ADVERTISEMENT

ಜ್ಞಾನದಾವರಣದಲ್ಲಿ ಒಂದು ‘ಮುಕ್ತ ದಿನ’

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)

ಸಚ್ಚಿದಾನಂದ ಕುರಗುಂದ
Published 20 ಮಾರ್ಚ್ 2019, 20:15 IST
Last Updated 20 ಮಾರ್ಚ್ 2019, 20:15 IST
ಐಐಎಸ್ಸಿ ಬೆಂಗಳೂರು
ಐಐಎಸ್ಸಿ ಬೆಂಗಳೂರು   

ವೈಜ್ಞಾನಿಕ ಕ್ಷೇತ್ರದ ಕುತೂಹಲ ತಣಿಸುವ ದಿನ ಮತ್ತೆ ಬಂದಿದೆ. ವಿಜ್ಞಾನ ಸಂಸ್ಥೆಯಲ್ಲಿ ವಿಜ್ಞಾನ ಲೋಕದ ಆವಿಷ್ಕಾರಗಳು ಅನಾವರಣಗೊಳ್ಳಲಿವೆ. ಮಕ್ಕಳ ಮನದಲ್ಲಿ ಮೂಡಿರುವ ಹತ್ತಾರು ಪ್ರಶ್ನೆಗಳಿಗೆ ಉತ್ತರ ದೊರೆಯಲಿವೆ. ವಿಜ್ಞಾನಿಗಳು, ಸಂಶೋಧಕರು ಸರಳವಾಗಿ, ಸುಲಭವಾಗಿ ಉತ್ತರ ನೀಡಲಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿನ ಸಂಶೋಧನೆಗಳು ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ಮತ್ತು ಸಾರ್ವಜನಿಕರಿಗೆ ತೆರೆದಿಡಲಾಗುತ್ತದೆ. ಜನಸಾಮಾನ್ಯರು, ವಿದ್ಯಾರ್ಥಿಗಳು, ವಿಜ್ಞಾನ ಆಸಕ್ತರಿಗೆ ಅಂದು ಮುಕ್ತ ಪ್ರವೇಶವಿದೆ.

ಐಐಎಸ್‌ಸಿ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ವರ್ಷಕ್ಕೊಮ್ಮೆ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸಾಮಾನ್ಯ ವ್ಯಕ್ತಿಗೂ ವಿಜ್ಞಾನದ ಆಶಯ ತಿಳಿಯಬೇಕು. ವೈಜ್ಞಾನಿಕ ಮನೋಧರ್ಮ ಬೆಳೆಸಬೇಕು ಎನ್ನುವ ಆಶಯವನ್ನು ಕಾರ್ಯಕ್ರಮ ಹೊಂದಿದೆ. ವೈಜ್ಞಾನಿಕ ಕ್ಷೇತ್ರದ ಸಂಶೋಧನೆಗಳು ಜನಸಾಮಾನ್ಯರಿಗೆ ಯಾವ ರೀತಿ ಅನುಕೂಲವಾಗುತ್ತಿವೆ ಎನ್ನುವುದನ್ನು ಪರಿಚಯಿಸಲಾಗುತ್ತಿದೆ.

ADVERTISEMENT

ಉಪನ್ಯಾಸ, ಪ್ರಾತ್ಯಕ್ಷಿಕೆಗಳು, ರಸಪ್ರಶ್ನೆಗಳು, ವೈಜ್ಞಾನಿಕ ಸ್ಪರ್ಧೆಗಳು, ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ‘ಕಿಡ್ಸ್‌ ಝೋನ್’ ವಿಶೇಷ ಆಕರ್ಷಕ ಕೇಂದ್ರವಾಗಲಿದೆ. ಆಸಕ್ತರು ಸಂಸ್ಥೆಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧಕರ ಜತೆ ಸಮಾಲೋಚನೆ ನಡೆಸಲು ಸಹ ಅವಕಾಶವಿದೆ. ವೈಜ್ಞಾನಿಕ ಕ್ಷೇತ್ರದಲ್ಲೂ ವಿಪುಲ ಅವಕಾಶಗಳಿವೆ ಎಂಬುದನ್ನು ಮನದಟ್ಟು ಮಾಡಲು ಇಂತಹ ಉತ್ಸವಗಳ ಮೂಲಕ ಪ್ರಯತ್ನ ಮಾಡಲಾಗುತ್ತಿದೆ. ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವ ಆಶಯ ಕೂಡ ಹೌದು.

