ADVERTISEMENT

ನಗರವೇ ಕಾನ್ವಾಸ್‌ ಸಮಸ್ಯೆಗಳೇ ವಸ್ತು

ಲಂಡನ್‌ ಕಾಂಟೆಂಪರರಿ ಇಂಟರ್‌ನ್ಯಾಷನಲ್‌ ಆರ್ಟ್‌ ಫೇರ್‌ ನಲ್ಲಿ ಬಾದಲ್‌ ನಂಜುಂಡಸ್ವಾಮಿ ಕಲಾಕೃತಿಗಳು

ಪೃಥ್ವಿರಾಜ್ ಎಂ ಎಚ್
Published 20 ಜನವರಿ 2020, 19:30 IST
Last Updated 20 ಜನವರಿ 2020, 19:30 IST
ನೀರು ನಿಂತ ರಸ್ತೆಯಲ್ಲಿ ಮತ್ಸ್ಯಕನ್ಯೆಯ ಪೋಷಾಕಿನಲ್ಲಿ ನಟಿ ಸೋನುಗೌಡ
ನೀರು ನಿಂತ ರಸ್ತೆಯಲ್ಲಿ ಮತ್ಸ್ಯಕನ್ಯೆಯ ಪೋಷಾಕಿನಲ್ಲಿ ನಟಿ ಸೋನುಗೌಡ   

ಸಮಾಜದ ಅಂಕು–ಡೊಂಕುಗಳ ಬಗ್ಗೆ ಜಾಗೃತಿ ಮೂಡಿಸುವ ಸಮಾಜ ಸೇವಕರು ಹಲವರು. ಆದರೆ, ವಿಶಿಷ್ಟ ಚಿತ್ರಕಲೆಯ ಮೂಲಕ ಸಮಾಜದ ಸಮಸ್ಯೆಗಳಿಗೆ ಸೃಜನಾತ್ಮಕವಾಗಿ ಕನ್ನಡಿ ಹಿಡಿಯುವ ಕಲಾವಿದ ಬಾದಲ್‌ ನಂಜುಂಡಸ್ವಾಮಿ ಮಾತ್ರ ವಿಶೇಷ ಎನಿಸುತ್ತಾರೆ.

ಬಿರುಕುಬಿಟ್ಟ ಗೋಡೆ, ಹದಗೆಟ್ಟ ರಸ್ತೆ, ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಗುಂಡಿ...ಹೀಗೆ ಸಿಲಿಕಾನ್ ಸಿಟಿಯ ಅಂದವನ್ನು ಹದಗೆಡಿಸುತ್ತಿರುವ ಸಮಸ್ಯೆಗಳನ್ನು ವ್ಯಂಗ್ಯವಾಗಿ ಹಾಗೂ ವಿಶಿಷ್ಟವಾಗಿ ಎತ್ತಿ ತೋರಿಸುವುದು ಅವರ ವೈಖರಿ.

‘ಕಲೆಗೆ ಯಾರ ಹಂಗೂ ಇಲ್ಲ, ಯಾವ ಮಿತಿಯೂ ಇಲ್ಲ, ನಾನು ಕಲಿತದ್ದನ್ನು ಸಾಧ್ಯವಾದಷ್ಟು ಸಮಾಜದ ಪ್ರಗತಿಗೆ ಬಳಸಬೇಕೆಂಬುದಷ್ಟೇ ನನ್ನ ಉದ್ದೇಶ. ಹೀಗಾಗಿಯೇ ಹೊಸ ಕಲ್ಪನೆಗಳು ಮತ್ತು ಆಲೋಚನೆಗಳ ಮೂಲಕ ನಮ್ಮ ಸುತ್ತಲಿನ ಪ್ರಮುಖ ಸಮಸ್ಯೆಗಳ ಕಡೆಗೆ ಎಲ್ಲರ ಗಮನ ಸೆಳೆಯುತ್ತಿದ್ದೇನೆ’ ಎಂದು ಹೇಳುತ್ತಾರೆ.

