ADVERTISEMENT

ಸ್ವಮರುಕದಿಂದ ಮುಕ್ತಿಪಡೆದ ಕ್ಷಣ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 20:00 IST
Last Updated 11 ಏಪ್ರಿಲ್ 2020, 20:00 IST
ದೀಪಕ್‌
ದೀಪಕ್‌   

2014ರ ಮೇ 6, ಬೆಳಿಗ್ಗೆ 7ರ ಸಮಯ. ಕಾಲೇಜಿಗೆ ಹೋಗಲು ಸ್ನೇಹಿತನ ಜತೆಗೆ ರೈಲು ಹತ್ತಿದ್ದೆ. ರೈಲಿನಲ್ಲಿದ್ದ ವೃದ್ಧೆಯೊಬ್ಬರು ನೀರು ತಂದುಕೊಡುವಂತೆ ಕೇಳಿದರು. ನಾನು ಕೆಳಗಿಳಿದು, ನೀರಿನ ಎರಡು ಬಾಟಲ್‌ಗಳೊಂದಿಗೆ ಮರಳಿ ರೈಲಿನತ್ತ ಬರುತ್ತಿದ್ದೆ. ರೈಲು ಚಲಿಸಲು ಆರಂಭಿಸಿದ್ದು ನನ್ನ ಗಮನಕ್ಕೆ ಬಂದಿತ್ತು. ಆನಂತರ ಎಲ್ಲವೂ ಮಸುಕಾಯಿತು. ರೈಲು ಹತ್ತಲು ಪ್ರಯತ್ನಿಸಿದ್ದ ನಾನು ಜಾರಿ ಕೆಳಗೆ ಬಿದ್ದಿದ್ದೆ. ಹಿಂದಿನ ಬೋಗಿಗೆ ನನ್ನ ಬ್ಯಾಗ್‌ ಸಿಲುಕಿದ್ದರಿಂದ ಸ್ವಲ್ಪ ದೂರದವರೆಗೂ ರೈಲು ನನ್ನನ್ನು ಎಳೆದೊಯ್ದಿತು. ಪ್ಲಾಟ್‌ಫಾರ್ಮ್‌ ಮತ್ತು ರೈಲಿನ ಮಧ್ಯದ ಅಂತರದಲ್ಲಿ ನಾನು ಬಿದ್ದೆ. ರೈಲಿನ ಗಾಲಿಗಳು ನನ್ನ ಎಡಗಾಲಿನ ಮೇಲೆ ಚಲಿಸಿದವು. ಮಂಡಿಯ ಕೆಳಭಾಗವು ಕಾಲಿನಿಂದ ಪ್ರತ್ಯೇಕಗೊಂಡಿತು. ಇದನ್ನು ಗಮನಿಸಿದ ಗಾರ್ಡ್‌, ರೈಲಿನ ಚೈನ್‌ ಎಳೆದ.

ಜನರು ಫೋಟೊ, ವಿಡಿಯೊ ತೆಗೆಯಲು ಆರಂಭಿಸಿದರು. ಸ್ನೇಹಿತನೊಬ್ಬ ನನ್ನನ್ನು ಎತ್ತಿ ಪ್ಲಾಟ್‌ಫಾರ್ಮ್‌ ಮೇಲೆ ತಂದ. ಆಂಬುಲೆನ್ಸ್‌ ಕರೆಸಿದ ಮತ್ತು ಮುರಿದು ಬಿದ್ದಿದ್ದ ನನ್ನ ಕಾಲನ್ನೂ ಆಯ್ದು ತಂದ. ಇಂಥ ಆಪಘಾತಕ್ಕೆ ಸರಿಯಾಗಿ ಚಿಕಿತ್ಸೆ ಸ್ಥಳೀಯ ಆಸ್ಪತ್ರೆಯಲ್ಲಿ ಲಭ್ಯವಿರಲಿಲ್ಲ. ಆದ್ದರಿಂದ ನಾನು ಚಂಡೀಗಡಕ್ಕೆ ಹೋದೆ. ಆಸ್ಪತ್ರೆ ತಲುಪಿದಾಗ ಗಂಟೆ 9 ಆಗಿತ್ತು. ನಾನು ಅರೆಪ್ರಜ್ಞಾವಸ್ಥೆಯಲ್ಲಿದ್ದೆ. ‘ಕಾಲಿಗೆ ತುಂಬ ಹಾನಿಯಾಗಿದ್ದು ಪುನಃ ಜೋಡಿಸಲಾಗದು’ ಎಂದರು ವೈದ್ಯರು.

