ನಾಗೇಶ್ ಅವರ ಮಿಮಿಕ್ರಿಗೆ ನೆರೆದಿದ್ದ ಪ್ರೇಕ್ಷಕರು ಗೊಳ್ ಎಂದು ನಗುತ್ತಿದ್ದರು. ಅವರು ಮೈಕ್ ಹಿಡಿದು ಹಾಡುತ್ತಿದ್ದರೆ ಜನ ತಮಗೇ ಅರಿವಿಲ್ಲದಂತೆ ತಲೆ ದೂಗಿಸುತ್ತಿದ್ದರು. ಜನ ಎಷ್ಟು ತನ್ಮಯರಾಗಿ ಕಾರ್ಯಕ್ರಮವನ್ನು ಆಸ್ವಾದಿಸುತ್ತಿದ್ದಾರೆ ಎನ್ನುವುದು ನಾಗೇಶ್ ಒಳಗಣ್ಣಿಗೆ ಮಾತ್ರ ಕಾಣಿಸುತ್ತಿತ್ತು.
ಚಿಕ್ಕ ವಯಸ್ಸಿನಿಂದಲೇ ದೃಷ್ಟಿ ದೋಷದಿಂದ ಬಳಲುತ್ತಿರುವ ನಾಗೇಶ್, ತನಗೆ ಹೀಗೊಂದು ದೋಷವಿದೆ ಎಂದು ಕೊರಗುತ್ತಾ ಕೂತಿಲ್ಲ. ಪ್ರೇಕ್ಷಕರ ನಾಡಿಮಿಡಿತ ಅರಿತು ಅವರನ್ನು ನಗಿಸುವುದರ ಮೂಲಕವೇ ತನ್ನ ನೋವನ್ನು ಮರೆಯುವವರು ಅವರು.
ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾದ ಅವರು, ಕೆನರಾ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಮಿಮಿಕ್ರಿ, ಹಾಡು ಮತ್ತು ಕಾರ್ಯಕ್ರಮಗಳ ನಿರೂಪಣೆಯಲ್ಲಿಯೂ ಅವರು ಸೈ ಎನಿಸಿಕೊಂಡಿದ್ದಾರೆ.ಬಾಲ್ಯದಲ್ಲಿ ಇತರ ಮಕ್ಕಳಂತೆ ಅವರನ್ನು ಬೆಳೆಸಲು ಪೋಷಕರು ತೆಗೆದುಕೊಂಡ ನಿರ್ಧಾರಗಳು ಯಾವ ರೀತಿಯಲ್ಲಿದ್ದವು ಎನ್ನುವುದನ್ನು ಅವರ ಆತ್ಮಸ್ಥೈರ್ಯ ಪ್ರತಿಬಿಂಬಿಸುತ್ತದೆ.
ಅವರಿಗೆ ಕನ್ನಡ, ಹಿಂದಿ, ಉರ್ದು, ಇಂಗ್ಲಿಷ್, ತೆಲುಗು, ತಮಿಳು, ನೇಪಾಳಿ, ಮಲಯಾಳಂ, ಚೀನಿ, ಪಂಜಾಬಿ, ಬಂಗಾಳಿ, ಗುಜರಾತ್, ತುಳು ಭಾಷೆಗಳ ಜ್ಞಾನವಿದೆ. ಇವುಗಳಲ್ಲಿ ಅವರಿಗೆ ಆರು ಭಾಷೆಗಳಲ್ಲಿ ಪ್ರಬುದ್ಧತೆಯಿದೆ. ಐದು ಭಾಷೆಗಳಲ್ಲಿನ ನಟರು, ಪ್ರಸಿದ್ಧರ ಧ್ವನಿಗಳಲ್ಲಿ (83 ಜನರ) ಮಿಮಿಕ್ರಿ ಮಾಡುತ್ತಾರೆ.