ADVERTISEMENT

ಮಳೆಗಾಲ ಬಂತೆಂದರೆ ಬೆಂಗಳೂರಿನ ಬಹುತೇಕ ರಸ್ತೆಗಳೆಲ್ಲಾ ಜಲಾವೃತವಾಗುತ್ತವೆ. ಇಂತಹ ರಸ್ತೆಗಳಲ್ಲಿ ಸಂಚರಿಸಬೇಕೆಂದರೆ ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಲಾಯಿಸಬೇಕು. ಈ ಗಂಭೀರ ಸಮಸ್ಯೆಯನ್ನು ಮನಗಂಡ ನಂಜುಂಡಸ್ವಾಮಿ ಅವರು, ನೀರು ತುಂಬಿದ್ದ ರಸ್ತೆಯನ್ನು ಪುಟ್ಟಕೊಳದಂತೆ ಕಂಡು,ನಟಿ ಸೋನುಗೌಡ ಅವರನ್ನು ಮತ್ಸ್ಯಕನ್ಯೆಯ ಪೋಷಾಕಿನಲ್ಲಿ ಕೊಳದ ಮುಂದೆ ಕೂರಿಸಿ ಜನಪ್ರತಿನಿಧಿಗಳ ಹಾಗೂ ಅಧಿಕಾರಗಳ ಗಮನ ಸೆಳೆಯುವ ವಿನೂತನ ಮಾದರಿಯೊಂದನ್ನು ಪರಿಚಯಿಸಿದರು.

ಅವರ ಕಲಾಯಾನ ಶುರುವಾಗಿದ್ದು ಮೈಸೂರಿನಿಂದ. ಆದರೆ, ಬೆಂಗಳೂರಿನ ಸಮಸ್ಯೆಗಳ ಬಗ್ಗೆಯೇ ಹೆಚ್ಚು ಸ್ಪಂದಿಸಿದ್ದಾರೆ. ‘ಸಮಾಜ ನನಗೆ ಈ ಕಲೆಯನ್ನು ಕಲಿಯುವುದಕ್ಕೆ ಅವಕಾಶ ಕಲ್ಪಿಸಿದೆ. ಹೀಗಾಗಿ ನನ್ನ ಕಲೆಯ ಮೂಲಕ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನ ಮಾಡುತ್ತಿದ್ದೇನೆ. ಈ ಮೂಲಕ ಸಮಾಜ ಸೇವೆ ಮಾಡಬೇಕೆಂಬುದು ನನ್ನ ಉದ್ದೇಶ’ ಎಂದು ತಮ್ಮ ಕಲಾಭಿವ್ಯಕ್ತಿಯ ಹಿಂದಿನ ಒತ್ತಾಸೆಯನ್ನು ಬಾದಲ್‌ ವಿವರಿಸುತ್ತಾರೆ.

‘ಈತನಕ ಹಲವಾರು ಕಲಾಕೃತಿಗಳನ್ನು ಬಿಡಿಸಿದ್ದೇನೆ. ಪ್ರತಿಬಾರಿ ಯಾವ ನಿರೀಕ್ಷೆಯೂ ಇಟ್ಟುಕೊಳ್ಳದೇ ನನ್ನ ಪ್ರಯತ್ನ ಮುಂದುವರಿಸಿದ್ದೇನೆ. ನಾನು ನಗರ ಸಮಸ್ಯೆಗಳಿಗೆ ಕಲಾತ್ಮಕವಾಗಿ ಪ್ರತಿಕ್ರಿಯಿಸಿದ್ದೆಲ್ಲವೂ ಕೆಲವೇ ಗಂಟೆಗಳಲ್ಲಿ ವೈರಲ್ ಆಗುತ್ತದೆ. ಹಲವರು ಸ್ಪಂದಿಸುತ್ತಾರೆ. ಕೆಲವು ಸಮಸ್ಯೆಗಳಿಗೆ ಕೂಡಲೇ ಪರಿಹಾರವೂ ಸಿಗುತ್ತಿದೆ. ಇದಕ್ಕಿಂತ ಒಬ್ಬ ಕಲಾವಿದನಿಗೆ ಇನ್ನೇನು ಸಾರ್ಥಕತೆ ಬೇಕು’ ಎಂದು ಅವರು ಸಂತಸ ವ್ಯಕ್ತಪಡಿಸುತ್ತಾರೆ.

