ADVERTISEMENT

ಹೆಲಿ ಟ್ಯಾಕ್ಸಿ ಸದ್ಯಕ್ಕೆ ಅನುಮಾನ!

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 12:55 IST
Last Updated 15 ಜೂನ್ 2019, 12:55 IST
ಹೆಲಿ ಟ್ಯಾಕ್ಸಿ
ಹೆಲಿ ಟ್ಯಾಕ್ಸಿ   

ವಿಮಾನ ನಿಲ್ದಾಣದ ಮೂಲಸೌಕರ್ಯ ಅಭಿವೃದ್ಧಿ ಮತ್ತು ರಸ್ತೆ ವಿಸ್ತರಣೆ ಕಾಮಗಾರಿ ಕಾರಣದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎಲೆಕ್ಟ್ರಾನಿಕ್‌ ಸಿಟಿ ಮಧ್ಯೆ ಹಾರುತ್ತಿದ್ದ ಹೆಲಿ ಟ್ಯಾಕ್ಸಿ ತಾತ್ಕಾಲಿಕವಾಗಿಸೇವೆ ಸ್ಥಗಿತಗೊಳಿಸಿ ತಿಂಗಳಾಗಿದೆ.

ವಿಮಾನ ನಿಲ್ದಾಣದ ಚತುಷ್ಫಥ ರಸ್ತೆಯನ್ನು ಹತ್ತು ಮಾರ್ಗಗಳಿಗೆ ವಿಸ್ತರಿಸುವ ಕಾಮಗಾರಿ ಜೂನ್‌ 10ರಿಂದ ಆರಂಭವಾಗಿದ್ದು, ವಿಮಾನ ನಿಲ್ದಾಣದ ಮುಖ್ಯರಸ್ತೆಯನ್ನು ಎರಡು ವರ್ಷಗಳ ಮಟ್ಟಿಗೆ ಮುಚ್ಚಲಾಗಿದೆ. ಪ್ರಯಾಣಿಕರ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ವಿಮಾನ ನಿಲ್ದಾಣದಲ್ಲಿ ಹೆಲಿ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಪರ್ಯಾಯ ವ್ಯವಸ್ಥೆ (ಹೆಲಿಪ್ಯಾಡ್‌) ಕಲ್ಪಿಸದ ಕಾರಣ ಒಂದುತಿಂಗಳಿಂದ (ಮೇ 15ರಿಂದ) ಹೆಲಿಕಾಪ್ಟರ್‌ ಟ್ಯಾಕ್ಸಿಗಳು ಹಾರಾಟ ಸ್ಥಗಿತಗೊಳಿಸಿವೆ.ಸದ್ಯದಲ್ಲಿ ಈ ಸೇವೆ ಆರಂಭವಾಗುವುದು ಕೂಡ ಅನುಮಾನ ಎಂದು ಹೇಳಲಾಗುತ್ತಿದೆ.

ADVERTISEMENT

‘ಆದಷ್ಟೂ ಬೇಗ ಪರ್ಯಾಯ ವ್ಯವಸ್ಥೆ ಮಾಡುವಂತೆಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ಗೆ (ಬಿಐಎಎಲ್‌) ಮನವಿ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಹೆಲಿಪ್ಯಾಡ್‌ಗೆ ಬೇರೆ ಕಡೆ ಜಾಗ ಒದಗಿಸಿದರೆಆದಷ್ಟೂ ಬೇಗಸೇವೆಯನ್ನು ಪುನರ್ ಆರಂಭಿಸಲು ಸಿದ್ಧಸಿದ್ಧ’ ಎಂದು ಹೆಲಿ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಸಂಸ್ಥೆಗಳು ಹೇಳುತ್ತವೆ.

