
ಮದ್ಯ ಕುಡಿದ ವ್ಯಕ್ತಿಯೊಬ್ಬರು ರಾತ್ರಿಯಲ್ಲಿ ರಸ್ತೆಯಲ್ಲಿ ಹುಲಿಯೊಂದರ ಕತ್ತನ್ನು ಸವರುವುದು, ಅದಕ್ಕೆ ತನ್ನ ಬಾಟಲಿಯಲ್ಲಿದ್ದ ದ್ರವ ವಸ್ತುವನ್ನು ಕುಡಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಇದು ಮಧ್ಯ ಪ್ರದೇಶದ ಪೆಂಚ್‌ನಲ್ಲಿ ನಡೆದ ಘಟನೆ ಎಂದೂ ಮದ್ಯದ ಅಮಲಿನಲ್ಲಿ ರಾಜು ಪಟೇಲ್ ಎಂಬ ವ್ಯಕ್ತಿ ಹುಲಿಯನ್ನು ಬೆಕ್ಕು ಎಂದು ಭಾವಿಸಿ ಅದರ ಕತ್ತನ್ನು ಸವರಿದ್ದಾರೆ. ಅದಕ್ಕೆ ತನ್ನ ಕೈಲಿದ್ದ ಮದ್ಯವನ್ನು ಕುಡಿಸಿದ್ದಾರೆ. ಅಕ್ಟೋಬರ್ 4ರಂದು ನಡೆದ ಈ ವಿಲಕ್ಷಣ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದೂ ಪ್ರತಿಪಾದಿಸಲಾಗುತ್ತಿದೆ. ಆದರೆ, ಇದು ಸುಳ್ಳು.
ಈ ಘಟನೆ ಕುರಿತಂತೆ ಗೂಗಲ್‌ನಲ್ಲಿ ಹುಡುಕಿದಾಗ ವಿಶ್ವಾಸಾರ್ಹವಾದಂತಹ ಯಾವ ಪತ್ರಿಕಾ ವರದಿಯೂ ಸಿಗಲಿಲ್ಲ. ಮಧ್ಯ ಪ್ರದೇಶದ ಸಿಯೋನಿಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಸಂಪರ್ಕಿಸಿದಾಗ ಅಂತಹ ಘಟನೆ ನಡೆದಿರುವ ಬಗ್ಗೆ ಮಾಹಿತಿ ಇಲ್ಲ ಎಂಬ ಪ್ರತಿಕ್ರಿಯೆ ಸಿಕ್ಕಿತು. ‘ದಿ ಸುಟೂರ್’ ಎಂಬ ಮಾಧ್ಯಮ ಸಂಸ್ಥೆ ಪೆಂಚ್ ಹುಲಿ ಸಂರಕ್ಷಿತ ಪ್ರದೇಶದ ಉಪ ನಿರ್ದೇಶಕ ರಜನೀಶ್ ಸಿಂಗ್ ಅವರನ್ನು ಸಂಪರ್ಕಿಸಿ ವರದಿ ಮಾಡಿದ್ದು, ಈ ಘಟನೆಯು ತಮ್ಮ ವ್ಯಾಪ್ತಿಯಲ್ಲಿ ನಡೆದುದಲ್ಲ ಎಂಬ ಅವರ ಸ್ಪಷ್ಟನೆಯಲ್ಲಿ ಉಲ್ಲೇಖಿಸಿದೆ. ವಿಡಿಯೊವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದರ ಅಸಲಿತನದ ಬಗ್ಗೆ ಅನುಮಾನ ಬಂತು. ಮುಂದಿನ ಹಂತವಾಗಿ ಡೀಪ್‌ಫೇಕ್ ಒ–ಮೀಟರ್ ಎಂಬ ಎಐ ಪತ್ತೆ ಟೂಲ್‌ನಲ್ಲಿ ವಿಡಿಯೊವನ್ನು ಹಾಕಿ ಪರಿಶೀಲಿಸಿದಾಗ, ವಿಡಿಯೊ ಎಐ ತಂತ್ರಜ್ಞಾನದಲ್ಲಿ ಸೃಷ್ಟಿಸಿದ್ದು ಎಂಬುದಕ್ಕೆ ಹಲವು ಸುಳಿವುಗಳು ಸಿಕ್ಕವು. ಈ ಟೂಲ್ ಅಭಿವೃದ್ಧಿ ಪಡಿಸಿದ ತಂತ್ರಜ್ಞರನ್ನು ಸಂಪರ್ಕಿಸಿದಾಗ, ಅವರು ‘ಈಸ್ ಇಟ್ ಎಐ’ ಮತ್ತು ‘ಎಐ ಓರ್ ನಾಟ್’ ಎಂಬ ಟೂಲ್‌ಗಳ ಮೂಲಕ ಪರಿಶೀಲನೆ ನಡೆಸಿ, ಆ ವಿಡಿಯೊ ಎಐ ಸೃಷ್ಟಿ ಎಂಬುದನ್ನು ದೃಢಪಡಿಸಿದರು ಎಂದು ಬೂಮ್ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.