‘ನನ್ನ ಕಲಾಕೃತಿ ಎಷ್ಟು ಜನರಿಗೆ ತಲುಪಬಹುದು ಎಂಬ ಉದ್ದೇಶಕ್ಕಿಂತ, ಆ ಕಲಾಕೃತಿಯನ್ನು ಅರಳಿಸುವುದಕ್ಕೆ ಮನಃಪೂರ್ವಕವಾಗಿ ಎಷ್ಟರ ಮಟ್ಟಿಗೆ ಶ್ರಮ ಪಡಬೇಕು ಎಂಬುದಷ್ಟೇ ನನ್ನ ಆಲೋಚನೆಯಾಗಿರುತ್ತದೆ. ಒಟ್ಟಿನಲ್ಲಿ ಸಮಸ್ಯೆಗೆ ‍ಪರಿಹಾರ ಸಿಗಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎನ್ನುವ ನಿಲುವು ಬಾದಲ್‌ ಅವರದು.

ಆಕರ್ಷಕ ಎನಿಸುವಂತಹ ಹಾಗೂ ಭಿನ್ನವಾದ ಇಂತಹ ಸುಮಾರು 50 ಕಲಾಕೃತಿಗಳನ್ನು ಅವರು ಈವರೆಗೆ ಅನಾವರಣಗೊಳಿಸಿದ್ದಾರೆ. ಕಿತ್ತುಹೋದ ರಸ್ತೆ ವಿಭಜಕ, ಗುಂಡಿ ಬಿದ್ದ ರಸ್ತೆ, ದಾರಿ ಕಾಣದಂತೆ ನೀರು ತುಂಬಿರುವ ರಸ್ತೆ, ಚಲಿಸಲು ಸಾಧ್ಯವಾಗದಂತಹ ಪಾದಚಾರಿ ಮಾರ್ಗ... ಹೀಗೆ ರಸ್ತೆ ಸುರಕ್ಷತೆಗೆ ಆದ್ಯತೆ ನೀಡುತ್ತಿರುವುದು ಅವರ ಕಲಾಕೃತಿಗಳಲ್ಲಿ ಎದ್ದು ಕಾಣುತ್ತದೆ.

‘ವಿಶ್ವದ ಮಹಾನಗರಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ, ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಂಗಳೂರನ್ನು ಇಲ್ಲಿನ ರಸ್ತೆಗಳ ಅವಸ್ಥೆ ಹೊರತುಪಡಿಸಿ ಊಹಿಸುವುದಾದರೂ ಹೇಗೆ? ನಿತ್ಯ ಟ್ರಾಫಿಕ್‌ ಸಮಸ್ಯೆಯಿಂದ ಬಳಲುತ್ತಿರುವ ಇಲ್ಲಿನ ಸಾರ್ವಜನಿಕರು ಹದಗೆಟ್ಟ ರಸ್ತೆಗಳಿಂದ ಅನುಭವಿಸುತ್ತಿರುವ ಕಿರಿಕಿರಿ ಹೇಳ ತೀರದು. ಇಂತಹ ರಸ್ತೆಗಳಿಂದಾಗಿಯೇ ಹಲವರು ಮೃತಪಟ್ಟಿದ್ದಾರೆ. ಹೀಗಾಗಿ ಈ ವಿಷಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ’ ಎಂದು ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾರೆ.

ಲಂಡನ್‌ಗೆ ‘ಮೂನ್‌ ವಾಕ್‌’!

