ADVERTISEMENT

ಚಳಿಗೆ ಸೈ ಈ ಬಗೆ ಉಡುಗೆ

ಸುಷ್ಮಿತಾಮೂರ್ತಿ
Published 13 ಡಿಸೆಂಬರ್ 2018, 19:45 IST
Last Updated 13 ಡಿಸೆಂಬರ್ 2018, 19:45 IST
ಫ್ರಾಕ್‌ ಮಾದರಿಯ ಜಾಕೆಟ್‌
ಫ್ರಾಕ್‌ ಮಾದರಿಯ ಜಾಕೆಟ್‌   

ನಿನ್ನೆಗಿಂತಲೂ ಇವತ್ತು ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಬೇಕು, ಹೊಸ ಬಗೆಯಲ್ಲಿ ಉಡುಪು ಧರಿಸಬೇಕು ಎಂದು ಕೆಲವರು ಪ್ರತಿದಿನ ಅಪ್‌ಡೇಟ್‌ ಆಗಬೇಕು. ಅಂತಹ ಉಮೇದು ಉಳ್ಳವರಿಗೆಚಳಿಗಾಲ ಹೇಳಿಮಾಡಿಸಿದ ಕಾಲ.

ಹಾಗೆ ಫ್ಯಾಷನೆಬಲ್‌ ಆಗಿ ಇರಲುದಿನಾಲೂ ಹೊಸ ಬಟ್ಟೆಗಳನ್ನೇ ಧರಿಸಬೇಕೆಂದೇನೂ ಇಲ್ಲ. ‘ಮಿಕ್ಸ್‌ ಆ್ಯಂಡ್‌ ಮ್ಯಾಚ್‌’ ಮಾಡುವ ಮತ್ತು ಇರುವ ಬಟ್ಟೆಗಳನ್ನು ಸರಿಯಾಗಿ ಬಳಸುವ ಜಾಣ್ಮೆ ಇದ್ದರೆ ಸಾಕು. ಚಳಿಗಾಲದಲ್ಲಿ ಒಂದೇ ಪದರದಲ್ಲಿ ಬಟ್ಟೆ ಧರಿಸುವುದಕ್ಕಿಂತಲೂ ಒಳಗೂ, ಹೊರಗೂ ಮತ್ತೊಂದನ್ನು ಧರಿಸುವುದರಿಂದ ದೇಹ ಬೆಚ್ಚಗಿರುತ್ತದೆ. ಅಂತಹ ಸಾಧ್ಯತೆಗಳನ್ನು ನೋಡೋಣ ಬನ್ನಿ...

ಸ್ಕಾರ್ಫ್‌ಗಳು
ಸ್ಕಾರ್ಫ್‌ಗಳು ಚಳಿಗಾಲದಲ್ಲಿ ನಮ್ಮ ಸ್ನೇಹಿತರು. ವಿನ್ಯಾಸಕಿ ಸ್ವಪ್ನಾ ಅನುಮೋಲು ಈ ಬಾರಿಯ ಚಳಿಗಾಲಕ್ಕಾಗಿ ಬ್ಲಾಂಕೆಟ್‌ ಸ್ಕಾರ್ಫ್‌ನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸುತ್ತಾರೆ. ‘ಕತ್ತಿನ ಸುತ್ತ ಬೇರೆ ಬೇರೆ ಶೈಲಿಗಳಲ್ಲಿ ಬ್ಲಾಂಕೆಟ್‌ ಸ್ಕಾರ್ಫ್‌ ಸುತ್ತಿಕೊಂಡರೆ ಚಳಿಯೂ ಮಾಯ ಜೊತೆಗೆ ನಿಮ್ಮ ಇಡೀ ಬಾಹ್ಯನೋಟಕ್ಕೆ ವಿಭಿನ್ನ ಛಾಪು ನೀಡುತ್ತದೆ’ ಎಂಬುದು ಅವರ ಶಿಫಾರಸು.

ADVERTISEMENT

ಪ್ರಿಂಟೆಡ್‌ ಅಥವಾ ಹೂಗಳ ವಿನ್ಯಾಸವುಳ್ಳ ಸ್ಕಾರ್ಫ್‌ಗಿಂತಲೂ ಚೌಕಳಿ ವಿನ್ಯಾಸದ ಬ್ಲಾಂಕೆಟ್‌ ಸ್ಕಾರ್ಫ್‌ ಹೆಚ್ಚು ಟ್ರೆಂಡಿ ನೋಟ ನೀಡುತ್ತದೆ.

