ADVERTISEMENT

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರ ನಿತ್ಯದ ಗೋಳು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 20:00 IST
Last Updated 13 ಸೆಪ್ಟೆಂಬರ್ 2019, 20:00 IST
   

ನೂತನ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ಪ್ರತಿನಿಧಿಸುವ ಮಲ್ಲೇಶ್ವರದ ವಿಧಾನಸಭಾ ಕ್ಷೇತ್ರದ ಎ.ಎನ್‌. ಬ್ಲಾಕ್‌ ಕೊಳೆಗೇರಿಯ ಮಹಿಳೆಯರು ಶೌಚ ಮತ್ತು ಸ್ನಾನಕ್ಕಾಗಿ ಇನ್ನೂ ಬಯಲು ಜಾಗವನ್ನೇ ಆಶ್ರಯಿಸಿದ್ದಾರೆ.

ಸೂರ್ಯ ಮೂಡುವ ಮುನ್ನವೇ ಬಹಿರ್ದೆಸೆಗೆ ಬಯಲು ಜಾಗ ಹುಡುಕಿ ಹೊರಡುವ ಮಹಿಳೆಯರು, ಅಲ್ಲಿಂದ ಹಿಂದಿರುಗುತ್ತಲೇಲಗುಬಗೆಯಿಂದ ಮನೆಯ ಮುಂದೆ ಬಟ್ಟೆ ಅಡ್ಡಕಟ್ಟಿ ಬಯಲಲ್ಲೇ ಸ್ನಾನ ಮುಗಿಸುತ್ತಾರೆ. ಇದು ಒಂದು ದಿನದ ಕತೆಯಲ್ಲ. ಇಲ್ಲಿನ 27 ಮನೆಗಳ ನಿತ್ಯದ ಗೋಳು!

ಸಮೀಪದಲ್ಲಿಯೇ ಸುಲಭ ಸಾರ್ವಜನಿಕ ಶೌಚಾಲಯವಿದೆ. ಅದು ಬಾಗಿಲು ತೆರೆಯುವುದು ಬೆಳಿಗ್ಗೆ 6 ಗಂಟೆಗೆ. ಅಲ್ಲಿ ನಿತ್ಯ ಕರ್ಮ ಮುಗಿಸಿ ಮನೆಗೆ ಬಂದು ಸ್ನಾನ ಮಾಡಬೇಕು ಎಂದರೆ ಬೆಳಕಾಗಿರುತ್ತದೆ. ಹಾದಿಯಲ್ಲಿ ಹೋಗಿ ಬರುವವರ ಕಣ್ಣು ತಪ್ಪಿಸಿ ಸ್ನಾನ ಮುಗಿಸಲು ಮಹಿಳೆಯರು ತೀವ್ರ ಮುಜುಗರ ಪಡುತ್ತಾರೆ. ಶೌಚಾಲಯಬಾಗಿಲು ರಾತ್ರಿ 8 ಗಂಟೆಗೆ ಮುಚ್ಚುತ್ತದೆ. ಇದರಿಂದ ಮಹಿಳೆಯರು ರಾತ್ರಿ ಶೌಚಕ್ಕೂ ಪರದಾಡಬೇಕಾಗುತ್ತದೆ.

ADVERTISEMENT

ನೀಲಿ ಟಾರ್ಪಾಲಿನ್‌

ಇಲ್ಲಿಯ ಹೆಚ್ಚಿನ ಮನೆಗಳ ಬಾಗಿಲಲ್ಲಿ ನೀಲಿ ಟಾರ್ಪಾಲಿನ್‌ ನೇತಾಡುತ್ತಿರುತ್ತದೆ. ಇದು ಏನು ಎಂದು ಕೇಳಿದರೆ, ಬಚ್ಚಲು ಮನೆಯ ಬಾಗಿಲು ಎಂಬ ಉತ್ತರ ಬರುತ್ತದೆ. ಕೆಲವರು ತಗಡಿನ ತುಂಡು, ಹಲಗೆಗಳನ್ನು ಅಡ್ಡಕಟ್ಟಿ ತಾತ್ಕಾಲಿಕ ಬಚ್ಚಲು ಮನೆ ನಿರ್ಮಿಸಿಕೊಂಡಿದ್ದಾರೆ.