‘ನನ್ನ ‘ಮೂನ್‌ವಾಕ್‌’ ವಿಡಿಯೊ ನೋಡಿದ್ದ ಲಂಡನ್‌ನ ಬ್ರೂನಿ ಗ್ಯಾಲರಿ ಆಯೋಜಕರು, ಮುಂಬೈನ ಕಲಾ ಗ್ಯಾಲರಿಯ ಕ್ಯೂರೇಟರ್ ಒಬ್ಬರ ಮೂಲಕ ನನ್ನ ಮಾಹಿತಿ ಪಡೆದು, ನನ್ನನ್ನು ವಾಟ್ಸ್‌ಆ್ಯಪ್‌ನಲ್ಲಿ ಸಂಪರ್ಕಿಸಿದ್ದರು. ನನ್ನ ಹಲವು ಕಲಾಕೃತಿಗಳ ವಿವರಗಳನ್ನು ಅವರೊಂದಿಗೆ ಹಂಚಿಕೊಂಡಿದ್ದೇನೆ. ಗುರುವಾರದಿಂದ (ಜನವರಿ 16) ಆರಂಭವಾಗಿರುವ ಈ ಪ್ರದರ್ಶನ ಮಾರ್ಚ್‌ 21ರ ವರೆಗೆ ನಡೆಯಲಿದೆ. ಫೆಬ್ರುವರಿಯಲ್ಲಿ ನಾನೂ ಭಾಗವಹಿಸುತ್ತೇನೆ’ ಎಂದು ಮಾಹಿತಿ ನೀಡಿದರು.

ಇವುಗಳ ಜತೆಗೆ ಮತದಾನದ ಬಗ್ಗೆ, ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ, ಮೂಲಸೌಕರ್ಯಗಳ ಕೊರತೆ ಬಗ್ಗೆ ಜಾಗೃತಿ ಮೂಡಿಸುವ ಹಲವು ಕಲಾಕೃತಿಗಳು ಅವರ ಕುಂಚದಲ್ಲಿ ಅರಳಿವೆ. ‘ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಇಂತಹ ಕಲಾಕೃತಿಗಳ ರಚನೆ, ಪ್ರದರ್ಶನ ನಿರಂತರವಾಗಿರುತ್ತದೆ’ ಎನ್ನುತ್ತಾರೆ ಬಾದಲ್‌.