‘ಸಣ್ಣ ವಯಸ್ಸಿನಲ್ಲಿ ದೃಷ್ಟಿದೋಷ ಕಾಣಿಸಿಕೊಂಡಿತು. ಆದರೆ ಯಾವ ನ್ಯೂನತೆಯನ್ನು ನನಗೆ ಸೋಕದ ಹಾಗೆ ಪೋಷಕರು ಬೆಳೆಸಿದ್ದಾರೆ. ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ನೂರಾರು ಚಿತ್ರಗಳಿಗೆ ನನ್ನ ತಂದೆ– ತಾಯಿ ಕರೆದುಕೊಂಡು ಹೋಗುತ್ತಿದ್ದರು. ಅಪ್ಪ ಪಕ್ಕದಲ್ಲಿ ಕುಳಿತು ತೆರೆಯ ಮೇಲೆ ಏನು ನಡೆಯುತ್ತಿದೆ ಎನ್ನುವುದನ್ನು ವಿವರಿಸುತ್ತಿದ್ದರು. ಇದು ಭಾಷೆಗಳನ್ನು ಕಲಿಯಲು ಮತ್ತು ಧ್ವನಿಗಳ ಪರಿಚಯ ಮಾಡಿಕೊಳ್ಳಲು ಸಹಾಯವಾಗಿದೆ’ ಎಂದು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿಕೊಳ್ಳುತ್ತಾರೆ.
‘ಉನ್ನತ ವ್ಯಾಸಂಗ ಮಾಡಿದ್ದು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ. ನನ್ನ ಬದುಕಿಗೆ ತಿರುವು ಸಿಕ್ಕಿದ್ದು ಇಲ್ಲಿಯೇ. ಸತತ ಮೂರು ವರ್ಷ ಹಾಡು, ಮಿಮಿಕ್ರಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ್ದೆ’ ಎಂದು ತನ್ನ ವಿದ್ಯಾರ್ಥಿ ಜೀವನದ ಸಂತಸದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ.
ವಿದೇಶಗಳಲ್ಲಿಯೂ ಮೆಚ್ಚುಗೆ: 1999ರಿಂದ ಇತ್ತೀಚಿನವರೆಗೆ ಅವರು ನಾಲ್ಕು ಬಾರಿ ಅಮೆರಿಕ ಪ್ರವಾಸ ಮಾಡಿದ್ದಾರೆ. 2003ರಲ್ಲಿ ಕೆ.ಜೆ ಯೇಸುದಾಸ್ ಅವರೊಂದಿಗೆ ವಿದೇಶದಲ್ಲಿ ವೇದಿಕೆ ಹಂಚಿಕೊಂಡಿದ್ದನ್ನು ಗಮನಿಸಿದ ‘ಸಮರ್ಥನಂ’ ಸಂಸ್ಥೆ 2004ರ ಅಮೆರಿಕ ಪ್ರವಾಸಕ್ಕೆ ‘ಸಮರ್ಥನಂ’ ಸಂಸ್ಥೆಯಿಂದ (ಅಫಿಷಿಯಲ್ ಆ್ಯಂಕರ್) ರಾಯಭಾರಿಯಾಗಿ ನೇಮಿಸಿಕೊಂಡಿತ್ತು. ಅವರ ವಾಕ್‌ಚಾತುರ್ಯ, ಹಾಸ್ಯ ಅಲ್ಲಿಯೂ ಮೆಚ್ಚುಗೆ ಗಳಿಸಿದೆ.
ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ, ನಾರ್ತ್ ಕ್ಯಾಲಿಪೋರ್ನಿಯಾ ಕನ್ನಡ ಕೂಟ, ಫ್ಲೋರಿಡಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲಿಯೂ ಅವರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಬೆಂಗಳೂರಿನಲ್ಲಿ 2012ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಬಿ. ಬಾಲಸುಬ್ರಹ್ಮಣ್ಯಂ ಅವರ ಜೊತೆಗೂ ವೇದಿಕೆ ಹಂಚಿಕೊಂಡಿದ್ದಾರೆ.
