ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆ ಸೇಂಟ್ ಜೋಸೆಫ್ ಬಾಲಕರ ಹೈಸ್ಕೂಲ್ ಹಳೆಯ ವಿದ್ಯಾರ್ಥಿಗಳ ಸಂಘವು ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ನಾಲ್ವರು ಹಳೆಯ ವಿದ್ಯಾರ್ಥಿಗಳ ಗೌರವಾರ್ಥ ಇದೇ 25ರಂದು ಕಾರ್ಯಕ್ರಮ ಹಮ್ಮಿಕೊಂಡಿದೆ.
ದೇಶಕ್ಕಾಗಿ ಹೋರಾಡಿ ಮಡಿದ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಕ್ಯಾಪ್ಟನ್ ಜಾನ್ ಅಲ್ಬರ್ಟ್ ಡಾಲ್ಬಿ, ಮೇಜರ್ ಉದಯ ಶಂಕರ್ ಘೋಷ್, ಮೇಜರ್ ಪಲೇಕಂದ ಅತುಲ್ ದೇವಯ್ಯ ಮತ್ತು ಮೇಜರ್ ಸಿಲ್ವಸ್ಟರ್ ರಾಜೇಶ್ ರತ್ನಂ ಅವರ ಸ್ಮರಣೆ ಕಾರ್ಯಕ್ರಮ ಸಂಜೆ 4ಕ್ಕೆ ಶಾಲೆಯ ಚಾಪೆಲ್‌ನಲ್ಲಿ ನಡೆಯಲಿದೆ. ಆರ್ಚ್ ಬಿಷಪ್ ಪೀಟರ್ ಮಚಾಡೊ ಮತ್ತು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಸಂಸದ ರಾಜೀವ್ ಗೌಡಮುಖ್ಯ ಅತಿಥಿಯಾಗಿರುತ್ತಾರೆ.
ಉದ್ಯಾನದಲ್ಲಿರುವ ಯುದ್ಧ ಸ್ಮಾರಕದ ಬಳಿ ಹುತಾತ್ಮರ ಸ್ಮರಣಾರ್ಥ ಪ್ರಾರ್ಥನೆ ಮತ್ತುಗೌರವ ಸಮರ್ಪಣೆ ನಡೆಯಲಿದೆ. ಹಾಲಿ ಮತ್ತು ನಿವೃತ್ತ ಪ್ರಾಂಶುಪಾಲರು, ಶಿಕ್ಷಕರು,ಆಡಳಿತ ಮಂಡಳಿಯ ಸದಸ್ಯರು, ಹುತಾತ್ಮ ಯೋಧರ ಕುಟುಂಬ ಸದಸ್ಯರು, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವಶಾಲೆಯ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಾರ್ಜ್ ಒಲ್ಲಪಲ್ಲಿ ತಿಳಿಸಿದ್ದಾರೆ.
ಸೇನೆಗೆ ಸೇಂಟ್ ಜೋಸೆಫ್ ಕೊಡುಗೆ
1858ರಲ್ಲಿ ಸ್ಥಾಪನೆಯಾದ ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆ ಸೇನೆಗೆ ಅತಿ ಹೆಚ್ಚು ಕೊಡುಗೆ ನೀಡಿದೆ. 1914ರಲ್ಲಿ ನಡೆದ ಮೊದಲ ಮಹಾಯುದ್ಧದಲ್ಲಿ ಬ್ರಿಟನ್ ಪರ ಹೋರಾಟಕ್ಕೆ ಬಿಸಿರಕ್ತದ ಯುವಕರ ಅಗತ್ಯವಿತ್ತು. ಮಹಾರಾಣಿಯ ಪರ ಹೋರಾಟಕ್ಕೆ ಭಾರತದಿಂದ ಅತಿ ಹೆಚ್ಚು ಯೋದರನ್ನು ಕಳಿಸಿದ ಶ್ರೇಯಸೇಂಟ್ ಜೋಸೆಫ್‌ಗೆ ಸಲ್ಲುತ್ತದೆ. ಇನ್ನೂ ಮೀಸೆ ಚಿಗುರದ ಕೇವಲ 17ರ ಹರೆಯದ ಅನೇಕ ಯುವಕರು ಸೇರಿದಂತೆ ಸೇಂಟ್ ಜೋಸೆಫ್‌ನ359 ಹಳೆಯ ವಿದ್ಯಾರ್ಥಿಗಳು ಯುದ್ಧ ಭೂಮಿಯಲ್ಲಿ ಕೆಚ್ಚೆದೆಯಿಂದ ಹೋರಾಡಿದ್ದರು.
ಆ ಪೈಕಿ ಮೊದಲ ಮಹಾಯುದ್ಧ ಕೊನೆಗೊಳ್ಳುವ ವೇಳೆಗೆ 28 ಹಳೆಯ ವಿದ್ಯಾರ್ಥಿಗಳು ಯುದ್ಧ ಭೂಮಿಯಲ್ಲಿ ಪ್ರಾಣ ತೆತ್ತಿದ್ದರು.ಅದಾದ ನಂತರ ನಡೆದ ಎರಡನೇ ಮಹಾಯುದ್ಧದಲ್ಲೂ ಎಂಟು ವಿದ್ಯಾರ್ಥಿಗಳು ಮಡಿದಿದ್ದಾರೆ. ಇದು ಸ್ವಾತಂತ್ರ್ಯ ಪೂರ್ವದ ಕಥೆಯಾದರೆ ಸ್ವಾತಂತ್ರ್ಯ ನಂತರ ನಡೆದ ಯುದ್ಧಗಳಲ್ಲಿ ಸೇಂಟ್ ಜೋಸೆಫ್ ಶಾಲೆಯ ನಾಲ್ವರು ಹಳೆಯ ವಿದ್ಯಾರ್ಥಿಗಳು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ.