₹5 ಸಾವಿರದಲ್ಲಿ ಮೂನ್‌ವಾಕ್‌

‘ಹೇರೋಹಳ್ಳಿಯ ಹದಗೆಟ್ಟ ರಸ್ತೆಯನ್ನು ಸರಿಪಡಿಸುವುದಕ್ಕಾಗಿ, ಜಾಗೃತಿ ಮೂಡಿಸಲು ‘ಚಂದ್ರಯಾನ’ದ ಸ್ಪೂರ್ತಿಯಿಂದ ಚಿತ್ರಿಸಿದ ‘ಮೂನ್‌ವಾಕ್‌’ ವಿಡಿಯೊ ವಿಶ್ವದಾದ್ಯಂತ ಸದ್ದು ಮಾಡಿತು. ಭಾರತದ ಬಹುತೇಕ ಭಾಷೆಗಳ ಮಾಧ್ಯಮಗಳಷ್ಟೇ ಅಲ್ಲದೇ, ಯುರೋಪ್‌, ಅಮೆರಿಕ ದೇಶಗಳ ಮಾಧ್ಯಮಗಳಲ್ಲೂ ಬಿತ್ತರವಾಯಿತು. ಈ ಮಟ್ಟಿಗೆ ಪ್ರತಿಕ್ರಿಯೆ ದೊರೆಯುತ್ತದೆ ಎಂದು ಎಂದೂ ಊಹಿಸಿರಲಿಲ್ಲ. ನಟ ಪೂರ್ಣಚಂದ್ರ ಅವರು ಇದಕ್ಕೆ ಉತ್ತಮ ಸಹಕಾರ ನೀಡಿದರು. ಗಗನಯಾನಿಗಳು ಧರಿಸುವ ದಿರಿಸು ತಯಾರಿಸುವಂತೆ ಅವರಿಗೆ ಹೇಳಿದ್ದೆ. ದರ್ಜಿಯೊಬ್ಬರನ್ನು ಹಿಡಿದು ಹೊಲಿಸುವ ಪ್ರಯತ್ನ ಮಾಡಿದೆವು. ಹಲವು ಕಡೆ, ಹಲವು ಫ್ಯಾನ್ಸಿ ಅಂಗಂಡಿಗಳನ್ನು ಸಂಪರ್ಕಿಸಿದರೂ ಯಾವುದೂ ತೃಪ್ತಿ ನೀಡಲಿಲ್ಲ. ಕೊನೆಗೆ ಬ್ರಿಗೇಡ್‌ ರಸ್ತೆಯಲ್ಲಿರುವ ಫ್ಯಾನ್ಸಿ ಬಟ್ಟೆಗಳ ಮಾರಾಟ ಮಳಿಗೆಯೊಂದನ್ನು ಸಂಪರ್ಕಸಿ, ಪೂರ್ಣಚಂದ್ರ ಅವರ ಅಳತೆ ಕೊಟ್ಟು ಸಾಧ್ಯವಾದಷ್ಟು ನೈಜವಾಗಿರುವಂತೆ ತಯಾರಿಸಲು ಸೂಚಿಸಿದೆವು. ಹೇರೋಹಳ್ಳಿಯ ರಸ್ತೆ ಚಂದ್ರನಲ್ಲಿನ ಕುಳಿಗಳಂತೆಯೇ ನನಗೆ ಕಾಣಿಸಿತು ಹೀಗಾಗಿ ಅದನ್ನೇ ಆಯ್ಕೆ ಮಾಡಿಕೊಂಡು, ಚಿತ್ರಿಸಲಾಯಿತು. ಈ ಪ್ರಯತ್ನಕ್ಕೆ ಸುಮಾರು ₹5,000 ಖರ್ಚಾಯಿತು’ ಎಂದು ಅವರು ಅಣಕು ‘ಚಂದ್ರಯಾನ’ದ ಮೆಲುಕು ಹಾಕಿದರು ಬಾದಲ್‌.

ಮೈಸೂರಿನ ಕುಕ್ಕರಹಳ್ಳಿಯ ನಂಜುಂಡಸ್ವಾಮಿ ಅವರು, 2004ರಲ್ಲಿ ಚಾಮರಾಜೇಂದ್ರ ಅಕಾಡೆಮಿ ಆಫ್ ವಿಶುವಲ್ ಆರ್ಟ್ಸ್‌ ಪದವಿ ಪೂರೈಸಿದ್ದು, ಚಿನ್ನದ ಪದಕವನ್ನೂ ಪಡೆದಿದ್ದಾರೆ. ಚಿಕ್ಕಂದಿನಿಂದಲೇ ಕಲಾಕೃತಿಗಳ ಕಡೆಗೆ ಆಸಕ್ತಿ ಬೆಳೆಸಿಕೊಂಡಿರುವ ಅವರು, 3ಡಿ ಚಿತ್ರ, ವಿವಿಧ ಮಾದರಿಯಲ್ಲಿ ಕಲಾಕೃತಿಗಳನ್ನು ರಚಿಸುವುದರಲ್ಲಿ ಸಿದ್ಧಹಸ್ತರು. ಹಲವು ನಾಟಕಗಳು, ಕಿರು ಚಿತ್ರಗಳಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಲೂಸಿಯಾ, ಲೈಫು ಇಷ್ಟೇನೆ, ಪ್ರಕೃತಿ, ಪೊಲೀಸ್ ಕ್ವಾಟ್ರಸ್‌, ಎದೆಗಾರಿಕೆ ಚಿತ್ರಗಳಲ್ಲಿ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.