ADVERTISEMENT

ಜೀವ ಉಳಿಸಿದ ಸಮಯಪ್ರಜ್ಞೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 19:45 IST
Last Updated 11 ಏಪ್ರಿಲ್ 2019, 19:45 IST
   

ಜತೆಗಿದ್ದ ಮಿತ್ರರ ಸಮಯಪ್ರಜ್ಞೆ ಮತ್ತು ವೈದ್ಯರ ಸಕಾಲಿಕ ಚಿಕಿತ್ಸೆಯು ವಿಶ್ವ ಆರೋಗ್ಯ ದಿನಾಚರಣೆಯಂದೇ (ಏಪ್ರಿಲ್‌ 7)ಆಟೊ ಚಾಲಕರೊಬ್ಬರ ಅಮೂಲ್ಯವಾದ ಜೀವವನ್ನು ಉಳಿಸಿದೆ.

ಎಡಗೈ ಮತ್ತು ಎದೆ ಭಾಗದಲ್ಲಿ ಅಸಹಜ ಜೋಮು ಮತ್ತು ನೋವು ಅನುಭವಿಸುತ್ತಿದ್ದ ಆಟೊ ಚಾಲಕನನ್ನು ಸಹೋದ್ಯೋಗಿ ಆಟೊ ಚಾಲಕರು ತಕ್ಷಣ ಸಮೀಪದಲ್ಲಿದ್ದ ಸಕ್ರ ವರ್ಲ್ಡ್‌ ಆಸ್ಪತ್ರೆಗೆ ಕರೆದೊಯ್ದರು. ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಚಾಲಕನನ್ನು ಪರೀಕ್ಷಿಸಿದ ವೈದ್ಯರು ಕೂಡಲೇ ತುರ್ತು ವಿಭಾಗಕ್ಕೆ ಸಾಗಿಸಿದರು.

ತಪಾಸಣೆ ನಂತರ ಅವರಿಗೆ ಹೃದಯಾಘಾತವಾಗಿರುವುದು ಖಚಿತವಾಯಿತು. ತಕ್ಷಣ ಆಂಜಿಯೋಗ್ರಾಂ ಪರೀಕ್ಷೆನಡೆಸಿದ ವೈದ್ಯರು ಹೃದಯದ ರಕ್ತನಾಳದಲ್ಲಿ (ಅಪಧಮನಿ) ಕೊಬ್ಬು ಶೇಖರಣೆಯಾಗಿ ಸರಾಗ ರಕ್ತ ಪರಿಚಲನೆಗೆ ತಡೆಯಾಗಿರುವುದನ್ನು ಪತ್ತೆ ಹಚ್ಚಿದರು. ಶಸ್ತ್ರಚಿಕಿತ್ಸೆ ವಿಳಂಬವಾದರೆ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇರುವುದು ವೈದ್ಯರಿಗೆ ಗೊತ್ತಾಯಿತು.

ADVERTISEMENT

ಕೂಡಲೇ ರೋಗಿಯ ಮಿತ್ರರು ಮತ್ತು ಕುಟುಂಬ ಸದಸ್ಯರಿಗೆ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟರು. ಕುಟುಂಬ ಸದಸ್ಯರ ಒಪ್ಪಿಗೆ ಪಡೆದು ತಕ್ಷಣ ಆಂಜಿಯೋಪ್ಲಾಸ್ಟಿ ನಡೆಸಿದರು. ಹೃದಯ ರಕ್ತನಾಳದಲ್ಲಿ ರಕ್ತ ಪರಿಚಲನೆಗೆ ಅಡ್ಡಿಯಾಗಿದ್ದ ಜಿಡ್ಡಿನ ಅಂಶ ತೆಗೆದು, ಸ್ಟೆಂಟ್‌ ಅಳವಡಿಸಿದರು.

