ADVERTISEMENT

ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಅರ್ಧ ಶತಮಾನ

ಧರ್ಮಾಂಬುಧಿ ಕೆರೆಯ ರೂಪಾಂತರದ ಕತೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 19:45 IST
Last Updated 7 ಜೂನ್ 2019, 19:45 IST
ಸುಭಾಷ್‌ ನಗರದಲ್ಲಿ ಹೊಸ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಉದ್ಘಾಟನೆ
ಸುಭಾಷ್‌ ನಗರದಲ್ಲಿ ಹೊಸ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಉದ್ಘಾಟನೆ   

ಬೆಂಗಳೂರಿನ ಹೃದಯದಂತಿರುವ ಕೆಂಪೇಗೌಡ ಬಸ್‌ ನಿಲ್ದಾಣವಿರುವ ಜಾಗ ಈ ಹಿಂದೆ ಧರ್ಮಾಂಬುಧಿ ಕೆರೆಯಾಗಿತ್ತು. ಬೆಂಗಳೂರು ಕಟ್ಟಿದ ರಾಜ ಕೆಂಪೇಗೌಡರ ಕಾಲದಲ್ಲಿ ಕುಡಿಯುವ ನೀರಿನ ಮುಖ್ಯ ಆಕರವಾಗಿತ್ತು.ನಿರಂತರವಾಗಿ ಬೆಳೆಯುತ್ತಿದ್ದ ಜನಸಂಖ್ಯೆ, ಜನರ ನೀರಿನ ಬೇಡಿಕೆ ಸರಿದೂಗಿಸುವ ಸವಾಲು ಮತ್ತು ನಗರಕ್ಕೆ ತಾಗಿದ ಕ್ಷಾಮದ ಬಿಸಿಯು ಕೆರೆಗಳ ಅವಸಾನಕ್ಕೆ ಕಾರಣವಾದವು.

ಧರ್ಮಾಂಬುಧಿ ಕೆರೆಗೆ ಸಂಪಂಗಿ ಕೆರೆ ಮೂಲಕ ನೀರು ಹರಿಯಲು ನಿರ್ಮಿಸಿದ್ದ ಕಾಲುವೆಗಳು ರೈಲ್ವೆ ಮಾರ್ಗದ ನಿರ್ಮಾಣಕ್ಕಾಗಿ ಒತ್ತುವರಿಯಾದವು. ಆ ಬಳಿಕ ಕೆರೆಗೆ ನೀರು ಹರಿಯುವಿಕೆ ಕಡಿಮೆಯಾಗತೊಡಗಿತು.ನಗರದ ಜನರ ನೀರಿನ ಬೇಡಿಕೆ ಈಡೇರಿಸಲು ಸಾಧ್ಯವಾಗಲಿಲ್ಲ. ಕ್ರಮೇಣ ಈ ಕೆರೆಯ ಮೇಲಿನ ಅವಲಂಬನೆ ಕಡಿಮೆಯಾಗಿ, ಹೆಬ್ಬಾಳ, ಹಲಸೂರು ಕೆರೆಗಳಿಂದ ನೀರು ಸರಬರಾಜು ಮಾಡಲಾಯಿತು.

ಧರ್ಮಾಂಬುಧಿ ಕೆರೆಯ ದಂಡೆಯ ಸುತ್ತ ನಗರ ಸಾರಿಗೆ ಬಸ್‌ಗಳನ್ನು ನಿಲ್ಲಿಸಲಾಗುತ್ತಿತ್ತು. ಹೀಗಾಗಿ 1964ರಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಸಾರಿಗೆ ಇಲಾಖೆಗೆ ಜಾಗವನ್ನು ಹಸ್ತಾಂತರಿಸಲಾಯಿತು. ಅಂದಿನ ಮೈಸೂರು ಸರ್ಕಾರವು 1969ರಲ್ಲಿ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿತ್ತು. 1980ರ ಹೊತ್ತಿಗೆ ಕೆಂಪೇಗೌಡ ಬಸ್‌ ನಿಲ್ದಾಣ ತಲೆ ಎತ್ತಿತು.

