ಕಲ್ಲಂಗಡಿ ಹಣ್ಣಿಗೆ ಸೂಜಿಯ ಮೂಲಕ ರಾಸಾಯನಿಕಗಳನ್ನು ಸೇರಿಸುತ್ತಿರುವ ಯುವಕನೊಬ್ಬನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಘಟನೆಯ ಸಂಬಂಧ ಆಯುಷ್ ವರ್ಮಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ಪೋಸ್ಟ್ ಹಂಚಿಕೊಳ್ಳುತ್ತಿರುವ ಕೆಲವರು, ಹಿಂದೂ ಯುವಕನೊಬ್ಬ ರಂಜಾನ್ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣಿಗೆ ರಾಸಾಯನಿಕ ಸೇರಿಸುತ್ತಿದ್ದು, ಮುಸ್ಲಿಮರು ಎಚ್ಚರಿಕೆಯಿಂದ ಇರಬೇಕು ಎಂದು ಪ್ರತಿಪಾದನೆ ಮಾಡುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ವಿಡಿಯೊ ಅನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಅದರ ಕೀಫ್ರೇಮ್‌ಗಳು ‘ಇಂಡಿಯಾ ಟುಡೆ’ ಪತ್ರಿಕೆಯಲ್ಲಿ 2024ರ ಮೇನಲ್ಲಿ ಪ್ರಕಟವಾಗಿರುವ ವರದಿಗೆ ಸಂಪರ್ಕ ಕಲ್ಪಿಸಿದವು. ವರದಿಯ ಪ್ರಕಾರ, ಕಲ್ಲಂಗಡಿ ಹಣ್ಣಿಗೆ ರಾಸಾಯನಿಕಗಳನ್ನು ಸೇರಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ದಿ ಸೋಷಿಯಲ್ ಜಂಕ್ಷನ್’ ಎನ್ನುವ ಯು ಟ್ಯೂಬ್ ವಾಹಿನಿಯು ಈ ವಿಡಿಯೊ ಅನ್ನು ಸೃಷ್ಟಿಸಿದೆ ಎಂದು ಉಲ್ಲೇಖಿಸಲಾಗಿದೆ. ಮತ್ತಷ್ಟು ಹುಡುಕಿದಾಗ, ಯು ಟ್ಯೂಬ್ ವಾಹಿನಿಯಲ್ಲಿ ಈ ವಿಡಿಯೊ 2024ರ ಏ.29ರಂದು ಅಪ್‌ಲೋಡ್ ಆಗಿರುವುದು ಕಂಡುಬಂತು. ‘ಈ ವಿಡಿಯೊ ಅನ್ನು ಜನಜಾಗೃತಿಯ ಸಲುವಾಗಿ ರೂಪಿಸಲಾಗಿದ್ದು, ಇದರಲ್ಲಿ ಬರುವ ಘಟನೆಗಳು ಕಾಲ್ಪನಿಕ’ ಎಂದು ವಿಡಿಯೊದಲ್ಲಿ ಉಲ್ಲೇಖಿಸಲಾಗಿದೆ. ಹಳೆಯ ವಿಡಿಯೊಕ್ಕೆ ಧ್ವನಿಯನ್ನು ಸೇರಿಸಿ, ಸುಳ್ಳು ಪ್ರತಿಪಾದನೆ ಮಾಡಲಾಗುತ್ತಿದೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.