ಮರುದಿನ ಸೊಂಟದ ಕೆಳಗಿನ ಸ್ವಲ್ಪ ಭಾಗವನ್ನು ಕತ್ತರಿಸಬೇಕಾಯಿತು. ನನ್ನ ಕುಟುಂಬದವರು ಆಘಾತಕ್ಕೆ ಒಳಗಾಗಿದ್ದರು. ಎರಡು ತಿಂಗಳ ಕಾಲ ನಾನು ಹಾಸಿಗೆಯಲ್ಲೇ ನರಳಾಡಿದೆ. ಆಗ ನನಗೆ 18 ವರ್ಷ ವಯಸ್ಸು. ಜುಲೈ ತಿಂಗಳಲ್ಲಿ ತಂದೆಯು ನನಗಾಗಿ ಊರುಗೋಲುಗಳನ್ನು ತರಿಸಿದರು. ಆದರೆ ನಾನು ಅವುಗಳನ್ನು ಮುಟ್ಟಲೂ ನಿರಾಕರಿಸಿದೆ. ನನಗೆ ಅವುಗಳ ಅಗತ್ಯವಿದೆ ಎಂಬುದು ಸ್ವಲ್ಪ ಸಮಯದಲ್ಲೇ ಅರ್ಥವಾಯಿತು.

ADVERTISEMENT

ಮೂರು ತಿಂಗಳ ಬಳಿಕ ನಾನು ಕಾಲೇಜ್‌ಗೆ ಹೋಗಲಾರಂಭಿಸಿದೆ. ಆದರೆ ವಿದ್ಯಾರ್ಥಿಗಳು ನನ್ನನ್ನು ನಿರ್ಲಕ್ಷಿಸುತ್ತಿದ್ದರು. ನೆಪಗಳನ್ನು ಹೇಳಿ ಕ್ಲಾಸ್‌ಗಳಿಂದ ದೂರ ಉಳಿಯಲಾರಂಭಿಸಿದೆ. ಖಿನ್ನತೆಗೆ ಒಳಗಾದೆ. ಸಾಮಾನ್ಯರಂತೆ ಕಾಣಿಸುವ ಸಲುವಾಗಿ ಕೃತಕ ಕಾಲು ಅಳವಡಿಸಲು ಇಚ್ಛಿಸಿದೆ. ನನ್ನ ಅಪ್ಪ ಸರ್ಕಾರಿ ಕಾಲೇಜಿನಲ್ಲಿ ಮಾಲಿಯಾಗಿದ್ದರು. ಹೇಗೋ ಕೃತಕ ಕಾಲು ಕೊಡಿಸಿದರು. ಒಂದು ವರ್ಷದ ಬಳಿಕ ನಾನು ನನ್ನ ಕಾಲುಗಳ ಮೇಲೆ ಓಡಾಡಲಾರಂಭಿಸಿ, ಸ್ವತಂತ್ರನಾದೆ. ಆದರೆ, ಸತತವಾಗಿ ಕೆಲವು ಗಂಟೆಗಳ ಕಾಲ ನಡೆಯಲು ಸಾಧ್ಯವಾಗದು ಎಂಬುದು ಸ್ವಲ್ಪ ಸಮಯದಲ್ಲೇ ಮನವರಿಕೆಯಾಯಿತು. ಕಾಲು ಜೋಡಿಸಿದ ಭಾಗದಲ್ಲಿ ನೋವು ಕಾಣಿಸುತ್ತಿತ್ತು. ಮತ್ತೆ ನಾನು ಊರುಗೋಲುಗಳ ಆಸರೆ ಪಡೆದೆ.

ಅದೊಂದು ದಿನ ಇನ್‌ಸ್ಟಾಗ್ರಾಂನಲ್ಲಿ ಅಂಗವಿಕಲ ಮಾಡೆಲ್‌ ಒಬ್ಬರ ಪ್ರೊಫೈಲ್‌ ಅನ್ನು ನೋಡಿದೆ. ಆತ ಒಂದು ಕಾಲನ್ನು ಕಳೆದುಕೊಂಡಿದ್ದರೂ, ಒಂದೇ ಕಾಲಿನಲ್ಲಿ ನಡೆಯುತ್ತಿದ್ದ. ‘ಅವರು ಮಾಡಬಹುದಾದರೆ ನಾನೂ ಮಾಡಬಹುದು’ ಎಂಬ ನಿರ್ಧಾರಕ್ಕೆ ಬಂದೆ. ಅದು ನನ್ನ ಜೀವನ ಬದಲಿಸಿತು.

ಈಗ ಏನನ್ನೂ ನಾನು ಮುಚ್ಚಿಡುವುದಿಲ್ಲ. ಊರುಗೋಲುಗಳ ಬಗ್ಗೆ ನನಗೆ ನಾಚಿಕೆ ಇಲ್ಲ. ಕ್ರಿಕೆಟ್‌, ಬ್ಯಾಸ್ಕೆಟ್‌ಬಾಲ್‌ ಆಡುವುದನ್ನು, ಬೈಕ್‌ ಸವಾರಿ ಮಾಡುವುದನ್ನು ಕಲಿತೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕು ಎಂಬುದು ನನ್ನ ಕನಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.