ADVERTISEMENT

ಈ ಭಾಗದಲ್ಲಿದ್ದ ಮೆಜೆಸ್ಟಿಕ್‌ ಹೆಸರಿನ ಚಿತ್ರಮಂದಿರದಿಂದ ‘ಮೆಜೆಸ್ಟಿಕ್‌’ ಎಂಬ ಹೆಸರು ಕಾಯಂ ಆಯಿತು ಎಂದು ಹೇಳಲಾಗುತ್ತದೆ. ಬಸ್‌ ನಿಲ್ದಾಣವನ್ನೂ ಮೆಜೆಸ್ಟಿಕ್ ಬಸ್ ನಿಲ್ದಾಣ ಎಂದೇ ಕರೆಯಲಾಗುತ್ತಿತ್ತು. ಈಗಲೂ ನಗರ ಸಾರಿಗೆ ಬಸ್‌ಗಳ ಕಂಡಕ್ಟರ್‌ಗಳು ‘ಮೆಜೆಸ್ಟಿಕ್‌... ಮೆಜೆಸ್ಟಿಕ್‌...’ ಎಂದೇ ಕೂಗುತ್ತಾರೆ. ಈಗಿರುವ ಬಸ್ ನಿಲ್ದಾಣವು ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೊ ನಿಲ್ದಾಣವನ್ನು ಒಳಗೊಂಡಿದೆ. ನಾಲ್ಕು ಹೆಜ್ಜೆ ದೂರದಲ್ಲೇ ರೈಲು ನಿಲ್ದಾಣ ಇದೆ.

ದಶಕಗಳ ಹಿಂದಷ್ಟೇ ಇಲ್ಲೊಂದು ಸಮೃದ್ಧ ಕೆರೆಯಿತ್ತು ಎಂಬ ಕುರುಹೂ ಈಗ ಕಾಣಿಸದು. ಕೆರೆಯು ಒಣಗುತ್ತಾ ಬಂದಂತೆ ಅದು ಮೈದಾನವಾಗಿ ಪರಿವರ್ತನೆಯಾಯಿತು. 60ರ ದಶಕದಲ್ಲಿ ಕಾಂಗ್ರೆಸ್ ಪಕ್ಷವು ಸುಭಾಷ್‌ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರಣದಿಂದ ಮೈದಾನ ‘ಸುಭಾಷ್‌ ಮೈದಾನ’ ಎಂದು ಹೆಸರಾಯಿತು.

ಸಂಪಂಗಿ ಕೆರೆಯಲ್ಲಿ ಕಂಠೀರವ ಕ್ರೀಡಾಂಗಣ ತಲೆಯೆತ್ತಿ ನಿಂತಿದೆ. ಈಗಿನ ಸಿಟಿ ಮಾರ್ಕೆಟ್‌ ಜಾಗದಲ್ಲಿ ಸಿದ್ದಿಕಟ್ಟೆ ಎಂಬ ಕೆರೆಯಿತ್ತು. ಕೋರಮಂಗಲ ಕೆರೆ ಅಂತರರಾಷ್ಟ್ರೀಯ ಕ್ರೀಡಾಗ್ರಾಮವಾಯಿತು. ಬಿನ್ನಿಮಿಲ್‌ ಕೆರೆಯಲ್ಲಿ ಕಟ್ಟಡಗಳು ಎದ್ದುನಿಂತಿವೆ. ಕೆರೆಗಳನ್ನು ಮುಚ್ಚಿಯೇ ನಗರದಲ್ಲಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಕಾಲಕ್ಕೆ ತಕ್ಕಂತೆ ಮೈದಾನ,ಬಸ್‌ ನಿಲ್ದಾಣವಾಗಿ ರೂಪಾಂತರವಾಗುತ್ತ ಬಂದ ಧರ್ಮಾಂಬುಧಿ ಕೆರೆ ಹಳೆ ತಲೆಮಾರಿನ ಜನರ ಸ್ಮೃತಿ ಪಟಲದಲ್ಲಿ ಎಂದಿಗೂ ಮಾಸದ ನೆನಪಾಗಿಯೇ ಉಳಿದುಕೊಂಡಿದೆ.

ದಶಕಗಳ ಹಿಂದೆ ಸುಭಾಷ್‌ ನಗರದಲ್ಲಿ ನಿರ್ಮಾಣವಾದ ಬಸ್ ನಿಲ್ದಾಣದ ನೋಟ ಚಿತ್ರಗಳು: ಪ್ರಜಾವಾಣಿ ಆರ್ಕೈವ್

200ಕ್ಕೂ ಹೆಚ್ಚು ಕೆರೆಗಳಿದ್ದವು!
ಧರ್ಮಾಂಬುಧಿ, ಹಲಸೂರು ಕೆರೆ, ಎಡೆಯೂರು ಕೆರೆ, ಲಾಲ್‌ಬಾಗ್‌ ಕೆರೆ, ಸ್ಯಾಂಕಿ ಕೆರೆ, ಸಂಪಂಗಿ ಕೆರೆ ಸೇರಿದಂತೆ ನಗರದಲ್ಲಿ200ಕ್ಕೂ ಹೆಚ್ಚು ಕೆರೆಗಳಿದ್ದವು. ಈಗ ಅವುಗಳ ಸಂಖ್ಯೆ ಎರಡಂಕಿಗೆ ಇಳಿದಿದೆ.

