ಅಹಮದಾಬಾದ್‌ನಲ್ಲಿ ಇದೇ 12ರಂದು ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ರಮೇಶ್ ಕುಮಾರ್ ಅವರು ತಾನು ಆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದುದಾಗಿ ಸುಳ್ಳು ಹೇಳಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಪ್ರತಿಪಾದಿಸುತ್ತಿರುವ ವಿಡಿಯೊ ಸಹಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು.
ವಿಡಿಯೊ ತುಣುಕಿನ ಕೀ ಫ್ರೇಮ್ ಒಂದನ್ನು ರಿವರ್ಸ್ ಇಮೇಜ್ ವಿಧಾನದ ಮೂಲಕ ಗೂಗಲ್ ಲೆನ್ಸ್‌ನಲ್ಲಿ ಹಾಕಿ ಹುಡುಕಾಡಿದಾಗ ಹಲವರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್ ಮಾಡಿರುವುದು ಕಂಡು ಬಂತು. ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ, ವಿಶ್ವಾಸ್ ಬಂಧನಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಸಿಗಲಿಲ್ಲ. ಆದರೆ, ವಿಶ್ವಾಸ್ ಕುಮಾರ್ ಅವರು ಆ ವಿಮಾನದಲ್ಲಿದ್ದ ಬಗ್ಗೆ ಬೋರ್ಡಿಂಗ್ ಪಾಸ್‌ನಲ್ಲಿ ಅವರ ಹೆಸರು ಮತ್ತು ಸೀಟಿನ ಸಂಖ್ಯೆ 11ಎ ಉಲ್ಲೇಖಿಸಿರುವುದರ ಕುರಿತು ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿ ಸಿಕ್ಕಿತು. ಮುಂದುವರಿದು, 12ರಂದು ಪತನಗೊಂಡ ವಿಮಾನದಲ್ಲಿದ್ದ ಪ್ರಯಾಣಿಕರ ಪಟ್ಟಿಯನ್ನು ಪರಿಶೀಲಿಸಿದಾಗ ಅದರಲ್ಲಿ ವಿಶ್ವಾಸ್ ಹೆಸರು ಇತ್ತು. ಅಹಮದಾಬಾದ್ ನಗರದ ವಲಯ–2ರ ಹೆಚ್ಚುವರಿ ಪೊಲೀಸ್ ಕಮಿಷನರ್ ಜೈಪಾಲ್ ಸಿಂಗ್ ರಾಥೋಡ್ ಅವರನ್ನು ಸಂಪರ್ಕಿಸಿದಾಗ, ವಿಶ್ವಾಸ್ ಅವರನ್ನು ಬಂಧಿಸಲಾಗಿದೆ ಎಂಬುದು ಸುಳ್ಳು ಎಂದು ದೃಢಪಡಿಸಿದರು ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.