ಮೊದಲ ಅಮೆರಿಕ ಪ್ರವಾಸ ಹೇಗಿತ್ತು ಎನ್ನುವುದಕ್ಕೆ ಅವರು ಪ್ರತಿಕ್ರಿಯಿಸುವುದು ಹೀಗೆ ‘i went as a artist came back as a king’ (ನಾನು ಒಬ್ಬ ಕಲಾವಿದನಂತೆ ಹೋದೆ, ರಾಜನಂತೆ ಹಿಂದಿರುಗಿದೆ) ಎಂದು ಸಂತೋಷ ಹಂಚಿಕೊಳ್ಳುತ್ತಾರೆ.
‘ಸಮರ್ಥನಂ ಸಂಸ್ಥೆಯ ವ್ಯವಸ್ಥಾಪಕ ಜಿ.ಕೆ ಮಹಾಂತೇಶ್ ಅವರು ನನ್ನ ಪ್ರತಿಭೆಯನ್ನು ಗುರುತಿಸಿ, ಪೋಷಿಸಿದರು’ ಎಂದು ಸ್ಮರಿಸುತ್ತಾರೆ ನಾಗೇಶ್. ಪಾಲ್ ಮುದ್ದಾ ಅವರು ನಡೆಸುತ್ತಿರುವ ‘ಸ್ನೇಹದೀಪ’ ಸಂಸ್ಥೆಯಲ್ಲಿಯೂ ಅವರು ಗುರುತಿಸಿಕೊಂಡಿದ್ದಾರೆ.
‘ಕರೋಕೆ’ ಸಂಗ್ರಹ: ಇವರಿಗೆ ಹಾಡು ಹೇಳುವುದರ ಮೇಲೆ ಇದ್ದ ಅಭಿಮಾನವನ್ನು ಗುರುತಿಸಿದ ಅವರ ತಾಯಿ ಅವರಿಗೆ ಕರೋಕೆಗಳನ್ನು (ಹಿಂದಿ ಮತ್ತು ಕನ್ನಡ ಮಿಶ್ರಿತ) ಹಾಡುಗಳ ಸಂಗ್ರಹದ ಕ್ಯಾಸೆಟ್, ಸಿ.ಡಿ.ಗಳನ್ನು ಕೊಡಿಸಿದರು. ಹಿನ್ನಲೆ ಗಾಯಕಿಪ್ರಿಯದರ್ಶನಿ ರಾಮ್ ಈ ಹಾಡುಗಳನ್ನು ಹೇಗೆ ಹಾಡಬೇಕು ಎನ್ನುವುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಈಗ ನಾಗೇಶ್ ಅವರ ಬಳಿ 6,500 ಹಾಡುಗಳ ‘ಕರೋಕೆ’ ಮತ್ತು ವಿವಿಧ ಭಾಷೆಗಳ 13 ಸಾವಿರ ಹಾಡುಗಳ ಸಂಗ್ರಹವಿದೆ.
ಕೆಲವು ಸ್ನೇಹಿತರ ಸಲಹೆಯಂತೆ 2007ರಲ್ಲಿ ಕಾವೇರಿ ತೀರದಲ್ಲಿ ಸ್ವರಾಂಜಲಿ ಕನ್ನಡ ಗೋಷ್ಠಿ, ಯೂನಿವರ್ಸಲ್ ಸ್ಟಾರ್ ಮೆಲೋಡಿ ಆರ್ಕೆಸ್ಟ್ರಾಗಳನ್ನು ಆರಂಭಿಸಿದ್ದಾರೆ. ಇಷ್ಟೆಲ್ಲ ಸಾಧನೆಯನ್ನು ಮಾಡಿರುವ ನಾಗೇಶ್, ‘ತಾಯಿ ಆಸೆಯಂತೆ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕನಾಗಿದ್ದೇನೆ, ಆದರೆ ಅದನ್ನು ನೋಡಲು ತಾಯಿಯೇ (ವಿಧಿವಶರಾಗಿದ್ದಾರೆ) ಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಸಂಪರ್ಕಕ್ಕೆ: 92410 13263.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.