ಕ್ಷಾಮ ಬಂದ ಕಾರಣ ಧರ್ಮಾಂಬುಧಿ ಕೆರೆಯು ಕ್ರಮೇಣ ಒಣಗಲು ಆರಂಭಿಸಿತು. ಕೆರೆ ಬತ್ತಿದ ಜಾಗದಲ್ಲಿ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆ ನಿರ್ಮಾಣವಾಯಿತು. ಈ ರಸ್ತೆಯು ಕಾಂಕ್ರೀಟ್ ರಸ್ತೆಯಾಗಿ ಪರಿವರ್ತನೆಯಾಯಿತು. ಈ ಜಾಗದಲ್ಲಿ ನಾವೀಗ ಮೆಟ್ರೊ ನಿಲ್ದಾಣವನ್ನು ಕಾಣಬಹುದು.

ವೇದಿಕೆಯಾಗಿದ್ದ ಕೆರೆ ಅಂಗಳ
ನಾವು ನೋಡುವ ಹೊತ್ತಿಗೆ ಧರ್ಮಾಂಬುಧಿ ಕೆರೆ ಪೂರ್ಣ ಒಣಗಿ ಮೈದಾನದ ರೂಪ ತಾಳಿತ್ತು. ಅಲ್ಲಿ ಸಮಾವೇಶ, ವಸ್ತು ಪ್ರದರ್ಶನ, ನಾಟಕ ಪ್ರದರ್ಶನಗಳು ನಡೆಯುತ್ತಿದ್ದವು. ನಾಟಕಗಳಿಗೆ ಈ ಜಾಗ ಸಾಕಷ್ಟು ಖ್ಯಾತಿ ಪಡೆದಿತ್ತು. ಸಂಗಮಚಿತ್ರಮಂದಿರ ಇದ್ದ ರಸ್ತೆಯೇ ಟ್ಯಾಂಕ್‌ ಬಂಡ್‌ ರಸ್ತೆ.ಕೆರೆಯ ಏರಿ (ಟ್ಯಾಂಕ್‌ಬಂಡ್) ಮೇಲೆ ಜನರು ನಡೆದು ಹೋಗುತ್ತಿದ್ದರು.ಈಗಿನ ಶಾಂತಲಾ ಸಿಲ್ಕ್ ಮಳಿಗೆಯ ಸಮೀಪ ಧರ್ಮಾಂಬುದಿ ಕೆರೆಯ ತೂಬು ಇತ್ತು. ಏರಿಗಿಂತ ಕೆಳಮಟ್ಟದಲ್ಲಿದ್ದ ಚಿಕ್ಕ ಲಾಲ್‌ಬಾಗ್ ಪ್ರದೇಶದಲ್ಲಿ ಕೆರೆಯ ನೀರನ್ನು ಬಳಸಿ ಭತ್ತ ಬೆಳೆಯುತ್ತಿದ್ದರು.
-ಟಿ.ಆರ್. ಅನಂತರಾಮು ಲೇಖಕ

*
50ನೇ ವರ್ಷಾಚರಣೆಗೆ ಕೆಎಸ್‌ಆರ್‌ಟಿಸಿ ಸಜ್ಜಾಗುತ್ತಿದೆ. ಚುನಾವಣಾ ನೀತಿ ಸಂಹಿತೆಯ ಕಾರಣ ಕಾರ್ಯಕ್ರಮ ಮುಂದೂಡಲಾಗಿತ್ತು. ಸದ್ಯದಲ್ಲೇ ದಿನಾಂಕ ಪ್ರಕಟಗೊಳ್ಳಲಿದೆ. ಪೂರ್ವ ತಯಾರಿ ನಡೆದಿದೆ. ಸಂಸ್ಥೆ ನಡೆದುಬಂದ ಹಾದಿಯನ್ನು ಸ್ಮರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
-ಕೆಎಸ್‌ಆರ್‌ಟಿಸಿ ಅಧಿಕಾರಿ

ಕೆಂಪೇಗೌಡ ಬಸ್ ನಿಲ್ದಾಣ ಸಮುಚ್ಚದಯ ನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.