ADVERTISEMENT

ವಧುವಿನ ಉಡುಗೆಯಲ್ಲಿ ಮಿಂಚಿದ ರೂಪದರ್ಶಿಯರು

ಲ್ಯಾಕ್ಮೆ ಫ್ಯಾಷನ್‌ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 20:00 IST
Last Updated 28 ಆಗಸ್ಟ್ 2019, 20:00 IST
ಮುಂಬೈನ ಸೇಂಟ್‌ ರೇಗಿಸ್‌ ಸಭಾಂಗಣದಲ್ಲಿ ನಡೆದ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ವಸ್ತ್ರ ವಿನ್ಯಾಸಕಿ ಸರೋಜ ಜಲಾನ ಜತೆ ವಧುವಿನ ಉಡುಗೆಯಲ್ಲಿ ಮಿಂಚಿದ ಬಾಲಿವುಡ್ ನಟಿಯರು ಮತ್ತು ರೂಪದರ್ಶಿಯರು  
ಮುಂಬೈನ ಸೇಂಟ್‌ ರೇಗಿಸ್‌ ಸಭಾಂಗಣದಲ್ಲಿ ನಡೆದ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ವಸ್ತ್ರ ವಿನ್ಯಾಸಕಿ ಸರೋಜ ಜಲಾನ ಜತೆ ವಧುವಿನ ಉಡುಗೆಯಲ್ಲಿ ಮಿಂಚಿದ ಬಾಲಿವುಡ್ ನಟಿಯರು ಮತ್ತು ರೂಪದರ್ಶಿಯರು     

ಮುಂಬೈನಲ್ಲಿ ನಡೆಯುತ್ತಿರುವ ಲ್ಯಾಕ್ಮೆ ಫ್ಯಾಷನ್‌ ಸಪ್ತಾಹ ಮಂಗಳವಾರ ರಾತ್ರಿ ಮದುವೆ ಮನೆಯಂತೆ ಕಂಗೊಳಿಸುತ್ತಿತ್ತು. ಝಗಮಗಿಸುವ ಗಾಢ ಬಣ್ಣಗಳ ಲೆಹಂಗಾ ಮತ್ತು ವಧುವಿನ ಉಡುಗೆಗಳನ್ನು ತೊಟ್ಟ ರೂಪದರ್ಶಿಯರು ಮತ್ತು ಬಾಲಿವುಡ್‌ ಬೆಡಗಿಯರು ಬಳ್ಳಿಯಂತೆ ಬಳಕುತ್ತ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು.

ಭಾರತೀಯ ಮದುವೆ ಸಂಭ್ರಮವನ್ನು ದುಪ್ಪಟ್ಟುಗೊಳಿಸುವ ಮತ್ತು ವಧುವಿನ ಅಂದ ಹೆಚ್ಚಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ‘ಬ್ರೈಡ್‌ ಕಲೆಕ್ಷನ್‌‘ ಉಡುಪುಗಳು ಎಂಬ್ರಾಯಿಡಿರಿ, ಝರಿ ಕುಸುರಿಯಿಂದ ಎಲ್ಲರ ಮನಗೆದ್ದವು.

ಖ್ಯಾತ ವಸ್ತ್ರ ವಿನ್ಯಾಸಕಿ ಸರೋಜ ಜಲಾನ್‌ ಡಿಸೈನ್‌ ಮಾಡಿದ ಭಿನ್ನ ಉಡುಪುಗಳನ್ನು ತೊಟ್ಟು ಬಾಲಿವುಡ್ ನಟಿಯರಾದ ರೀಚಾ ಛಡ್ಡಾ, ಊರ್ವಶಿ ರೌಟೆಲಾ, ಸೋಹಾ ಅಲಿ ಖಾನ್‌, ಜೆನಿಲಿಯಾ ದೇಶಮುಖ್‌, ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಜತೆ ವಸ್ತ್ರ ವಿನ್ಯಾಸಕಿಯರು ಮುಗುಳ್ನಗೆ ಬೀರುತ್ತರ‍್ಯಾಂಪ್‌ ಮೇಲೆ ವೈಯ್ಯಾರದಿಂದ ಹೆಜ್ಜೆ ಹಾಕಿದರು.

ADVERTISEMENT

ವಧುವಿನ ಅಭಿರುಚಿ ಮತ್ತು ಅಂದಕ್ಕೆ ತಕ್ಕ ವಿಭಿನ್ನ ವಿನ್ಯಾಸದ ಧಿರಿಸುಗಳು ‘ಬಾಂಜಿ–ಬ್ರೈಡಲ್‌ ಕಲೆಕ್ಷನ್‌’ನಲ್ಲಿ ಅನಾವರಣಗೊಂಡವು. ಬಂಜಾರಾ ಮಹಿಳೆಯರ ತೊಡುವ ರಂಗುರಂಗಿನ ಕಲಾತ್ಮಕ ಬಟ್ಟೆಗಳಿಂದ ಪ್ರೇರಿತರಾಗಿ ಸರೋಜ ಜಲಾನ್‌ ಈ ಉಡುಪುಗಳ ವಿನ್ಯಾಸ ಮಾಡಿದ್ದಾರೆ. ರಾಜಸ್ಥಾನಿ ಡೋರಿ ವರ್ಕ್‌, ಕಾಶ್ಮೀರಿ ಶಿಕಾರ್ಗ ಹಾಗೂ ಗುಲ್‌ಮಾರ್ಗ್ ಟ್ರೀ ಪ್ಯಾಟರ್ನ್‌ ಡಿಸೈನ್‌ ಹೊಂದಿದ ಅನಾರ್ಕಲಿ, ಸೀರೆ, ಕೋಟ್‌, ಫ್ಲುಯಿಡ್ ಲೆಹಂಗಾ, ರವಿಕೆಗಳನ್ನು ತೊಟ್ಟ ರೂಪದರ್ಶಿಗಳು ಮಿಂಚಿದರು.

ಕ್ರಾಫ್ಟ್‌ ಕಾರಿಡಾರ್‌ನ ‘ಮಂಜರ್‌’ನ ಸಿಲ್ಕ್‌ ಬಟ್ಟೆಗಳು,ವಸ್ತ್ರ ವಿನ್ಯಾಸಕಿ ಕವಿತಾ ಅಗರವಾಲ್‌ ಅವರ ‘ದ ಕ್ವೀನ್‌’ ಸಂಗ್ರಹ,ಮೌಸಮಿ ಮೇವಾವಾಲಾ ಭಾರತೀಯ ಮತ್ತು ಯುರೋಪಿಯನ್‌ ಬ್ಲೆಂಡ್‌ ಡಿಸೈನ್‌ ಸೀರೆಗಳು ಲ್ಯಾಕ್ಮೆ ಫ್ಯಾಷನ್‌ ವೀಕ್‌ ಹೈಲೈಟ್‌.

ಮೌಸಮಿ ಅವರ ವಿನ್ಯಾಸಗೊಳಿಸಿದ ತೊಡುಗೆಯಲ್ಲಿ ರೂಪದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.