ಕೋಲ್ಕತ್ತಕ್ಕೆ ವಾಸ್ತವ್ಯ ಬದಲಿಸಿದೆ. ಕೆಲಸಕ್ಕೆ ಒಬ್ಬರನ್ನು ಗೊತ್ತು ಮಾಡಿಕೊಂಡೆವು. ಕೆಲವೊಮ್ಮೆ ಅಡುಗೆಗೆ ಸಹಾಯ ಮಾಡಲು, ನನ್ನ ಕಾಲುಗಳಿಗೆ ಮಸಾಜ್ ಮಾಡಲು ಅವರು ಸಮಯ ನೀಡುತ್ತಿದ್ದರು. ಪತಿಗೆ ಪ್ರೀತಿಯಿಂದ ತಿಂಡಿ ತಯಾರಿಸಿಕೊಡುವುದು ಎಂದರೆ ನನಗೆ ಎಲ್ಲಿಲ್ಲದ ಹಿಗ್ಗು. ನನ್ನೆಲ್ಲ ಹೆಜ್ಜೆಗಳಲ್ಲೂ ಅವರ ಭರವಸೆ ಇದ್ದೇ ಇರುತ್ತಿತ್ತು.

ನಾನೀಗ ಹಾಡುತ್ತಿದ್ದೇನೆ, ಅದೂ ಶಾಸ್ತ್ರೀಯವಾಗಿ. ಪತಿಯೇ ನನ್ನ ತರಬೇತುದಾರ. ನನ್ನೆಲ್ಲ ಕನಸುಗಳನ್ನು ನನಸು ಮಾಡುವ ಹಂಬಲ ಅವರದ್ದು. ಮುಂದೊಂದು ದಿನ, ಪ್ರೀತಿ, ಮದುವೆ ಎಲ್ಲವನ್ನೂ ಕಾಣುತ್ತೇನೆ ಎಂದು ನಾನೆಂದೂ ಎಣಿಸಿರಲಿಲ್ಲ. ನನ್ನೀ ಜೀವನದಲ್ಲಿ ಅತ್ಯಮೂಲ್ಯ ಎಂಬಂತಹ ಎಲ್ಲವೂ ಸಿಕ್ಕಾಗಿದೆ. ನಾನು ಧನ್ಯೆ.

***

‘ಬೀಯಿಂಗ್‌ ಯು’ ಬೆಂಗಳೂರು ಮೂಲದ ಡಿಜಿಟಲ್‌ ಮೀಡಿಯಾ ನವೋದ್ಯಮ ಕಂಪನಿ. 2017ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕಂಪನಿ ಜನಸಾಮಾನ್ಯರು, ಅದರಲ್ಲೂ ಮಹಿಳೆ ಯರ ಯಶೋಗಾಥೆಗಳನ್ನು ಕಟ್ಟಿಕೊಡುತ್ತದೆ. ‘ಪ್ರಜಾವಾಣಿ’ಗಾಗಿ ಹಾಯಿದೋಣಿಯ ಈ ಕಥೆಗಳನ್ನು ‘ಬೀಯಿಂಗ್ ಯು’ ಕಟ್ಟಿಕೊಡುತ್ತಿದೆ...

ಇಮೇಲ್‌: beingyou17@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.