ADVERTISEMENT

ಕನ್ನಡದಲ್ಲಿ ಈಡೇರದ ಮೃಣಾಲ್‌ ಸೇನ್ ಕನಸು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2019, 11:58 IST
Last Updated 26 ಫೆಬ್ರುವರಿ 2019, 11:58 IST
ಎಪ್ಪತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ನಾಸ್ಟಾಲಜಿ ಕಾರ್ಯಕ್ರಮದಲ್ಲಿ ಮೃಣಾಲ್‌ ಸೇನ್‌ ಅವರೊಟ್ಟಿಗೆ ಕನ್ನಡದ ಹಿರಿಯ ಛಾಯಾಗ್ರಾಹಕ ಬಿ.ಎಸ್. ಬಸವರಾಜ್
ಎಪ್ಪತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ನಡೆದ ನಾಸ್ಟಾಲಜಿ ಕಾರ್ಯಕ್ರಮದಲ್ಲಿ ಮೃಣಾಲ್‌ ಸೇನ್‌ ಅವರೊಟ್ಟಿಗೆ ಕನ್ನಡದ ಹಿರಿಯ ಛಾಯಾಗ್ರಾಹಕ ಬಿ.ಎಸ್. ಬಸವರಾಜ್   

ಮೃಣಾಲ್‌ ಸೇನ್‌ ಭಾರತೀಯ ಚಿತ್ರರಂಗದ ದಂತಕಥೆ. 11ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಅವರ ಸ್ಮರಣಾರ್ಥ ಸಿನಿಮಾಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಎಪ್ಪತ್ತರ ದಶಕದಲ್ಲಿ ಮೃಣಾಲ್‌ ಸೇನ್ ಅವರು ಕನ್ನಡದಲ್ಲಿ ಚಿತ್ರ ನಿರ್ದೇಶಿಸುವ ಆಸೆ ಹೊಂದಿದ್ದರು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಇದಕ್ಕೆ ವೇದಿಕೆ ಕಲ್ಪಿಸಿದ್ದು ಹಿರಿಯ ನಿರ್ದೇಶಕ ನಾಗೇಶ ಬಾಬ. ಸಾಹಿತಿ ನಿರಂಜನ ಅವರ ‘ಚಿರಸ್ಮರಣೆ’ ಕಾದಂಬರಿಯನ್ನು ಸೇನ್ ದೃಶ್ಯರೂಪಕ್ಕಿಳಿಸಬೇಕಿತ್ತು. ಆ ಚಿತ್ರ ಕೊನೆಗೂ ಸೆಟ್ಟೇರಲಿಲ್ಲ.

ಈ ಬಗ್ಗೆ ನಾಗೇಶ್ ಬಾಬ ಅಂದಿನ ದಿನಗಳನ್ನು ಮೆಲುಕು ಹಾಕುವುದು ಹೀಗೆ. ‘ಐವತ್ತರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿದೆ. ಆಗ ವರ್ಷಕ್ಕೆ ಆರೇಳು ಸಿನಿಮಾಗಳು ತೆರೆಕಂಡರೆ ಅದೇ ಹೆಚ್ಚು. ನಾನು ಆರ್‌. ನಾಗೇಂದ್ರರಾಯರ ಬಳಿ ಸಹಾಯಕನಾಗಿ ಕೆಲಸ ಆರಂಭಿಸಿದೆ. 1969ರಲ್ಲಿ ‘ಅನಿರೀಕ್ಷಿತ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾದೆ. ಚಿತ್ರದ ಸೋಲು ನನ್ನನ್ನು ಘಾಸಿಗೊಳಿಸಿತು’ ಎನ್ನುತ್ತಾರೆ ಅವರು.

ADVERTISEMENT

ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು ನಡೆಯುತ್ತಿದ್ದುದು ದೆಹಲಿ, ಮುಂಬೈ, ಕೋಲ್ಕತ್ತದಲ್ಲಿ. ನಾನು ಲಕ್ಷ್ಮಿನಾರಾಯಣ, ಪುಟ್ಟಣ್ಣ ಹೋಗುತ್ತಿದ್ದೆವು. ಮೃಣಾಲ್‌ ಸೇನ್ ಭೇಟಿಯಾಗುತ್ತಿತ್ತು. ಕನ್ನಡದಲ್ಲಿ ಸಿನಿಮಾವೊಂದನ್ನು ನಿರ್ದೇಶಿಸುವಂತೆ ಮೃಣಾಲ್‌ ಸೇನ್‌ಗೆ ಪತ್ರ ಬರೆದೆ. 1970ರ ಜನವರಿ 26ರಂದು ಅವರಿಂದ ಪ್ರತಿಕ್ರಿಯೆ ಬಂತು. ₹ 1 ಲಕ್ಷ ಬಂಡವಾಳ ಹೊಂದಿಸಿಕೊಂಡರೆ ಚಿತ್ರ ನಿರ್ದೇಶಿಸುವುದಾಗಿ ಸೇನ್ ಭರವಸೆ ನೀಡಿದ್ದರು ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.

‘ಅವರ ‘ಭುವನ್‌ ಶೋಮ್‌’ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿತ್ತು. ಈ ನಡುವೆಯೇ ಅವರ ಸಹಾಯಕ ನಿರ್ದೇಶಕ ಅರುಣ್‌ ಕೌಲ್‌ ಅವರನ್ನು ಕರ್ನಾಟಕಕ್ಕೆ ಕಳುಹಿಸಿದ್ದರು. ನಾನು ಅವರೊಟ್ಟಿಗೆ ಚರ್ಚಿಸಿದ್ದೆ. ನಾನು ಹಲವರ ಬಳಿ ಹಣ ಹೂಡುವಂತೆ ಅಂಗಲಾಚಿದೆ. ಯಾರೂ ನೆರವು ನೀಡಲಿಲ್ಲ. ಸೇನ್‌ ಕನ್ನಡ ಸಿನಿಮಾ ಆಸೆ ಈಡೇರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.