ADVERTISEMENT

ಶುಶ್ರೂಷಕಿಯರಿಗೆ ‘ಫ್ಲೋರೆನ್ಸ್‌ ನೈಟಿಂಗೇಲ್‌’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 5:17 IST
Last Updated 25 ನವೆಂಬರ್ 2019, 5:17 IST
ಆಂಗ್ಲೋ ಇಂಡಿಯನ್‌ ಯುನಿಟಿ ಸೆಂಟರ್‌ ಆಯೋಜಿಸಿದ ಆರೋಗ್ಯ ತಪಾಸಣಾ ಶಿಬಿರ
ಆಂಗ್ಲೋ ಇಂಡಿಯನ್‌ ಯುನಿಟಿ ಸೆಂಟರ್‌ ಆಯೋಜಿಸಿದ ಆರೋಗ್ಯ ತಪಾಸಣಾ ಶಿಬಿರ   

ರೋಗಿಗಳ ಬಗ್ಗೆ ನಿರ್ಲಕ್ಷ್ಯ ಮಾಡದೇ, ಅಸಡ್ಡೆ ತೋರದೆ ಅಂತಕರಣದಿಂದ ಆರೈಕೆ ಮಾಡುವವರು ಶುಶ್ರೂಷಕಿಯರು. ಇದು ಯಾಂತ್ರಿಕ ಕೆಲಸವಲ್ಲ, ಅವರು ರೋಗಿಗಳ ಕಾಳಜಿ, ಆರೈಕೆ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಇಂತಹ ನಿಷ್ಕಲ್ಮಶ ಮನಸ್ಸಿನ ಶುಶ್ರೂಷಕಿಯರನ್ನು ಗುರುತಿಸಿ, ಅವರಿಗೆ ಪ್ರತಿವರ್ಷ ರಾಜ್ಯಮಟ್ಟದ ‘ಫ್ಲೋರೆನ್ಸ್‌ ನೈಟಿಂಗೇಲ್‌’ ಪ್ರಶಸ್ತಿಯನ್ನು ನಗರದ ಆಂಗ್ಲೋ ಇಂಡಿಯನ್‌ ಯುನಿಟಿ ಸೆಂಟರ್‌ ನೀಡುತ್ತಾ ಬಂದಿದೆ.

ಆಂಗ್ಲೋ ಇಂಡಿಯನ್‌ ಯುನಿಟಿ ಸೆಂಟರ್‌ 2000 ಇಸವಿಯಲ್ಲಿ ಆರಂಭವಾಯಿತು. ಅಲ್ಲಿಂದ ಪ್ರತಿವರ್ಷ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನರ್ಸಿಂಗ್‌ ಕ್ಷೇತ್ರದಲ್ಲಿ ಸಾಧನೆ ಮಾಡಿದ, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಅತ್ಯುತ್ತಮವಾಗಿ ಸೇವೆ ಮಾಡಿದ ದಾದಿಯರಿಗೆ ‘ಫ್ಲೋರೆನ್ಸ್‌ ನೈಟಿಂಗೇಲ್‌’ ಪ್ರಶಸ್ತಿಯನ್ನು ನೀಡುತ್ತಿದೆ.

19ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್‌ 12ರಂದು ವಿಕಾಸಸೌಧ ಕಾನ್ಫರೆನ್ಸ್‌ ಹಾಲ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಹಿಸಲಿದ್ದಾರೆ.

ADVERTISEMENT

ಪ್ರತಿವರ್ಷವೂ ಒಟ್ಟು 12 ಜನರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದರಲ್ಲಿ 10 ಮಂದಿ ಸ್ಟಾಫ್‌ ನರ್ಸ್‌ಗಳು, ಒಬ್ಬರು ನರ್ಸಿಂಗ್‌ ಕಾಲೇಜು ಪ್ರಾಂಶುಪಾಲರು ಹಾಗೂ ಒಬ್ಬರು ನರ್ಸಿಂಗ್‌ ಸೂಪರಿಟೆಂಡೆಂಟ್‌ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ‘ಇದು ರಾಜ್ಯಮಟ್ಟದ ಪ್ರಶಸ್ತಿ. ನರ್ಸ್‌ಗಳ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡುವ ಸಂಸ್ಥೆ ರಾಜ್ಯದಲ್ಲಿ ನಮ್ಮದೊಂದೇ’ ಎಂದು ಹೇಳುತ್ತಾರೆ ಫ್ಲೋರೆನ್ಸ್‌ ನೈಟಿಂಗೇಲ್‌ ಶುಶ್ರೂಷಕಿಯರ ಪ್ರಶಸ್ತಿ ಕಮಿಟಿಯ ಅಧ್ಯಕ್ಷ ಐವಾನ್‌ ನಿಗ್ಲಿ.

ದಾದಿಯರ ಸೇವೆಯನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸಲು ಈ ಪ್ರಶಸ್ತಿಯನ್ನು ಆರಂಭಿಸಲಾಯಿತು. ಈ ಪ್ರಶಸ್ತಿಗೆ ಆಯ್ಕೆ ಮಾಡುವ ಮೊದಲು ದಾದಿಯರ ಅರ್ಹತೆ, ಪ್ರಕಟವಾದ ಸಂಶೋಧನಾ ಪ್ರಬಂಧ, ಗ್ರಾಮೀಣ ಭಾಗದಲ್ಲಿ ಸೇವೆ, ಸ್ವಯಂಸೇವೆ, ತುರ್ತು ಅಥವಾ ನೈಸರ್ಗಿಕ ವಿಪತ್ತು ಸಂದರ್ಭದಲ್ಲಿನ ಸೇವೆಗಳನ್ನು ಪರಿಗಣಿಸಿ ಪ್ರಶಸ್ತಿಯನ್ನು ಕೊಡ ಮಾಡಲಾಗುತ್ತದೆ.

ಆಂಗ್ಲೋ ಇಂಡಿಯನ್‌ ಯುನಿಟಿ ಸೆಂಟರ್‌, ಬಡ ಆಂಗ್ಲೊ ಇಂಡಿಯನ್ನರಿಗಾಗಿ ಕೆಲಸ ಮಾಡುತ್ತಿದೆ. ಉದ್ಯೋಗ, ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಮೊದಲಾದ ಕೆಲಸಗಳನ್ನು ಮಾಡುತ್ತಿದೆ. ಅಲ್ಲದೇ ನಗರದ ಬೇರೆ ಬೇರೆ ಭಾಗದಲ್ಲಿ ಆಗಾಗ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.