ADVERTISEMENT

ಸೇಂಟ್ ಜೋಸೆಫ್ಸ್ ಶಾಲೆಯ ಹಳೆ ವಿದ್ಯಾರ್ಥಿಗಳ ಸಮ್ಮಿಲನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 20:00 IST
Last Updated 4 ಜನವರಿ 2019, 20:00 IST
ಸೈಯದ್ ಕಿರ್ಮಾನಿ
ಸೈಯದ್ ಕಿರ್ಮಾನಿ   

ಸೈಯದ್ ಕಿರ್ಮಾನಿ, ರೋಜರ್ ಬಿನ್ನಿ, ಸ್ಟುವರ್ಟ್‌ ಬಿನ್ನಿ, ನಿಕಿನ್ ತಿಮ್ಮಯ್ಯ, ಎಸ್‌.ಕೆ.ಉತ್ತಪ್ಪ, ಅರ್ಜುನ್‌ ಹಾಲಪ್ಪ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಆಟಗಾರರ ದಂಡೇ ಕಣ್ಣೆದುರು ಬರುತ್ತದೆ.

ಇಂತಹ ಹತ್ತು ಹಲವಾರು ಆಟಗಾರರು ತಮ್ಮ ಶೈಕ್ಷಣಿಕ ಹಾಗೂ ಕ್ರೀಡಾ ಬುನಾದಿಯನ್ನು ಕಂಡುಕೊಂಡಿದ್ದು ನಗರದ ಸೇಂಟ್‌ ಜೋಸೆಫ್ಸ್‌ ಇಂಡಿಯನ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ.

ಈ ಶಾಲೆ ವಿಠಲ್‌ ಮಲ್ಯ ರಸ್ತೆಯಲ್ಲಿದೆ. ಬರೋಬ್ಬರಿ 115 ವರ್ಷದ ಇತಿಹಾಸವನ್ನು ಈ ಶಾಲೆ ಹೊಂದಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಕೆಲವರು ಕ್ರೀಡಾಪಟುಗಳಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಹಾಕಿ ಹಾಗೂ ಕ್ರಿಕೆಟ್‌ನಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಉನ್ನತ ಮಟ್ಟದ ಸಾಧನೆ ಮಾಡಿದ್ದಾರೆ.

ADVERTISEMENT

ಕ್ರೀಡೆ ಮಾತ್ರ ಅಲ್ಲ ಈ ಶಾಲೆಯಿಂದ ಹೊರಹೊಮ್ಮಿದಕಲಾವಿದರ ಪಟ್ಟಿಯೂ ದೊಡ್ಡದಿದೆ. ಪ್ರಕಾಶ್‌ ರೈ, ಸಾಧು ಕೋಕಿಲ, ರಾಜೇಶ್ ಕೃಷ್ಣನ್‌ ಇಲ್ಲಿಯೇ ತಮ್ಮ ಬದುಕಿನ ಆರಂಭಿಕ ಪುಟಗಳನ್ನು ಓದಿದ್ದಾರೆ.

ರಾಜಕೀಯ ನಾಯಕರಲ್ಲಿ ಕುಮಾರ ಬಂಗಾರಪ್ಪ, ಮಧು ಬಂಗಾರಪ್ಪ, ಪ್ರಕಾಶ್ ರಾಥೋಡ್ ಇಲ್ಲಿಯೇ ಓದಿದವರು. ಐಎಎಸ್‌, ಐಪಿಎಸ್‌ ಅಧಿಕಾರಿಗಳ ಪಟ್ಟಿಯೂ ಇದೆ.

ಟಿ.ವಿ ಮೋಹನ್‌ದಾಸ್ ಪೈ, ವೀರೇಂದ್ರ ಹೆಗ್ಗಡೆ ಕೂಡ ಇಲ್ಲಿಯೇ ಕಲಿತಿದ್ದಾರೆ.

1904ರಲ್ಲಿ ಪ್ಯಾರಿಸ್‌ ಫಾರಿನ್‌ ಮಿಷನ್‌ ಸೊಸೈಟಿ ಈ ಶಾಲೆಯನ್ನು ಆರಂಭಿಸಿತು.2004ರಲ್ಲಿ 100 ವರ್ಷದ ಸಂಭ್ರಮವನ್ನು ಆಚರಿಸಿಕೊಂಡಿತು. ಈಗ ಇಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೂ 5,000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇದುವರೆಗೂ 1ಲಕ್ಷಕ್ಕಿಂತ ಹೆಚ್ಚು ಮಕ್ಕಳು ಇಲ್ಲಿ ಕಲಿತಿದ್ದಾರೆ.

ಜನವರಿ 6ರಂದು ಬೆಳಿಗ್ಗೆ 9 ಗಂಟೆಯಿಂದಲೇ ಆರಂಭವಾಗುವ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ಸೈಯದ್ ಕಿರ್ಮಾನಿ, ಮೋಹನ್‌ದಾಸ್‌ ಪೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾಲೆಯ ಅತಿ ಹಿರಿಯ ವಿದ್ಯಾರ್ಥಿ ಆರ್ಮುಗಂ ಅವರು ಕಾರ್ಯಕ್ರಮದಲ್ಲಿ ಹಾಜರಿ ಹಾಕಲಿದ್ದಾರೆ. ನಾಲ್ವರು ಹಿರಿಯ ಅಧ್ಯಾಪಕರು ಕೂಡ ಬರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.