ಗಾಢ ಬಣ್ಣಕ್ಕೂ ಚಳಿಗಾಲಕ್ಕೂ ಅವಿನಾಭಾವ ನಂಟು. ಹಾಗಾಗಿ ವಿನ್ಯಾಸಗಳಿಲ್ಲದ ಪ್ಲೇನ್‌ ಸ್ಕಾರ್ಫ್‌ ಗಾಢ ಬಣ್ಣದಲ್ಲಿದ್ದರೆ ಚಂದ. ಕಂದು, ಮರೂನ್‌, ಬಂಗಾರ ಮತ್ತು ಕಡುಹಸಿರು ಬಣ್ಣದವುಗಳೂ ಈ ಋತುವಿಗೆ ಹೊಂದುತ್ತವೆ.

ಸ್ವೆಟ್‌ ಶರ್ಟ್‌ ಮತ್ತು ಸ್ವೆಟರ್‌
ಈ ಎರಡು ಮೇಲುಡುಪುಗಳು ಚಳಿಗಾಲದಲ್ಲಿ ಪುರುಷರಿಗೂ ಮಹಿಳೆಯರಿಗೂ ಸ್ನೇಹಿತ. ಇದರಲ್ಲಿ ಸೆಮಿ ಫಾರ್ಮಲ್‌ ಎಂಬುದು ಈ ಬಾರಿಯ ಸೇರ್ಪಡೆ. ಜೀನ್ಸ್‌ ಪ್ಯಾಂಟ್‌ ಜೊತೆಗೆ ಸ್ವೆಟ್‌ ಶರ್ಟ್‌ ಧರಿಸಿ ಬಿಳಿ ಬಣ್ಣದ ಸ್ನೀಕರ್ಸ್‌ ಧರಿಸುವುದು ಸೂಕ್ತ. ಇದೇ ಶೈಲಿಯನ್ನು ಸೆಮಿ ಫಾರ್ಮಲ್‌ ಆಗಿ ಬದಲಾಯಿಸಿಕೊಳ್ಳಲು ಬಯಸುತ್ತೀರಾದರೆ ಬಿಳಿ ಬಣ್ಣದ ಶರ್ಟ್‌ನ ಮೇಲೆ ಸ್ವೆಟ್‌ ಶರ್ಟ್‌ ಧರಿಸಬಹುದು. ಆದರೆ ಶರ್ಟ್‌ನ ಕಾಲರ್‌ಗಳು ಹೊರಗೆ ಕಾಣುವಂತಿರಬೇಕು.

ನೈಲಾನ್‌ ಆಥವಾ ಸಿಂಥೆಟಿಕ್‌ನ ಬಿಗಿಯಾದ ಪ್ಯಾಂಟ್‌, ಟೈಟ್ಸ್‌, ಜೆಗಿಂಗ್ಸ್‌ ಧರಿಸಿದ್ದರೆ ಸ್ವಲ್ಪ ಸಡಿಲವಾದ ಸ್ವೆಟ್‌ ಶರ್ಟ್‌ ಆರಿಸಿಕೊಳ್ಳಬಹುದು.

ನೀವು ಹಿರಿಯ ನಾಗರಿಕರಾಗಿದ್ದಲ್ಲಿಸ್ವೆಟ್‌ ಶರ್ಟ್‌ಗಿಂತ ಜಾಕೆಟ್‌ ಮತ್ತು ಕಾರ್ಡಿಗನ್‌ಗಳು ನಿಮಗೆ ಚೆನ್ನಾಗಿ ಹೊಂದುತ್ತವೆ. ತೋಳು ಇರುವ/ಇಲ್ಲದ ಸ್ವೆಟರ್‌ ಸಾರ್ವಕಾಲಿಕ ಆಯ್ಕೆ.

ಜಾಕೆಟ್‌, ಕಾರ್ಡಿಗನ್‌: ಸ್ವೆಟರ್‌ ಮತ್ತು ಶ್ರಗ್‌ ಮಾದರಿಯ ಉಡುಗೆ ಕಾರ್ಡಿಗನ್‌. ತುಂಬು ತೋಳುಳ್ಳದ್ದು, ಬಟನ್‌ಗಳು ಇಲ್ಲದಿರುವ ಕಾರ್ಡಿಗನ್‌ಗಳು ಈಗ ಹೆಚ್ಚು ಬಳಕೆಯಲ್ಲಿವೆ. ಜಾಕೆಟ್‌ಗಳ ಆಯ್ಕೆಗೆ ಹತ್ತಾರು ಸಾಧ್ಯತೆಗಳಿವೆ.

