ADVERTISEMENT

ಫ್ಯಾಕ್ಟ್‌ ಚೆಕ್‌: ಸಿಐಎ ತಂಡದಲ್ಲಿದ್ದವರು ವಾಂಗ್ಚೂಕ್‌ ತಂದೆ ಅಲ್ಲ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 21:57 IST
Last Updated 14 ಅಕ್ಟೋಬರ್ 2025, 21:57 IST
.
.   

ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯು (ಸಿಐಎ) ದಶಕಗಳ ಹಿಂದೆ ಹಿಮಾಲಯದ ನಂದಾದೇವಿ ಶಿಖರದ ವ್ಯಾಪ್ತಿಯಲ್ಲಿ ವಿಕಿರಣಯುಕ್ತ ಪ್ಲುಟೋನಿಯಂ ಅನ್ನು ಹೊಂದಿದ್ದ ಪರಮಾಣು ವಿದ್ಯುತ್‌ ಜನರೇಟರ್‌ ಅನ್ನು ಕಳೆದುಕೊಂಡಿದ್ದು, ಆ ಸಿಐಎ ತಂಡದಲ್ಲಿ ಲಡಾಖ್‌ನ ಪರಿಸರವಾದಿ ಸೊನಮ್‌ ವಾಂಗ್ಚೂಕ್‌ ಅವರ ತಂದೆ ಸೋನಮ್‌ ವಾಂಗ್ಯಾಲ್‌ ಕೂಡ ಇದ್ದರು ಎಂದು ಪ್ರತಿಪಾದಿಸುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪೋಸ್ಟ್‌ ಜೊತೆಗೆ ಈ ಸಂಬಂಧದ ಸುದ್ದಿಯ ತಲೆಬರಹ ಇರುವ ದಿನಪತ್ರಿಕೆಯ ಕ್ಲಿಪ್ಪಿಂಗ್‌ ಕೂಡ ಹಾಕಲಾಗಿದೆ. ಆದರೆ, ಇದು ಸುಳ್ಳು. ಸಿಐಎ ತಂಡದಲ್ಲಿದ್ದವರು ವಾಂಗ್ಚೂಕ್‌ ಅವರ ತಂದೆ ಅಲ್ಲ. 

ಉತ್ತರಾಖಂಡದ ನಂದಾದೇವಿ ಶಿಖರದ ವ್ಯಾಪ್ತಿಯಲ್ಲಿ ಅಮೆರಿಕದ ಸಿಐಎ ಮತ್ತು ಭಾರತದ ಗುಪ್ತಚರ ಸಂಸ್ಥೆ(ಐಬಿ) ಜಂಟಿಯಾಗಿ ಪರಮಾಣು ವಿದ್ಯುತ್‌ ಉತ್ಪಾದನಾ ಘಟಕವನ್ನು ನಿರ್ಮಿಸುವ ಯೋಜನೆಯನ್ನು 1965ರಲ್ಲಿ ರೂಪಿಸಿದ್ದವು. ವಾಷಿಂಗ್ಟನ್‌ ಪೋಸ್ಟ್‌ ಸೇರಿದಂತೆ ಹಲವು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದವು. ಪೋಸ್ಟ್‌ನಲ್ಲಿರುವುದು 1978ರ ವಾಷಿಂಗ್ಟನ್‌ ಪೋಸ್ಟ್‌ನ ಪತ್ರಿಕಾ ವರದಿಯ ಕ್ಲಿಪ್ಪಿಂಗ್‌. ಚೀನಾದ ಪರಮಾಣು ಚಟುವಟಿಕೆಯ ಮೇಲೆ ಕಣ್ಣಿಡುವ ಉದ್ದೇಶದಿಂದ ನಂದಾದೇವಿ ಶಿಖರದಲ್ಲಿ 1965ರ ಅಕ್ಟೋಬರ್‌ನಲ್ಲಿ ಸಿಐಎ ಮತ್ತು ಐಬಿ ಜಂಟಿಯಾಗಿ ಪ್ಲುಟೋನಿಯಂ ಆಧಾರಿತ ನಿಗಾ ಸಲಕರಣೆಯನ್ನು ಅಳವಡಿಸಲು ಮುಂದಾಗಿದ್ದ ಬಗ್ಗೆ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.  ಆದರೆ, ಪ್ರತಿಕೂಲ ಹವಾಮಾನದ ಕಾರಣಕ್ಕೆ ಎರಡೂ ರಾಷ್ಟ್ರಗಳ ಗುಪ್ತಚರ ತಂಡಗಳು ಪರಮಾಣು ಸಾಮರ್ಥ್ಯದ ಜನರೇಟರ್‌ ಅನ್ನು ಅಲ್ಲೇ ಬಿಟ್ಟು ಬರಬೇಕಾಯಿತು. ನಂತರ ಆ ಸಾಧನ ಅಲ್ಲಿಂದ ನಾಪತ್ತೆಯಾಗಿತ್ತು ಎಂದು ಈ ವರದಿ ಹೇಳಿದೆ. 