1962ರಲ್ಲಿ ನಡೆದ ಇಂಡೊ–ಚೀನಾ ಯುದ್ಧದಲ್ಲಿ ಸೆಲಾ ಸೆಕ್ಟರ್‌ನ ನೆಫಾದಲ್ಲಿರುವ ಜಸ್ವಂತ್‌ಗಡದಲ್ಲಿ 5 ಫಿಲ್ಡ್ ರೆಜಿಮೆಂಟ್‌ನ ಕ್ಯಾಪ್ಟನ್ ಜಾನ್ ಅಲ್ಬರ್ಟ್ ದಾಲ್ಬಿ (1947ರ ವಿದ್ಯಾರ್ಥಿ) ಕಾಣೆಯಾಗಿದ್ದರು. 1963ರಲ್ಲಿ ಶಾಲೆಯ ವಿದ್ಯಾರ್ಥಿಯಾಗಿದ್ದ 13 ಸಿಖ್ ಲೈಟ್ ಇನ್ಫ್ರಂಟಿಯ ಮೇಜರ್ ಉದಯ ಶಂಕರ್ ಘೋಷ್ 1989ರಲ್ಲಿ ಶ್ರೀಲಂಕಾದ ಶಾಂತಿಪಾಲನಾ ಪಡೆಯಲ್ಲಿ ಹುತಾತ್ಮರಾಗಿದ್ದರು.
6 ಮರಾಠ ಲೈಟ್ ಇನ್ಫ್ರಂಟ್ರಿ ಯೋಧರ ಜತೆ ಮೇಜರ್ ಪಲೇಕಂದ ಅತುಲ್ ದೇವಯ್ಯ (1968ರ ವಿದ್ಯಾರ್ಥಿ) 1987ರಲ್ಲಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಸಂಭವಿಸಿದ ಹಿಮಕುಸಿತಕ್ಕೆ ಬಲಿಯಾಗಿದ್ದರು. ಅವರನ್ನು ರಕ್ಷಿಸಲು ಹೋದ ಭಾರತದ ಸೇನೆಯ ಮತ್ತೊಂದು ತಂಡ ಕೂಡ ಕಾಣೆಯಾಗಿತ್ತು. 1988ರಲ್ಲಿ ಶಾಲೆಯ ವಿದ್ಯಾರ್ಥಿಯಾಗಿದ್ದ ಜಾಟ್ ರೆಜಿಮೆಂಟ್‌ನ ಮೇಜರ್ ಸಿಲ್ವಸ್ಟರ್ ರಾಜೇಶ್ ರತ್ನಂ ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ವೀರಮರಣ ಅಪ್ಪಿದ್ದರು.
ಯುದ್ಧ ಸ್ಮಾರಕ ಹೊಂದಿದ ಏಕೈಕ ಶಾಲೆ
ಶಾಲೆಯ ಆವರಣದಲ್ಲಿ ಸ್ಥಾಪಿಸಲಾದ ಯುದ್ಧ ಸ್ಮಾರಕದಲ್ಲಿ ಈ ಎಲ್ಲ 36 ಹುತಾತ್ಮ ಯೋಧರ ಹೆಸರುಗಳನ್ನು ಕೆತ್ತಲಾಗಿದೆ. ಇಡೀ ದೇಶದಲ್ಲಿ ಸೇಂಟ್ ಜೋಸೆಫ್‌ನಲ್ಲಿ ಮಾತ್ರ ಯುದ್ಧ ಸ್ಮಾರಕ ಇದೆ. 1921ರಲ್ಲಿ ಈ ಯುದ್ಧ ಸ್ಮಾರಕವನ್ನು ನಿರ್ಮಿಸಲಾಗಿದೆ. ಸ್ಮಾರಕದ ಮೇಲೆ ಸೇಂಟ್ ಜೋಸೆಫ್ ಕಂಚಿನ ಪ್ರತಿಮೆ ಸ್ಥಾಪಿಸಲಾಗಿದೆ.
ಶಾಲೆ ಸ್ಥಾಪನೆಯಾಗಿ 160 ವರ್ಷಗಳು ಸಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಸಂಸ್ಥಾಪನಾ ದಿನ ಆಚರಿಸಲಾಗಿದೆ. ಹಳೆಯ ವಿದ್ಯಾರ್ಥಿಗಳ ಸಂಘ ಕೂಡ ಶತಮಾನೋತ್ಸವ ಆಚರಿಸಿಕೊಂಡಿದೆ. ಪ್ರತಿವರ್ಷ 300 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ ಎಂದು ಸಂಘದ ಗ್ರೇಗರಿ ದೆ ನಜರೆತ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.