ವಿಮಾನ ನಿಲ್ದಾಣದಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಹೆಲಿ ಟ್ಯಾಕ್ಸಿ ಸೇವೆ ಸ್ಥಗಿತಗೊಂಡಿದೆ. ಸದ್ಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗಮನ ಕೇಂದ್ರೀಕರಿಸಿರುವುದರಿಂದ ಪರ್ಯಾಯ ಹೆಲಿಪ್ಯಾಡ್‌ ಒದಗಿಸುವ ಬಗ್ಗೆಸದ್ಯಕ್ಕೆಯಾವುದೇ ಯೋಚನೆ ಮಾಡಿಲ್ಲಎಂದು ಕೆಂಪೇಗೌಡ ವಿಮಾನ ನಿಲ್ದಾಣ ಸ್ಪಷ್ಟಪಡಿಸಿದೆ.

ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಸ್ವಂತ ಹೆಲಿಪ್ಯಾಡ್‌ ಹೊಂದಿರುವಕೇರಳ ಮೂಲದ ಥಂಬಿ ಏವಿಯೇಷನ್‌ ಪ್ರೈವೇಟ್‌ ಲಿಮಿಟೆಡ್‌ನ ಒಂದು ಹೆಲಿಕಾಪ್ಟರ್‌ ಟ್ಯಾಕ್ಸಿ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್‌ ಸಿಟಿ ನಡುವೆ ಹಾರಾಡುತ್ತಿತ್ತು. ಇದೇ ಸಂಸ್ಥೆಯ ಹೆಲಿ ಟ್ಯಾಕ್ಸಿಗಳು ಕೇದಾರನಾಥದಲ್ಲೂ ಯಾತ್ರಿಗಳನ್ನು ಕೊಂಡೊಯ್ಯುತ್ತವೆ. ಈ ಸಂಸ್ಥೆ ಕೇರಳ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ನಾಗಾಲ್ಯಾಂಡ್‌ನಲ್ಲೂ ಟೆಲಿ ಟ್ಯಾಕ್ಸಿ ಸೇವೆ ನೀಡುತ್ತಿವೆ.ಎಚ್‌ಎಎಲ್‌ ವಿಮಾನ ನಿಲ್ದಾಣ, ವೈಟ್‌ಫೀಲ್ಡ್‌, ವಯನಾಡ್‌, ಚಿಕ್ಕಮಗಳೂರಿಗೂ ಹೆಲಿ ಟ್ಯಾಕ್ಸಿ ಸೇವೆ ಆರಂಭಿಸುವುದಾಗಿ ಕಂಪನಿ ಕಳೆದ ವರ್ಷ ಪ್ರಕಟಿಸಿತ್ತು.

ವರ್ಷದಲ್ಲಿಯೇ ಸೇವೆ ಸ್ಥಗಿತ
ಥಂಬಿ ಏವಿಯೇಷನ್‌ ಸಂಸ್ಥೆ ಕಳೆದ ವರ್ಷ (2018ರಲ್ಲಿ) ಹೆಲಿ ಟ್ಯಾಕ್ಸಿ ಸೇವೆ ಆರಂಭಿಸಿತ್ತು.ಮಾರ್ಚ್‌ 5ರಂದು ಆರು ಸೀಟುಗಳ ಸಾಮರ್ಥ್ಯದ ಸಿಂಗಲ್‌ ಎಂಜಿನ್‌ನ ಬೆಲ್‌ 407 ಹೆಲಿಕಾಪ್ಟರ್‌ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್‌ ಸಿಟಿಯವರೆಗೆ ಮೊದಲ ಬಾರಿಗೆ ಹಾರಾಟ ಆರಂಭಿಸಿತ್ತು.