‘ಸಂಶೋಧನಾ ಸಂಸ್ಕೃತಿ’ ತಿಳಿದುಕೊಳ್ಳಲು ಇಲ್ಲಿ ಅವಕಾಶವಿದೆ. ರಸಪ್ರಶ್ನೆಗಳು, ಯಂತ್ರಗಳ ಕಲಿಕೆ ಆಧಾರಿತ ಪ್ರೊಗ್ರಾಮಿಂಗ್‌ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿದೆ. ಸ್ಪರ್ಧೆಗಳಲ್ಲಿ ಗೆದ್ದವರಿಗೆ ಆಕರ್ಷಕ ಬಹುಮಾನವಿದೆ.

ಕಂಪ್ಯೂಟರ್‌ ಸೈನ್ಸ್‌ ಮತ್ತು ಅಟೋಮೆಷನ್‌ ವಿಭಾಗದಲ್ಲಿ ‘ಗೇಮ್‌ ಆಫ್‌ ಕೋಡ್ಸ್‌’, ‘ಬೆಟ್‌ ಟು ಕೋಡ್‌’ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಜ್ಞಾನ ಆಸಕ್ತರ ಜಾಣತನವನ್ನು ಇಲ್ಲಿ ಒಂದು ರೀತಿ ಪರೀಕ್ಷೆಗೊಡ್ಡಲಾಗುತ್ತಿದೆ.

ಎಲೆಕ್ಟ್ರಾನಿಕ್ಸ್‌ ಜಗತ್ತಿನ ಆಳ ಅಗಲ ತಿಳಿದುಕೊಳ್ಳುವುದಕ್ಕೆ ಇದೊಂದು ಉತ್ತಮ ಅವಕಾಶ. ಸಿಗ್ನಲ್‌ ಪ್ರೊಸೆಸಿಂಗ್‌, ಫೋಟೊನಿಕ್ಸ್‌, ನೆಟ್‌ವರ್ಕ್ಸ್‌, ಇಮೇಜ್‌ ಪ್ರೊಸೆಸಿಂಗ್‌ ಮುಂತಾದ ಕೌತುಕಗಳ ಬಗ್ಗೆ ತಿಳಿಯಲು ಎಲೆಕ್ಟ್ರಿಕಲ್‌ ಕಮ್ಯೂನಿಕೇಷನ್‌ ಎಂಜಿನಿಯರಿಂಗ್‌ ವಿಭಾಗಕ್ಕೆ ಭೇಟಿ ನೀಡಬಹುದು. ಒಟ್ಟಿನಲ್ಲಿ ಎಲ್ಲ ವಿಭಾಗಗಳು ವಿಜ್ಞಾನ ಆಸಕ್ತರ ಕುತೂಹಲ ತಣಿಸಲು ಸಜ್ಜಾಗಿವೆ.

ರೊಬೊಟ್‌ಗಳು ಮತ್ತು ಡ್ರೋನ್‌ಗಳ ಬಗ್ಗೆ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ.

440 ಎಕರೆ ಪ್ರದೇಶದ ಹಸಿರು ತಾಣದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡುವುದೇ ಮುದ ನೀಡುತ್ತದೆ. ತಂಪನೆಯ ವಾತಾವರಣದಲ್ಲಿ ಪಕ್ಷಿಗಳ ಕಲರವದ ನಡುವೆ ಮನಸ್ಸನ್ನು ವೈಜ್ಞಾನಿಕ ಚಿಂತನೆಯತ್ತ ಸೆಳೆದೊಯ್ಯುತ್ತದೆ.

ನೋಂದಣಿಗೆ ಮತ್ತು ಹೆಚ್ಚಿನ ಮಾಹಿತಿಗೆ https://openday.iisc.ac.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಮಕ್ಕಳಿಗೆ ವಿಶೇಷ ಏನು?