‘ತುಂಬಾ ಸಡಿಲವಾದ ಕಾರ್ಡಿಗನ್‌ಗಳನ್ನು ನಾವು ಹೆಚ್ಚು ಇಷ್ಟಪಡುತ್ತೇವೆ. ಸ್ಟ್ರೈಪ್‌, ಪಟ್ಟಿಯ ಹಾಗೂ ಪ್ರಿಂಟೆಡ್‌ ವಿನ್ಯಾಸದ ಬ್ಲೇಜರ್‌, ಮಂಡಿವರೆಗೆ ಸಡಿಲವಾಗಿ ನಿಲ್ಲುವ ನಿಂಜಾ ಪ್ಯಾಂಟ್‌ ಮತ್ತು ಮಂಡಿವರೆಗಿನ ಶೂಗಳನ್ನು ಧರಿಸಿದರೆ ಕಾರ್ಡಿಗನ್‌ಗಳು ಅತ್ಯಂತ ಸ್ಟೈಲಿಶ್‌ ಆಗಿರುತ್ತವೆ’ ಎನ್ನುತ್ತಾರೆ ವಸ್ತ್ರ ವಿನ್ಯಾಸಕರಾದ ಪ್ರಣವ್‌ ಗುಗ್ಲಾನಿ ಮತ್ತು ನೇಹಾ ಸಿಂಗ್‌.

ಕತ್ತಿನ ಮುಂಭಾಗದವರೆಗೆ ಚಾಚಿಕೊಂಡ ಸ್ವಲ್ಪ ಅಗಲವಾದ ಕಾಲರ್‌ಗಳನ್ನು ‘ಪೀಟರ್‌ ಪಾನ್‌ ಕಾಲರ್‌’ ಎನ್ನುತ್ತಾರೆ. ಅಂತಹ ಕಾಲರ್‌ ಇರುವ ಜಾಕೆಟ್‌ ಈಗ ಟ್ರೆಂಡಿಯಾಗಿವೆ. ಈ ಬಾರಿಯ ಚಳಿಗಾಲಕ್ಕೆ ಟ್ರೆಂಡಿಯಾಗಿ ಕಾಣಿಸಿಕೊಳ್ಳಬೇಕೆಂದರೆ ಪೀಟರ್‌ ಪಾನ್ ಕಾಲರ್‌ ಜಾಕೆಟ್‌ ಆರಿಸಿಕೊಳ್ಳಿ ಎಂಬುದು ಪ್ರಣವ್‌ ಮತ್ತು ನೇಹಾ ಅವರ ಸಲಹೆ. ಪ್ಯಾಂಟ್‌ ಶರ್ಟ್‌ ಅಥವಾ ಟೀಶರ್ಟ್‌ ಜೊತೆಗೆ ತೋಳಿಲ್ಲದ ಉದ್ದನೆ ಜಾಕೆಟ್‌ ತುಂಬಾ ಆಕರ್ಷಕವಾಗಿರುತ್ತದೆ ಎನ್ನುತ್ತಾರೆ ಅವರು.

ಚಳಿಗೆ ಲೆಗಿಂಗ್ಸ್‌, ಸಾಕ್ಸ್‌
ಪ್ರಿಂಟೆಡ್‌ ಲೆಗಿಂಗ್ಸ್‌ ಜೊತೆಗೆ ಆಕರ್ಷಕ ಸಾಕ್ಸ್ ಧರಿಸುವುದೂ ಈ ಚಳಿಗಾಲದಲ್ಲಿ ನಿಮಗೆ ವಿಭಿನ್ನ ನೋಟವನ್ನು ಕೊಡಬಹುದು. ಗಾಢ ಬಣ್ಣದ ಲೆಗಿಂಗ್ಸ್ ಅಥವಾ ಟೈಟ್ಸ್‌ ಮೇಲೆ ಸಡಿಲವಾದ ಆದರೆ ಮಂದ ಬಣ್ಣದ ಸ್ವೆಟರ್‌ ಧರಿಸಿ. ಬೇಸಿಗೆಯಲ್ಲಿ ಧರಿಸಿದಂತಹ ಯಾವುದೇ ಬಗೆಯ ಉಡುಪಿನ ಜೊತೆ ಕಾರ್ಡಿಗನ್‌ ಹೊಂದಿಸಿಕೊಳ್ಳಿ. ಈ ಎರಡೂ ಬಗೆಯ ಉಡುಪುಗಳಿಗೆ ಬಣ್ಣ ಬಣ್ಣದ ಸಾಕ್ಸ್‌ ಧರಿಸುವುದು ಮರೆಯಬೇಡಿ. ಪಾದ ಮುಚ್ಚುವ ಶೂಗಳಿಗಿಂತ ಲೋಫರ್ಸ್‌ ಧರಿಸಿದರಂತೂ ಈ ಚಳಿಗಾಲಕ್ಕೆ ನಿಮ್ಮದೇ ಸ್ಟೈಲ್‌ ಸ್ಟೇಟ್‌ಮೆಂಟ್‌ ಬರೆದಂತಾಗುತ್ತದೆ.

ಹಾಗಿದ್ದರೆ, ನಿಮ್ಮ ವಾರ್ಡ್‌ರೋಬ್‌ಗೆ ಚಳಿಗಾಲದ ಸ್ಪರ್ಶ ನೀಡಲು ಸಜ್ಜಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.