ವಿಮಾನ ನಿಲ್ದಾಣದಲ್ಲಿರುವ ಬ್ಲೂ ಡಾರ್ಟ್‌ ಕಂಪನಿಯ ದಾಸ್ತಾನು ಮಳಿಗೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬಳಿಯ ಹೆಲಿಪ್ಯಾಡ್‌ನಿಂದ ಹಾರುತ್ತಿದ್ದ ಹೆಲಿಕಾಪ್ಟರ್‌ ಎಲೆಕ್ಟ್ರಾನಿಕ್‌ ಸಿಟಿಯ ಫೇಸ್‌ 1ರಲ್ಲಿರುವ ಐಟಿಐ ಮೈದಾನದ ಸಿ–ಡಾಟ್‌ ಬಿಲ್ಡಿಂಗ್‌ ಹಿಂದೆ ಥಂಬಿ ಸಂಸ್ಥೆಯ ಹೆಲಿಪ್ಯಾಡ್‌ ತಲುಪಲು ಕೇವಲ 15 ನಿಮಿಷ ತೆಗೆದುಕೊಳ್ಳುತ್ತಿತ್ತು. ವಿಪರೀತ ದಟ್ಟನೆಯಿಂದ ಕೂಡಿರುವ ರಸ್ತೆಯ ಮೂಲಕ ಈ ದೂರ ಕ್ರಮಿಸಲು ಕನಿಷ್ಠ ಎರಡು ತಾಸು ಬೇಕಾಗುತ್ತದೆ.

ಸಮಯ ಉಳಿತಾಯದ ದೃಷ್ಟಿಯಿಂದ ಉದ್ಯಮಿಗಳು, ಐ.ಟಿ, ಬಿ.ಟಿ ಉದ್ಯಮಿಗಳು, ಕಾರ್ಪೊರೇಟ್‌ ಉದ್ಯೋಗಿಗಳು ಈ ಸೇವೆಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಥಂಬಿ ಕಂಪನಿ ಅವರಿಗೆ ಶುಲ್ಕದಲ್ಲಿ ಒಂದು ಸಾವಿರ ರೂಪಾಯಿ ರಿಯಾಯ್ತಿ ಕೂಡ ನೀಡಿತ್ತು.

ಬೆಳಿಗ್ಗೆ 6.30 ರಿಂದ 9.45 ಮತ್ತು ಮಧ್ಯಾಹ್ನ3.15 ರಿಂದ 6 ಗಂಟೆ... ಹೀಗೆ ಎರಡು ಶಿಫ್ಟ್‌ಗಳಲ್ಲಿ ಹಾರಾಡುತ್ತಿದ್ದ ಹೆಲಿ ಟ್ಯಾಕ್ಸಿ ಸಾಮಾನ್ಯವಾಗಿ₹4,130 ಶುಲ್ಕ ವಿಧಿಸುತ್ತಿತ್ತು.

ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಗೆವರೆಗೆ ಬೇರೆಯವರು ಹೆಲಿಕಾಪ್ಟರ್‌ ಬಾಡಿಗೆ ಪಡೆಯ ಬಹುದಿತ್ತು. ₹35,400 ಬಾಡಿಗೆ ನಿಗದಿ ಮಾಡಿತ್ತು.

ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್‌ ಸಿಟಿಗೆ ಹೋಗಲು ನಾಲ್ಕು ತಾಸು ಮೊದಲು ಸೀಟು ಕಾಯ್ದಿರಸಬೇಕಿತ್ತು. ಎಲೆಕ್ಟ್ರಾನಿಕ್‌ ಸಿಟಿಯಿಂದ ಹೊರಡಬೇಕಾದರೆ ಒಂದು ತಾಸು ಮೊದಲು ಬುಕ್ಕಿಂಗ್‌ ಮಾಡಬೇಕಿತ್ತು. ಇದಕ್ಕಾಗಿ ಆ್ಯಪ್‌ ರೂಪಿಸಲಾಗಿತ್ತು.

‘ಸಣ್ಣ ಟ್ರಿಪ್‌ಗಳಿಂದ ಹೆಚ್ಚಿನ ಲಾಭವಾಗುವುದಿಲ್ಲ. ಹೆಲಿ ಟ್ಯಾಕ್ಸಿ ಬದಲು ಹೆಲಿಕಾಪ್ಟರ್‌ಗಳನ್ನು ಬಾಡಿಗೆ ನೀಡುತ್ತೇವೆ’ ಎನ್ನುತ್ತಾರೆ ಏರ್‌ ಚಾರ್ಟರ್‌ ಕಂಪನಿ ಅಧಿಕಾರಿಗಳು.

