ಸರ್ವಋತುವಿಗೂ ಒಪ್ಪುವ ವಸ್ತ್ರ ಖಾದಿ. ಹಾಗಾಗಿ, ಬಲ್ಲವರು ಬೇಸಿಗೆ ಕಾಲದಲ್ಲಿ ತಂಪಾಗಿಯೂ, ಶೀತ ಕಾಲದಲ್ಲಿ ಬೆಚ್ಚಗಾಗಿಯೂ ಇರುವಂಥದ್ದೇ ಖಾದಿ ವಸ್ತ್ರ ಎಂದಿದ್ದಾರೆ. ಹಿರಿಯರಷ್ಟೇ ಅಲ್ಲ ಕಿರಿಯರಿಗೂ ಖಾದಿ ಈಗ ಅಪ್ಯಾಯಮಾನ.
ಖಾದಿ ಮತ್ತು ಗ್ರಾಮೋದ್ಯೋಗ ಸಿದ್ಧಾಂತವನ್ನು ಕಾರ್ಯಗತಗೊಳಿಸುವುದಕ್ಕಾಗಿಯೇ ಇರುವ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಈ ಬಾರಿಯೂ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಒಂದು ತಿಂಗಳ ಕಾಲ ‘ಖಾದಿ ಉತ್ಸವ’ ಆಯೋಜಿಸಿದೆ. ಇದಕ್ಕೆ ಬುಧವಾರ ಚಾಲನೆ ದೊರೆಯಲಿದೆ.
ಗ್ರಾಹಕರ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯ ಖಾದಿ ಮತ್ತು ಗ್ರಾಮ ಕೈಗಾರಿಕೆಗಳಿಗೆ ಇವೆ ಎಂಬುದನ್ನು ಪ್ರತ್ಯಕ್ಷವಾಗಿ ಪರಿಚಯಿಸುವ ದೃಷ್ಟಿಯಿಂದ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಉತ್ಸವದಲ್ಲಿ ನಗರ ಮತ್ತ ಗ್ರಾಮೋದ್ಯೋಗ ಘಟಕಗಳಿಂದ ಒಟ್ಟು 239 ಮಳಿಗೆಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ.
ದೇಶದ 16 ರಾಜ್ಯಗಳಿಂದ ವಿವಿಧ ಗ್ರಾಮೋದ್ಯೋಗ ಘಟಕಗಳು, ರಾಜ್ಯದ 20 ಜಿಲ್ಲೆಗಳ ಗ್ರಾಮೋದ್ಯೋಗ ಘಟಕಗಳು ಮಳಿಗೆಗಳನ್ನು ಹಾಕಲಿವೆ ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಮಹಾಂತೇಶ್ ನಿಂಗಪ್ಪ ಕರೂರ ಮಾಹಿತಿ ನೀಡಿದರು.
10x10 ಅಡಿ ಅಳತೆಯ ಖಾದಿ ಮಳಿಗೆಗಳಿಗೆ ₹ 30,500 ಮತ್ತು 10x6 ಅಳತೆಯ ಗ್ರಾಮ್ಯೋದ್ಯೋಗ ಮಳಿಗೆಗಳಿಗೆ ₹ 25,500 ದರ ವಿಧಿಸಲಾಗಿದೆ. ಕಾರ್ನರ್ ಸ್ಥಳಗಳಿಗೆ ಹೆಚ್ಚಿನ ದರ ವಿಧಿಸಲಾಗಿದೆ. ಮಳಿಗೆಗಳಿಂದಲೇ ಸುಮಾರು ₹ 60 ಲಕ್ಷ ಸಂಗ್ರಹವಾಗಲಿದ್ದು, ಉಳಿದ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಕಳೆದ ಬಾರಿ₹ 32 ಕೋಟಿ ವಹಿವಾಟು ನಡೆದಿತ್ತು. ಈ ಬಾರಿ ₹ 50 ಕೋಟಿ ವಹಿವಾಟಿನ ನಿರೀಕ್ಷೆ ಇದೆ ಎನ್ನುತ್ತಾರೆ ಅವರು.
ಯುವಜನರತ್ತ ಖಾದಿ: ಖಾದಿ ವಸ್ತ್ರಗಳತ್ತ ಯುವಜನರನ್ನು ಸೆಳೆಯಲು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ನಿಫ್ಟ್) ಜತೆ 2014ರಿಂದ ಒಪ‍್ಪಂದ ಮಾಡಿಕೊಳ್ಳಲಾಗಿದೆ. ಇಲ್ಲಿ ಖಾದಿ ವಸ್ತ್ರವಿನ್ಯಾಸ ಮತ್ತು ಮಾರುಕಟ್ಟೆ ನಿರ್ವಹಣೆ ಕುರಿತು ಖಾದಿ ವಿನ್ಯಾಸಕಾರರಿಗೆ ತರಬೇತಿ ನೀಡಲಾಗುತ್ತದೆ.
