ಭಾರತದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 2025ರ ಮೇನಲ್ಲಿ ಪಾಕಿಸ್ತಾನದೊಂದಿಗೆ ನಡೆದ ಸಂಘರ್ಷದಲ್ಲಿ ಭಾರತವು 6 ಜೆಟ್‌ಗಳು ಮತ್ತು 250 ಸೈನಿಕರನ್ನು ಕಳೆದುಕೊಂಡಿರುವುದಾಗಿ ಜನರಲ್ ಉಪೇಂದ್ರ ದ್ವಿವೇದಿ ಅವರು ಒಪ್ಪಿಕೊಂಡಿದ್ದಾರೆ ಎಂದು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
40 ಸೆಕೆಂಡ್‌ನ ವಿಡಿಯೊ ಅನ್ನು ಹಿಯಾ ಡೀಪ್‌ಫೇಕ್ ವಾಯ್ಸ್ ಡಿಟೆಕ್ಟರ್ ಮತ್ತು ಯುಬಿ ಮೀಡಿಯಾ ಫೊರೆನ್ಸಿಕ್ ಲ್ಯಾಬ್‌ನ ಡೀಪ್‌ಫೇಕ್–ಒ–ಮೀಟರ್ ಮೂಲಕ ಪರೀಕ್ಷೆಗೊಳಪಡಿಸಿದಾಗ, ವಿಡಿಯೊದಲ್ಲಿರುವ ಜನರಲ್ ದ್ವಿವೇದಿ ಅವರ ಧ್ವನಿಯು ನಿಜವಾದುದಲ್ಲ, ತಿರುಚಿರುವಂಥದ್ದು ಎನ್ನುವುದು ಖಚಿತವಾಯಿತು. ತಮಿಳುನಾಡಿನ ಚೆನ್ನೈನಲ್ಲಿರುವ ಮದ್ರಾಸ್ ಐಐಟಿಯಲ್ಲಿ 2025ರ ಆ.4ರಂದು ಮಾತನಾಡಿದ ವಿಡಿಯೊ ಅದು. ಅದರಲ್ಲಿರುವ ನಿಜವಾದ ಧ್ವನಿಯ ಮೇಲೆ ಎಐ ತಂತ್ರಜ್ಞಾನದ ಮೂಲಕ ಹೊಸ ಧ್ವನಿಯನ್ನು ಅಳವಡಿಸಲಾಗಿದೆ. ಆ ವಿಡಿಯೊ ಅನ್ನು ಹಂಚಿಕೊಳ್ಳುತ್ತಿರುವ ಮೂಲಕ ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.