ವಿಮಾನ ನಿಲ್ದಾಣದಲ್ಲಿ ಅಂಬುಲೆನ್ಸ್‌ ಸೇವೆ
ಪ್ರಯಾಣಿಕರಿಗೆ ತುರ್ತು ಸೇವೆ ಒದಗಿಸಲು ವಿಮಾನ ನಿಲ್ದಾಣದಲ್ಲಿ ಒಳಾಂಗಣ ಅಂಬುಲೆನ್ಸ್‌ ಸೇವೆ ಆರಂಭಿಸಲಾಗಿದೆ. ಬ್ಯಾಟರಿ ಚಾಲಿತ ಸುಸಜ್ಜಿತ ಎರಡು ಅಂಬುಲೆನ್ಸ್‌ ವಾಹನಗಳು ಅತ್ಯಾಧುನಿಕ ಸೌಕರ್ಯ ಹೊಂದಿವೆ.ಆಕ್ಸಿಜೆನ್‌ ಸಿಲಿಂಡರ್, ತುರ್ತು ವೈದ್ಯಕೀಯ ಚಿಕಿತ್ಸೆ ಉಪಕರಣ, ಔಷಧಗಳ ಕಿಟ್‌ ಮತ್ತು ತರಬೇತಿ ಪಡೆದ ಸಿಬ್ಬಂದಿ ಈ ವಾಹನಗಳಲ್ಲಿರುತ್ತಾರೆ.

ಅಸ್ಟರ್‌ ಹಾಸ್ಪಿಟಲ್‌ ಸಹಯೋಗದಲ್ಲಿ ವಿಮಾನ ನಿಲ್ದಾಣ ಈ ಸೇವೆ ಆರಂಭಿಸಿದೆ. ವಿಮಾನ ನಿಲ್ದಾಣದ ಆವರಣದಲ್ಲಿರುವ ಆಸ್ಪತ್ರೆಯಲ್ಲಿ ತರಬೇತಿ ಪಡೆದ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡುತ್ತಾರೆ. ದೇಶಿ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ 24x7 ಅಂಬುಲೆನ್ಸ್‌ ಸೇವೆ ಲಭ್ಯವಿರುತ್ತದೆ.

‘ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ವೈದ್ಯಕೀಯ ಸೇವೆ ಒದಗಿಸಲು ಅಂಬುಲೆನ್ಸ್‌ ಸೇವೆ ಆರಂಭಿಸಲಾಗಿದೆ. ವಿಮಾನಗಳಿಂದಲೇ ಪ್ರಯಾಣಿಕರನ್ನು ಅಂಬುಲೆನ್ಸ್‌ ನೇರವಾಗಿ ಆವರಣದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗುವುದು. ಆ ಅವಧಿಯಲ್ಲಿಯೇ ಅಗತ್ಯ ತುರ್ತು ಚಿಕಿತ್ಸೆ ನೀಡಲಾಗುವುದು’ ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹೇಳಿದೆ.

ಕನಸಾಗಿಯೇ ಉಳಿದ 90 ಹೆಲಿಪ್ಯಾಡ್‌
ಸರ್ಕಾರ ಕೂಡ ನಗರದಲ್ಲಿ 90 ಹೆಲಿಪ್ಯಾಡ್‌ಗಳನ್ನು ನಿರ್ಮಿಸುವುದಾಗಿ ಘೋಷಿಸಿತ್ತು. ಆದರೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಇದುವರೆಗೂ ರೆಸಿಡೆನ್ಸಿ ರಸ್ತೆಯಲ್ಲಿರುವ ಐಟಿಸಿ ರಾಯಲ್‌ ಗಾರ್ಡೇನಿಯಾ ಹೆಲಿಪ್ಯಾಡ್‌ ಬಳಸಲು ಮಾತ್ರ ಅನುಮತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.