ಈ ಪೋಸ್ಟ್‌ನಲ್ಲಿ ಸೊನಮ್‌ ವಾಂಗ್ಯಲ್‌ ಎಂಬವರ ಹೆಸರೂ ಇದೆ. ಅವರು ಸೊನಮ್‌ ವಾಂಗ್ಚೂಕ್‌ ತಂದೆ ಎಂದು ಹೇಳಲಾಗಿದೆ. ವಾಂಗ್ಚೂಕ್‌ ತಂದೆಯ ಹೆಸರು ಸೊನಮ್‌ ವಾಂಗ್ಯಲ್‌ ಎಂಬುದು ನಿಜವೇ ಆಗಿದ್ದರೂ ಅವರು  ಸಿಐಎ ತಂಡದಲ್ಲಿದ್ದವರಲ್ಲ. ತಂಡದಲ್ಲಿ ಅದೇ ಹೆಸರಿನ ಚಾರಣಿಗರೊಬ್ಬರು ಇದ್ದರು. ಈ ವಾಂಗ್ಯಲ್‌ ಅವರು 23ನೇ ವರ್ಷದಲ್ಲಿ ಮೌಂಟ್‌ ಎವರೆಸ್ಟ್‌ ಏರಿದವರು. 1965ರಲ್ಲಿ ಭಾರತೀಯ ಎವರೆಸ್ಟ್‌ ಚಾರಣ ತಂಡದ ಭಾಗವಾಗಿದ್ದರು. ಅವರು ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರೀ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ. ಭಾರತ–ಟಿಬೆಟ್‌ ಗಡಿ ಪೊಲೀಸ್‌ ಪಡೆಗೆ (ಐಟಿಬಿಪಿ) ನಿಯೋಜನೆಗೊಂಡಿದ್ದ ವಾಂಗ್ಯಲ್‌ ಅವರು 1993ರಲ್ಲಿ ಸಹಾಯಕ ನಿರ್ದೇಶಕರಾಗಿ ನಿವೃತ್ತಿಹೊಂದಿದ್ದರು. 2005ರ ಸಂದರ್ಶನವೊಂದರಲ್ಲಿ ಅವರು ನಂದಾ ದೇವಿ ಕಾರ್ಯಾಚರಣೆಯ ಬಗ್ಗೆ ವಿವರಗಳನ್ನು ನೀಡಿದ್ದರು. ವಾಂಗ್ಚೂಕ್‌ ತಂದೆ ಸೊನಮ್‌ ವಾಂಗ್ಯಲ್ ಅವರು ರಾಜಕಾರಣಿಯಾಗಿದ್ದವರು. 1975ರಲ್ಲಿ ಅವರು ಜಮ್ಮು ಮತ್ತು ಕಾಶ್ಮೀರ ಸರ್ಕಾರದಲ್ಲಿ ಸಚಿವರಾಗಿದ್ದರು. 1998ರ ನವೆಂಬರ್‌ 10ರಂದು ನಿಧನರಾಗಿದ್ದಾರೆ. ಪೋಸ್ಟ್‌ನಲ್ಲಿ ಪ್ರಸ್ತಾಪಿಸಲಾಗಿರುವ ಸೊನಮ್‌ ವಾಂಗ್ಯಲ್‌ ಅವರು ಈಗಲೂ ಇದ್ದಾರೆ ಎಂದು ಬೂಮ್‌ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.