ನಿಫ್ಟ್ ವಿನ್ಯಾಸ ಮಾಡಿರುವ ವಸ್ತ್ರಗಳ ಪ್ರದರ್ಶನವನ್ನು ಉತ್ಸವದ ಪ್ರವೇಶ ದ್ವಾರದಲ್ಲೇ ಪ್ರಾತ್ಯಕ್ಷಿಕೆಗೆ ವ್ಯವಸ್ಥೆ ಮಾಡಲಾಗಿದೆ. ಖಾದಿಯಲ್ಲಿ ಹೊಸತನ ತರುವ ಸಲುವಾಗಿ ರೇವಾ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಕೂಡಾ ಕೈಜೋಡಿಸಿದೆ. ಉತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದೆ ಎಂದರು.
ಎಲ್ಲವೂ ಆನ್‌ಲೈನ್: ಉತ್ಸವಕ್ಕೆ ಮಳಿಗೆ ಹಾಕಲು ಆನ್‌ಲೈನ್‌ನಲ್ಲಿ ಅರ್ಜಿ ಕರೆಯಲಾಗಿತ್ತು. 48 ಗಂಟೆಯೊಳಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಅನ್‌ಲೈನ್‌ನಲ್ಲಿ ಪೇಮೆಂಟ್ ಕೂಡಾ ಆಗಿದೆ. ಇದು ಖಾದಿ ಉತ್ಸವದ ಜನಪ್ರಿಯತೆಗೆ ಸಾಕ್ಷಿ ಎಂದರು ಮಹಾಂತೇಶ್.
ರಿಯಾಯ್ತಿ: ಖಾದಿ ಉತ್ಸವದಲ್ಲಿ ಖಾದಿ ರೇಷ್ಮೆ ಬಟ್ಟೆಗಳಿಗೆ ಶೇ 25 ಹಾಗೂ ಖಾದಿ ಬಟ್ಟೆಗಳಿಗೆ ಶೇ 35ರಷ್ಟು ರಿಯಾಯ್ತಿ ಇರುತ್ತದೆ. 16 ರಾಜ್ಯಗಳ ಉತ್ಪನ್ನಗಳು ಇಲ್ಲಿ ದೊರೆಯುವುದರಿಂದ ಗ್ರಾಹಕರಿಗೆ ವೈವಿಧ್ಯಮಯ ಸಂಗ್ರಹ ದೊರೆಯಲಿದೆ ಎನ್ನುತ್ತಾರೆ ಮಂಡಳಿಯ ಅಭಿವೃದ್ಧಿ ಅಧಿಕಾರಿ ಇ. ರಾಜಣ್ಣ.
ಪ್ರಮುಖ ಆಕರ್ಷಣೆ
ಖಾದಿ ಉತ್ಸವದಲ್ಲಿ ಧಾರವಾಡ, ಚಿತ್ರದುರ್ಗ, ದಾವಣಗೆರೆ, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ಅರಳೇ ಖಾದಿ ಮತ್ತು ಉಣ್ಣೆ ಉತ್ಪನ್ನಗಳು ದೊರೆಯಲಿವೆ. ವಾಣಿಜ್ಯ ಬೆಳೆಗಳು ಮತ್ತು ಸಾಂಬಾರ್ ಪದಾರ್ಥಗಳಾದ ಏಲಕ್ಕಿ, ಮೆಣಸು, ದ್ರಾಕ್ಷಿ, ಗೋಡಂಬಿ, ಕಾಫಿ ಮತ್ತು ತೋಟಗಾರಿಕಾ ಉತ್ಪನ್ನಗಳು, ಚರ್ಮದ ಉತ್ಪನ್ನಗಳು ಉತ್ಸವದ ಪ್ರಮುಖ ಆಕರ್ಷಣೆಯಾಗಿವೆ.
ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ ಮತ್ತು ಮಾರಾಟ: ವಸ್ತುಪ್ರದರ್ಶನ ಉದ್ಘಾಟನೆ– ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪ್ರಾತ್ಯಕ್ಷಿಕೆ ಉದ್ಘಾಟನೆ–ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ಮಳಿಗೆ ಉದ್ಘಾಟನೆ– ಸಣ್ಣ ಕೈಗಾರಿಕಾ ಸಚಿವ ಮತ್ತು ಖಾದಿ ಮಂಡಳಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಅಧ್ಯಕ್ಷತೆ–ಶಾಸಕ ದಿನೇಶ್ ಗುಂಡೂರಾವ್, ಗಾಂಧಿ ಪ್ರತಿಮೆಗೆ ಮಾಲಾರ್ಪಣೆ–ಸಚಿವ ಕೆ.ಜೆ. ಜಾರ್ಜ್. ಥೀಮ್ ಪೆವಿಲಿಯನ್ ಉದ್ಘಾಟನೆ–ಸಚಿವ ಕೃಷ್ಣ ಭೈರೇಗೌಡ. ಆಯೋಜನೆ– ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ. ಸ್ಥಳ–ಸ್ವಾತಂತ್ರ್ಯ ಉದ್ಯಾನ, ಪೀಪಲ್ ಪ್ಲಾಜಾ, ಗಾಂಧಿ ನಗರ. ಸಂಜೆ 4
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.