ADVERTISEMENT

‘ಹೀರೊ ಮಟಿರಿಯಲ್‌’ನೊಂದಿಗೆ ಒಂದೆರಡು ಮಾತು

ಜಗದೀಶ ಅಂಗಡಿ
Published 20 ಮಾರ್ಚ್ 2019, 20:15 IST
Last Updated 20 ಮಾರ್ಚ್ 2019, 20:15 IST
ಠಾಕೂರ್ ಅನೂಪ್ ಸಿಂಗ್
ಠಾಕೂರ್ ಅನೂಪ್ ಸಿಂಗ್   

ನೀವು ‘ಹೀರೊ ಮಟಿರಿಯಲ್’ ಕಣ್ರೀ.. ಎಂದಾಗ ಅವರ ಪ್ರತಿಕ್ರಿಯೆ ಒಂದು ನಸುನಗು. ಎಲ್ರೂ ಹಾಗೆಯೇ ಹೇಳುತ್ತಾರೆ. ಕನ್ನಡದ ಜನತೆ ನನ್ನಲ್ಲಿ ಒಬ್ಬ ‘ಹೀರೊ ಮಟಿರಿಯಲ್’ ಕಂಡಿದ್ದಾರೆಂದರೇ ಅದು ನಿಜವೇ ಇರಬೇಕು. ‘ಉದ್ಘರ್ಷ’ ಇದ್ದೇ ಇದೆಯಲ್ಲ?

ನಿಜಕ್ಕೂ ಅದು ನೋಡಿಸಿಕೊಂಡು ಹೋಗುವ ಚಿತ್ರವಾ?

ನನ್ನಪ್ಪ ವಕೀಲ. ಅಮ್ಮ ಹೋಂ ಮೇಕರ್. ಸಿನಿಮಾ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ಅಪ್ಪ ಒಂದು ಕ್ಷಣ ಮೊಬೈಲ್ ಬಿಟ್ಟಿರಲಾರ. ಉದ್ಘರ್ಷ ತೋರಿಸಿದೆ. ಎರಡು ತಾಸು ಕೂತಲ್ಲೇ ಕೂತು, ಮೊಬೈಲ್ ಬದಿಗಿಟ್ಟು, ನೆಟ್ಟ ದೃಷ್ಟಿ ತೆಗೆಯದೆ ನೋಡಿದ. ಎಂಥ ಸಿನಿಮಾ ಮಾರಾಯ ಇದು! ಇಂತಹ ಸಿನಿಮಾದಲ್ಲಿ ನಟಿಸಿದ ನೀನು ಧನ್ಯ ಎಂದ.ನನ್ನಪ್ಪ-ಅಮ್ಮ ಹಾಗೆ ಹೇಳಬೇಕಾದರೆ ಉದ್ಘರ್ಷ ಚೆನ್ನಾಗಿ ಇರಲೇಬೇಕು. ಅಲ್ವಾ?

ADVERTISEMENT

ಅಂದ್ರೆ ಠಾಕೂರ್ ಅನೂಪ್ ಸಿಂಗ್ ತುಂಬಾ ಹಾರ್ಡ್ ವರ್ಕ್ ಮಾಡಿದ್ದಾರೆ ಅಂದ್ಕೋಬೇಕಾ?

ಬಹಳ ಕಲಾವಿದರಿಗೆ ಹಾರ್ಡ್ ವರ್ಕ್ ಬಗ್ಗೆ ಏನೇನೋ ಕಲ್ಪನೆಗಳಿದ್ದಂತಿದೆ. ಪವನ್ ಕಲ್ಯಾಣ್, ರಣಬೀರ್ ಕಪೂರ್, ಪ್ರಭಾಸ್, ಸುದೀಪ್, ದರ್ಶನ್. ಇವರನ್ನೆಲ್ಲ ನೋಡುತ್ತ, ಅವರನ್ನು ಫಾಲೋ ಮಾಡುತ್ತ ಬೆಳೆದವ ನಾನು. ಸೆಟ್‌ನಲ್ಲಿ ಅವರ ಕಮಿಟ್‌ಮೆಂಟ್ ಅನಬಿಲಿವೆಬಲ್. ಉತ್ತಮ ಚಿತ್ರ ಉತ್ತಮ ಪಾತ್ರ ಬಯಸುವಂತೆ ಇದ್ದುಬಿಡುವುದೇ ನನ್ನ ಪ್ರಕಾರ ಹಾರ್ಡ್ ವರ್ಕ್. ಅಂದರೆ, ಉತ್ತಮ ಕಥೆ ಇದ್ದರೆ ಅಲ್ಲಿ ಎಲ್ಲವೂ ಉತ್ತಮವಾಗಿಯೇ ಇರುತ್ತೆ. ಸಿಕ್ಸ್ ಪ್ಯಾಕ್, ಏಯ್ಟ್ ಪ್ಯಾಕ್ ಅಥವಾ ಮೂರು ಶಿಫ್ಟ್‌ಗಳಲ್ಲಿ ನಟಿಸುವುದು ಹಾರ್ಡ್ ವರ್ಕ್ ಆಗಲಾರದು.

ಸ್ವಲ್ಪ ವಿವರಿಸಿ ಹೇಳಿದ್ರೆ ಚೆನ್ನಾಗಿತ್ತೇನೋ?