ರೋಗ ಲಕ್ಷಣ ಕಾಣಿಸಿಕೊಂಡ ತಕ್ಷಣ ಆಟೊ ಚಾಲಕನನ್ನು ಆತನ ಸ್ನೇಹಿತರು ಆಸ್ಪತ್ರೆಗೆ ತರುವಲ್ಲಿ ಸ್ವಲ್ಪ ವಿಳಂಬ ಮಾಡಿದ್ದರೂಪ್ರಾಣಕ್ಕೆ ಅಪಾಯವಿತ್ತು. ಸ್ನೇಹಿತರ ಸಮಯ ಪ್ರಜ್ಞೆ ಮತ್ತು ವೈದ್ಯರ ಸಕಾಲಿಕ ವೈದ್ಯಕೀಯ ನೆರವು ಅಮೂಲ್ಯ ಜೀವವೊಂದನ್ನು ಉಳಿಸಲು ಕಾರಣವಾಗಿದೆ.

ಆಧುನಿಕ ಜೀವನಶೈಲಿಯಿಂದಾಗಿ ದೇಹದಲ್ಲಿ ಅತಿಯಾದ ಬೊಜ್ಜು ಮತ್ತು ಕೊಬ್ಬು ಶೇಖರಣೆಯಾಗಿ ರಕ್ತನಾಳಗಳಲ್ಲಿ ಅಡೆತಡೆ ಸೃಷ್ಟಿಸುತ್ತದೆ. ರಕ್ತದ ಸರಾಗ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಮಾತ್ರವಲ್ಲ, ಕಾಲಕ್ರಮೇಣ ಹೃದಯದ ಸ್ನಾಯುಗಳು ನಾಶವಾಗುತ್ತವೆ. ರಕ್ತ ಪರಿಚಲನೆಗೆ ಮಾರ್ಗ ಕಿರಿದಾಗುತ್ತ ನಾಳ ಛಿದ್ರವಾಗುವ ಮತ್ತು ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದುಎಂದು ಸಕ್ರ ವರ್ಲ್ಡ್‌ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್‌ ಶೆಟ್ಟಿ ವಿವರಿಸಿದರು.

***

ಸಕಾಲಕ್ಕೆ ಸ್ನೇಹಿತರು ನನ್ನನ್ನು ಆಸ್ಪತ್ರೆಗೆ ಕರೆ ತರದಿದ್ದರೆ ಮತ್ತು ಉತ್ತಮ ಚಿಕಿತ್ಸೆ ದೊರೆಯದಿದ್ದರೆ ಇಂದು ನಾನು ಬದುಕಿ ಉಳಿಯುತ್ತಿರಲಿಲ್ಲ. ನನಗೆ ಹೊಸ ಬದುಕು ನೀಡಿದ ಆಸ್ಪತ್ರೆ ಮತ್ತು ಮಿತ್ರರಿಗೆ ನಾನು ಆಭಾರಿ.

–ಬಾಲು, ಆಟೊ ಚಾಲಕ

ಹೊರಗಿನಿಂದ ವ್ಯಕ್ತಿ ಆರೋಗ್ಯವಂತನಾಗಿ ಕಂಡರೂ ಆರೋಗ್ಯದ ಬಗ್ಗೆತೋರುವ ನಿರ್ಲಕ್ಷ್ಯ ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮತ್ತುಚಿಕಿತ್ಸೆಗೆ ತಾತ್ಸಾರ ಮಾಡಿದರೆ ಮಾರಣಾಂತಿಕವಾಗುವ ಸಾಧ್ಯತೆ ಇರುತ್ತದೆ

– ಡಾ. ಶ್ರೀಕಾಂತ್‌ ಶೆಟ್ಟಿ, ಸಕ್ರ ವರ್ಲ್ಡ್‌ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ

***

ಎಚ್ಚರಿಕೆಯ ಲಕ್ಷಣಗಳು

* ಎದೆನೋವು, ಹೃದಯ ಭಾರವಾಗುವಿಕೆ, ಉಸಿರಾಟದಲ್ಲಿ ತೊಂದರೆ

* ಎದೆ ಇಲ್ಲವೇ ಎಡ ತೋಳಿನಲ್ಲಿ ಒತ್ತಡ, ಕುತ್ತಿಗೆ, ಹೆಗಲು, ಭುಜ, ದವಡೆ ನೋವು ಬೆನ್ನು ಭಾಗಕ್ಕೆ ಹರಡಿದ ಅನುಭವ

* ಪದೇ ಪದೇ ಕಾಡುವ ಅಸ್ವಸ್ಥತೆ, ಕಡಿಮೆ ನಾಡಿಮಿಡಿತ

* ಅತಿ ಬೆವರುವಿಕೆ, ವಾಂತಿ, ಆಯಾಸ

* ತಲೆಸುತ್ತುವಿಕೆ ಮತ್ತು ತಲೆ ಹಗುರವಾದಂತೆ ಭಾಸ

* ಮಾನಸಿಕ ಕ್ಷೋಭೆ ಅಥವಾ ಒತ್ತಡದಂಥ ಲಕ್ಷಣಗಳು ಗೋಚರಿಸಿದರೆ ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರನ್ನು ಕಾಣಬೇಕು

ಇವುಗಳಿಂದ ದೂರ ಇರಿ

ಮಧುಮೇಹ, ಅಧಿಕ ರಕ್ತದೊತ್ತಡ, ಕೊಬ್ಬು ಇರುವವರು ಧೂಮಪಾನ, ಮದ್ಯಪಾನ, ಎಣ್ಣೆಯಲ್ಲಿ ಕರಿದ ಜಿಡ್ಡಿನ ಆಹಾರ ಪದಾರ್ಥ, ಜಡ ಜೀವನಶೈಲಿ, ಜಂಕ್‌ ಫುಡ್‌ಗಳಿಂದ ದೂರ ಇರಬೇಕು. ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.

ಇಂದಿನಿಂದಲೇ ಆರೋಗ್ಯಯುತ ಜೀವನಶೈಲಿ ಆರಂಭವಾಗಲಿ

ಜೀವಂತಿಕೆಯ ಸಂಕೇತವಾಗಿರುವ ಹೃದಯ ಎಲ್ಲಾ ಭಾವನೆಗಳ ಮೂಲ ಸೆಲೆ. ಹೃದಯದ ಬಡಿತದೊಂದಿಗೆ ಆರಂಭವಾಗುವ ಜೀವನ ಸ್ವಲ್ಪ ಲಯ ತಪ್ಪಿದರೂ ಕೊನೆಯಾಗುತ್ತದೆ. ದೇಶದಲ್ಲಿ ಪ್ರತಿವರ್ಷ ಒಂದು ಕೋಟಿ ಜನರು ಹೃದ್ರೋಗ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಮಾಡಿಕೊಳ್ಳುವ ಸಣ್ಣಪುಟ್ಟ ಬದಲಾವಣೆ ಆರೋಗ್ಯ ಮತ್ತು ಜೀವನವನ್ನು ಜೋಪಾನವಾಗಿಡುತ್ತವೆ.

*ಅಧಿಕ ರಕ್ತದೊತ್ತಡ ಮತ್ತುಸಕ್ಕರೆ ಕಾಯಿಲೆ ನಿಯಂತ್ರಣ

* ಧೂಮಪಾನ, ಮದ್ಯಪಾನ,ಕೊಬ್ಬಿನ ಆಹಾರ ಪದಾರ್ಥ ಬೇಡ

* ನಿಯಮಿತ ವ್ಯಾಯಾಮ, ತೂಕ ನಿಯಂತ್ರಣ

* ತಾಜಾ ಹಣ್ಣು, ಹಂಪಲು ಮತ್ತು ಹಸಿರು ತರಕಾರಿ ಸೇವಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.