ಚಿನ್ನದ ಆಭರಣಗಳಿಂದ ಮಾಡಿದ ಗೂಡಿನಲ್ಲಿ ಎರಡು ಹಕ್ಕಿಗಳು ಕುಳಿತಿರುವ ಮತ್ತು ನಿರೂಪಕರೊಬ್ಬರು ಮಲಯಾಳ ಭಾಷೆಯಲ್ಲಿ ಅದಕ್ಕೆ ವಿವರಣೆ ಕೊಡುತ್ತಿರುವ ವಿಡಿಯೊ ತುಣುಕೊಂದು ‘ಎಕ್ಸ್’ ಸೇರಿದಂತೆ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೆಂಗಳೂರಿನ ಹೈಕೋರ್ಟ್ ರಸ್ತೆಯಲ್ಲಿರುವ ಮೂರು ಚಿನ್ನಾಭರಣ ಮಳಿಗೆಗಳಿಂದ ಹಕ್ಕಿಗಳು ಒಂದು ಕೆಜಿಗೂ ಹೆಚ್ಚು ಚಿನ್ನಾಭರಣ ಕದ್ದು ಗೂಡು ಕಟ್ಟಿವೆ. ಹಕ್ಕಿಗಳು ಮೊಟ್ಟೆಗಳನ್ನು ಇಟ್ಟು, ಅವುಗಳಿಂದ ಮರಿ ಹೊರ ಬಂದ ಬಳಿಕವೇ ಚಿನ್ನವನ್ನು ವಾಪಸ್ ಪಡೆಯಲು ಆಭರಣ ಮಳಿಗೆಗಳು ನಿರ್ಧರಿಸಿವೆ. ಮರದ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಆದರೆ, ಇದು ಸುಳ್ಳು. ಅದು ನೈಜ ವಿಡಿಯೊ ಅಲ್ಲ.
ವಿಡಿಯೊವನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿ ಪರಿಶೀಲಿಸಿದಾಗ ಸುರೇಂದ್ರ ಗರ್ವಾಲ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಏಪ್ರಿಲ್ 1ರಂದು ಪೋಸ್ಟ್ ಮಾಡಿದ ಇದೇ ವಿಡಿಯೊ ಸಿಕ್ಕಿತು. ಡಿಜಿಟಲ್ ಕ್ರಿಯೇಟರ್ ಮತ್ತು ಕಲೆ ಹಾಗೂ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಗ್ಗೆ ಕುತೂಹಲ ಉಳ್ಳ ವ್ಯಕ್ತಿ ಎಂದು ತಮ್ಮ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ. ವಿಡಿಯೊವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದು ಎಐ ವಿಡಿಯೊ ಆಗಿರಬಹುದು ಎಂಬ ಅನುಮಾನ ಮೂಡಿತು. ವಿಡಿಯೊವನ್ನು ಎಐ ವಿಡಿಯೊ ಪತ್ತೆ ಟೂಲ್ ಹೈವ್ ಮಾಡರೇಷನ್‌ನಲ್ಲಿ ಹಾಕಿದಾಗ, ಅದು ಎಐ ನಿರ್ಮಿತ ವಿಡಿಯೊ ಎಂಬುದು ದೃಢಪಟ್ಟಿತು. ಸುರೇಂದ್ರ ಗರ್ವಾಲ್ ಅವರನ್ನು ಸಂಪರ್ಕಿಸಿದಾಗ ಅವರು ‘ಇದು ಸುಳ್ಳು. ನಾನು ಮನೋರಂಜನೆಯ ಉದ್ದೇಶದಿಂದ ಎಐ ಬಳಸಿ ಆ ವಿಡಿಯೊ ಸೃಷ್ಟಿಸಿದ್ದೇನೆ’ ಎಂದು ಸ್ಪಷ್ಟನೆ ನೀಡಿರುವುದಾಗಿ ಪಿಟಿಐ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.