ಮಕ್ಕಳಿಗಾಗಿ ‘ಕಿಡ್ಸ್‌ ಝೋನ್‌’ ಕಾರ್ಯಕ್ರಮ ರೂಪಿಸಲಾಗಿದೆ. ಐಐಎಸ್ಸಿ ವಿದ್ಯಾರ್ಥಿಗಳು ರೂಪಿಸಿರುವ ಪ್ರಯೋಗಗಳು ಮಕ್ಕಳನ್ನು ಆಕರ್ಷಿಸಲಿವೆ. ಪ್ರತಿ ವರ್ಷ ಇದು ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ. ಶಾಲಾ ಮಟ್ಟದ ವಿಜ್ಞಾನ ಪ್ರಯೋಗಗಳನ್ನು ಇಲ್ಲಿ ಸರಳವಾಗಿ ಪ್ರದರ್ಶಿಸಲಾಗುತ್ತದೆ. ಅದರಲ್ಲೂ 6ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಕೊಂಡು ಈ ಕಾರ್ಯಕ್ರಮ ರೂಪಿಸಲಾಗಿದೆ. ಮಕ್ಕಳಲ್ಲಿ ವೈಜ್ಞಾನಿಕ ಸಂಗತಿಗಳ ಬಗ್ಗೆ ಕುತೂಹಲ ಮೂಡಿಸುವ ನಿಟ್ಟಿನಲ್ಲಿ ಇಲ್ಲಿ ವಿಭಿನ್ನ ಮತ್ತು ವಿಶೇಷ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಗುತ್ತಿದೆ. ವಿಜ್ಞಾನದ ಮನರಂಜನೆ ಮತ್ತು ಜ್ಞಾನದ ಹಸಿವಿರುವ ಮಕ್ಕಳು ಭೇಟಿ ನೀಡಲೇಬೇಕಾದ ತಾಣವಿದು. ಚೋಕ್ಸಿ ಹಾಲ್‌ ಎದುರಿನ ಹಳೆ ಏರೋಸ್ಪೇಸ್‌ ಕಟ್ಟಡದಲ್ಲಿ ‘ಕಿಡ್ಸ್‌ ಝೋನ್‌’ ಆಯೋಜಿಸಲಾಗಿದೆ.

ವಾಹನ ಪಾರ್ಕಿಂಗ್‌ ಎಲ್ಲಿ?

ಎರಡು ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ವಾಹನಗಳಿಗೆ ಐಐಎಸ್ಸಿ ಆವರಣದ ಒಳಗೆ ಪ್ರವೇಶ ಇಲ್ಲ.
ಸರ್ಕಲ್‌ ಮಾರಮ್ಮ ದೇವಸ್ಥಾನ ಬಳಿಯ ಮಲ್ಲೇಶ್ವರದ ಮೈದಾನದಲ್ಲಿ (18ನೇ ಕ್ರಾಸ್‌) ಮತ್ತು ಐಐಎಸ್ಸಿ ಜಿಮಖಾನಾದಲ್ಲಿ ವಾಹನಗಳಿಗೆ ವ್ಯವಸ್ಥೆ ಮಾಡಲಾಗಿದೆ. ದ್ವಿಚಕ್ರ ವಾಹನಗಳಿಗೆ ಜೆ.ಎನ್‌. ಟಾಟಾ ಆಡಿಟೋರಿಯಂ ಮೈದಾನ ಮತ್ತು ‘ಡಿ’ ಗೇಟ್‌’ ಸಮೀಪದ ಪೆರಿಫೆರಲ್‌ ರಸ್ತೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಇತರ ಸೌಲಭ್ಯಗಳು

*ಫುಡ್‌ಸ್ಟಾಲ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಇದೆ. ಸಂದರ್ಶಕರು ಸ್ವಂತ ಬಾಟಲ್‌ಗಳನ್ನು ತರಲು ಕೋರಲಾಗಿದೆ.

*ಸಂದರ್ಶಕರಿಗೆ ನೆರವು ನೀಡಲು 15 ‘ಹೆಲ್ಪ್‌ ಡೆಸ್ಕ್‌’ಗಳನ್ನು ಸ್ಥಾಪಿಸಲಾಗಿದೆ. ಕಾರ್ಯಕ್ರಮಗಳ ಬಗ್ಗೆ ಸಲಹೆ, ಮಾರ್ಗದರ್ಶನ ನೀಡಲಾಗುತ್ತದೆ.

*ವಯಸ್ಸಾದವರಿಗೆ ಮತ್ತು ಚಿಕ್ಕ ಮಕ್ಕಳಿಗೆ ಬ್ಯಾಟರಿಚಾಲಿತ ವಾಹನಗಳ ಸೌಲಭ್ಯವನ್ನು ಉಚಿತವಾಗಿ ಆವರಣದಲ್ಲಿ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.