ADVERTISEMENT

ಪ್ರಜಾವಾಣಿ | 25 ವರ್ಷಗಳ ಹಿಂದೆ: ಭಾನುವಾರ, 17–9–1995

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 19:30 IST
Last Updated 16 ಸೆಪ್ಟೆಂಬರ್ 2020, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನ್ಯಾಯಾಂಗ ನಿಂದನೆ: ರಾಷ್ಟ್ರೀಯ ಚರ್ಚೆಗೆ ಗೌಡರ ಸಲಹೆ

ಬೆಂಗಳೂರು, ಸೆ. 16:ನ್ಯಾಯಾಲಯ ನಿಂದನೆ ಪ್ರಶ್ನೆ ಕುರಿತು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿಯೇ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವೊಂದನ್ನು ಬೆಂಗಳೂರಿನಲ್ಲಿ ನಡೆಸುವಂತೆ ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡ ಇಂದು ಇಲ್ಲಿ ಸಲಹೆ ಮಾಡಿದರು.

ಬೆಂಗಳೂರು ಜಿಲ್ಲಾ ಕಾನೂನು ನೆರವು ಸಮಿತಿ ಆಶ್ರಯದಲ್ಲಿ ನಡೆದ ಐವತ್ತನೇ ಜನತಾ ನ್ಯಾಯಾಲಯ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ವಕೀಲರ ಸಂಘದ ಅಧ್ಯಕ್ಷರಿಂದ ಬಂದ ಕೆಲ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಈ ಸಲಹೆ ಮುಂದಿಟ್ಟರು.

ADVERTISEMENT

ಟೀಕೆಗೆ ಟೀಕೆ: ಶಾಸಕರು, ಸಂಸತ್‌ ಸದಸ್ಯರು ಸೇರಿದಂತೆ ರಾಜಕಾರಣಿಗಳು ನ್ಯಾಯಾಂಗವನ್ನು, ನ್ಯಾಯಾಧೀಶರನ್ನು, ನ್ಯಾಯಾಲಯ ನೀಡುವ ತೀರ್ಪನ್ನು ಟೀಕಿಸುವ ಪ್ರವೃತ್ತಿ ಹೆಚ್ಚಿರುವುದಕ್ಕೆ ಇದಕ್ಕೂ ಮುನ್ನ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್‌. ಸುಬ್ಬಾರೆಡ್ಡಿ ಕಳವಳ ವ್ಯಕ್ತಪಡಿಸಿದರು.

ಚಂದ್ರಾಸ್ವಾಮಿ ಬಂಧನಕ್ಕೆ ಪೈಲಟ್‌ ಮತ್ತೆ ಒತ್ತಾಯ

ಹೊಜಾಯ್‌ (ಅಸ್ಸಾಂ), ಸೆ. 16 (ಯುಎನ್‌ಐ, ಪಿಟಿಐ)– ಅಧಿಕಾರದ ಸುತ್ತ ಠಳಾಯಿಸುತ್ತಿರುವ ಮಧ್ಯವರ್ತಿಗಳು ಹಾಗೂ ಅಪರಾಧಿಗಳೊಂದಿಗೆ ಸಂಪರ್ಕ ಇಟ್ಟುಕೊಂಡಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸದಿದ್ದರೆ ರಾಷ್ಟ್ರದಲ್ಲಿ ಪ್ರಜಾಸತ್ತೆಗೆ ಭವಿಷ್ಯವಿಲ್ಲ ಎಂದು ಇದುವರೆಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾಗಿದ್ದ ಹಾಲಿ ಅರಣ್ಯ ಸಚಿವ ರಾಜೇಶ್‌ ಪೈಲಟ್‌ ಇಂದು ಇಲ್ಲಿ ಆತಂಕ ವ್ಯಕ್ತಪಡಿಸಿದರು. ವಿವಾದಾತ್ಮಕ ಸಾಧು ಚಂದ್ರಾಸ್ವಾಮಿಯನ್ನು ಕೂಡಲೇ ಬಂಧಿಸಬೇಕೆಂದು ಅವರು ಒತ್ತಾಯಿಸಿದರು.

ತಾವು ಗೃಹ ಖಾತೆಯಲ್ಲಿ ಕಡೆಯದಾಗಿ ಸಹಿ ಮಾಡಿದ ಆಜ್ಞೆಯನ್ನು ಯಾವುದೇ ಕಾರಣಕ್ಕೂ ಕೈ ಬಿಡದೆ ಜಾರಿಗೊಳಿಸಬೇಕೆಂದು ಒತ್ತಾಯಿಸುವ ಮೂಲಕ ಪೈಲಟ್‌ ಈ ವಿವಾದಕ್ಕೆ ಇಂದು ಹೊಸ ತಿರುವು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.