ಖಂಡಿತ. ಉದ್ಘರ್ಷ ಒಂದೊಳ್ಳೆ ಕಥೆ. ಅಲ್ಲಿ ಖಳ, ನಾಯಕನಿಗಿಂತ ಬಲಿಷ್ಠ. ಅಂತಹ ಖಳನನ್ನು ಎತ್ತಿ ಬಿಸಾಡಬೇಕು. ಖಳ ಪಾತ್ರಧಾರಿಯ ತೂಕ 120 ಕೆಜಿ. ನನ್ನ ತೂಕ ಅದರರರ್ಧ. ಪಾತ್ರವೇ ನಾನಾಗಿ ಖಳನನ್ನು ಎತ್ತಿ ಬಿಸಾಡಿದೆ. ಕೆಲ ಕ್ಷಣದ ನಂತರ ನಾನೂ ಬಿದ್ದೆ. ಆ ಕ್ಷಣಕ್ಕೆ ನನಗಾದ ಅನುಭವ ಬೇರೆ ರೀತಿಯದ್ದು. ಖಳ ನನ್ನನ್ನು ಕಾರಿನತ್ತ ಎಸೆಯಬೇಕು. ಆತ ಎಸೆದ. ನಾನು ಕಾರಿನ ಗ್ಲಾಸ್ ಮೇಲೆ ಬಿದ್ದೆ. ಗ್ಲಾಸ್ ಚೂರುಚೂರಾಗಿ ಕಾರಿನ ಓಳಗಡೆಯೇ ಬಿದ್ದೆ. ಕೈತುಂಬಾ ಗಾಯ. ಬ್ಯಾಂಡೇಜ್ ಕಟ್ಟಿದೆ. ನಟನೆ ಮುಂದುವರಿಯಿತು. ಇವು ಕಥೆಗೆ ಬೇಕಿದ್ದವು. ನೈಜವಾಗಿಯೇ ಚಿತ್ರೀಕರಿಸಿದೆವು. ಅದು ನಿಜವಾದ ಹಾಡ್ ವರ್ಕ್. ಅದು ಸಾಧ್ಯವಾಗಿದ್ದು ಸುನೀಲ್ ಕುಮಾರ ದೇಸಾಯಿ ಅವರಂಥ ಟಾಸ್ಕ್ ಮಾಸ್ಟರ್ ಇದ್ದುದ್ದರಿಂದ.

ಅಂದರೆ ನಿಮ್ಮದೊಂದು ಕಮಿಟೆಡ್ ಎಫರ್ಟ್ ಅನ್ನಬಹುದಾ?

ಮಡಿಕೇರಿಯಲ್ಲಿ ಚಿತ್ರಕ್ಕಾಗಿ ಸೆಟ್ ಹಾಕಿದ್ದೆವು. ಕಂಡರಿಯದ ಮಳೆಗೆ ಅದೆಲ್ಲವೂ ಕೊಚ್ಚಿ ಹೋಯಿತು. ಸೆಟ್‌ನ ಯಾವ ಕುರುಹು ಇರಲೇ ಇಲ್ಲ. ಮಡಿಕೇರಿಯ ಆ ಸೆಟ್ ಕಥೆಗೆ ಅತ್ಯಂತ ಪೂರಕ. ನಾಲ್ಕಾರು ತಿಂಗಳ ನಂತರ ಮತ್ತೊಂದು ಸೆಟ್ ಹಾಕಿದೆವು. ಥೇಟ್ ಅದೇ ತರಹ. ಯಾವ ಬದಲಾವಣೆಯೂ ಇಲ್ಲ. ಮಳೆಯ ಮೊದಲ ಸೆಟ್‌ನಲ್ಲಿ ಶೂಟಿಂಗ್ ಆಗಿದ್ದಿದೆ. ಮಳೆಯ ನಂತರದ ಸೆಟ್‌ನಲ್ಲೂ ಶೂಟಿಂಗ್ ಆಗಿದ್ದಿದೆ. ಆದರೆ ಸಿನಿಮಾದಲ್ಲಿ ಅದು ಗಮನಕ್ಕೆ ಬರೋದೇ ಇಲ್ಲ. ಕಮಿಟೆಡ್ ಎಫರ್ಟ್ ಅಂದ್ರೆ ಎನೂಂತ ನಿಮ್ಮ ಊಹೆಗೆ ಬಿಡುತ್ತೇನೆ.

ದೇಸಾಯಿ ಟಾಸ್ಕ್ ಮಾಸ್ಟರ್ ಅಂದ್ರಲ್ಲ? ಹಾಗಂದ್ರೆ ಎನು?

ಉದ್ಘರ್ಷ ಸುಮಾರು 120 ನಿಮಿಷದ ಚಿತ್ರ. ಇದನ್ನ ಒಟ್ಟಾರೆ 500 ಸಲ ದೇಸಾಯಿ ನೋಡಿದ್ದಾರೆ. 200 ಸಲ ಬದಲಾವಣೆ ಮಾಡಿದ್ದಾರೆ. ಅಷ್ಟು ಸಲ ನೋಡೋ, ಅಷ್ಟು ಸಲ ಬದಲಾವಣೆ ಮಾಡೋ ಪೇಷನ್ಸ್ ಯಾರಿಗಾದ್ರೂ ಇದ್ರೆ ಅವರೇ ಟಾಸ್ಕ್ ಮಾಸ್ಟರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.