‘ವಯಸ್ಸಾದವರಾದರೆ ತೊಂದರೆ ಇಲ್ಲ. ಶಾಲೆ, ಕಾಲೇಜಿಗೆ ಹೋಗುವ ಬೆಳೆದು ನಿಂತ ಹೆಣ್ಣು ಮಕ್ಕಳು ಏನು ಮಾಡಬೇಕು. ಇದು ನಮ್ಮ ಮನೆಯ ಹೆಣ್ಣು ಮಕ್ಕಳ ಮಾನ, ಮರ್ಯಾದೆಯ ಪ್ರಶ್ನೆ’ ಎಂದು ಇಲ್ಲಿಯ ನಿವಾಸಿಗಳು ಗೋಳು ತೋಡಿಕೊಳ್ಳುತ್ತಾರೆ.

ಕೊಳೆಗೇರಿಗೆ ಕಾಲಿಟ್ಟರೆ ಮೋರಿ ಹಾಗೂ ಚೇಂಬರ್‌ ಕಟ್ಟಿಕೊಂಡು ಗಬ್ಬು ವಾಸನೆ ಮೂಗಿಗೆ ರಾಚುತ್ತದೆ. ಗುಂಡಿಗಳಿಂದ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ. ಈ ಗುಂಡಿಗಳ ಬಳಿ ಇದ್ದವರು ಮನೆಯನ್ನೇ ಖಾಲಿ ಮಾಡಿದ್ದಾರೆ.

ಮಹಿಳೆಯರು, ಮಕ್ಕಳು ಓಡಾಡುವ ಜಾಗದಲ್ಲಿರುವ ವಿದ್ಯುತ್‌ ಕಂಬಗಳಿಂದ ತಂತಿಗಳು ಹೊರ ಚಾಚಿವೆ. ಕೊಳವೆಬಾವಿ ಕೆಟ್ಟು ನಿಂತ ಕಾರಣ ಒಂದು ಟ್ಯಾಂಕ್‌ ನೀರಿಲ್ಲದೆ ಒಣಗಿ ನಿಂತು ಹಲವಾರು ತಿಂಗಳು ಕಳೆದಿವೆ. ಮತ್ತೊಂದು ಟ್ಯಾಂಕ್‌ನ ನೀರು, ಕ್ರಿಮಿ, ಕೀಟಗಳಿಂದ ಗಬ್ಬು ನಾರುತ್ತಿತ್ತು. ಮೂರ‍್ನಾಲ್ಕು ದಿನಗಳ ಹಿಂದೆ ಸಾರ್ವಜನಿಕರೇ ಚಂದಾ ಸಂಗ್ರಹಿಸಿ ಟ್ಯಾಂಕ್‌ ಸ್ವಚ್ಛಗೊಳಿಸಿದ್ದಾರೆ.

‘ನಮ್ಮ ಶಾಸಕರು (ಡಾ. ಅಶ್ವತ್ಥನಾರಾಯಣ) ಕೇವಲ ಉದ್ಯಾನಗಳಿಗೆ ಮಾತ್ರ ಸೀಮಿತರಾಗಿದ್ದಾರೆ. ನಮ್ಮನ್ನು ಪ್ರತಿನಿಧಿಸುವ 64ನೇ ವಾರ್ಡ್‌ನ ಪಾಲಿಕೆ ಸದಸ್ಯೆ ಹೇಮಲತಾ ಜಗದೀಶ್‌ ಅವರು ಮಹಿಳೆಯರ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಸ್ಥಳೀಯರಾದ ಪದ್ಮಾ ಎಂಬುವವರು ನೋವಿನಿಂದ ನುಡಿದರು.

‘ಬಯಲು ಬಹಿರ್ದೆಸೆ ಮುಕ್ತ ಭಾರತ’, ‘ಮನೆ, ಮನೆಗೆ ಶೌಚಾಲಯ’ ಎಂಬ ಘೋಷಣೆಗಳು ಇನ್ನೂ ಈ ಕೊಳೆಗೇರಿಯನ್ನು ತಲುಪಿಲ್ಲ ಎನ್ನುತ್ತಾರೆ ಲಂಚಮುಕ್ತ ವೇದಿಕೆಯ ಕೃಷ್ಣಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.