ADVERTISEMENT

ಜಾಲತಾಣದಲ್ಲಿ ಹರಿದಾಡುತ್ತಿರುವುದು ಧರ್ಮೇಂದ್ರ ಅಂತಿಮಯಾತ್ರೆಯ ವಿಡಿಯೊ ಅಲ್ಲ

ಫ್ಯಾಕ್ಟ್ ಚೆಕ್
Published 2 ಡಿಸೆಂಬರ್ 2025, 23:30 IST
Last Updated 2 ಡಿಸೆಂಬರ್ 2025, 23:30 IST
.
.   

ಹೂವಿನಿಂದ ಅಲಂಕರಿಸಲಾದ ವಾಹನವೊಂದರ ಸುತ್ತ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿರುವ ವಿಡಿಯೊ ತುಣುಕೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಬಳಕೆದಾರರೊಬ್ಬರು ಪೋಸ್ಟ್‌ ಮಾಡಿದ್ದು, ಇದು ಇತ್ತೀಚೆಗೆ ನಿಧನರಾದ ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರ ಅಂತಿಮಯಾತ್ರೆಯ ವಿಡಿಯೊ ಎಂದು  ಪ್ರತಿಪಾದಿಸಲಾಗಿದೆ. ಆದರೆ, ಇದು ಸುಳ್ಳು.

ವಿಡಿಯೊ ತುಣುಕಿನ ಕೀಫ್ರೇಮ್‌ ಒಂದನ್ನು ರಿವರ್ಸ್‌ ಇಮೇಜ್‌ ವಿಧಾನದಲ್ಲಿ ಗೂಗಲ್ ಲೆನ್ಸ್ ಬಳಸಿ ಹುಡುಕಿದಾಗ, ಇನ್ನೂ ಕೆಲವರು ಇದೇ ವಿಡಿಯೊವನ್ನು ಹಂಚಿಕೊಂಡಿರುವುದು ಕಂಡು ಬಂತು. ಇನ್ನಷ್ಟು ಹುಡುಕಾಟ ನಡೆಸಿದಾಗ, ಇನ್‌ಸ್ಟಾಗ್ರಾಂನಲ್ಲಿ ಸೆಪ್ಟೆಂಬರ್‌ 21ರಂದು ಪೋಸ್ಟ್‌ ಮಾಡಲಾದ ಇದೇ ವಿಡಿಯೊ ಸಿಕ್ಕಿತು. ಅದರ ಶೀರ್ಷಿಕೆಯ ಪ್ರಕಾರ, ಅದು ಅಸ್ಸಾಂನ ಗಾಯಕ ಜುಬೀನ್‌ ಗರ್ಗ್‌ ಅವರ ಅಂತಿಮಯಾತ್ರೆಯ ವಿಡಿಯೊ. ಹಾಗಾಗಿ, ಈ ವಿಡಿಯೊ ಇತ್ತೀಚಿನದ್ದಲ್ಲ ಮತ್ತು ಧರ್ಮೇಂದ್ರ ಅವರಿಗೆ ಸಂಬಂಧಿಸಿದ್ದಲ್ಲ ಎಂಬುದು ಸ್ಪಷ್ಟವಾಯಿತು. ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಾಟ ನಡೆಸಿದಾಗ, ಸೆಪ್ಟೆಂಬರ್‌ 22ರಂದು ಇಂಡಿಯಾ ಟೈಮ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಕಟವಾದ ವಿಡಿಯೊ ಸಿಕ್ಕಿತು. ಗುವಾಹಟಿಯಲ್ಲಿ ಸಾವಿರಾರು ಜನರು ಜುಬೀನ್‌ ಗರ್ಗ್‌ ಅವರಿಗೆ ಭಾವುಕ ವಿದಾಯ ಹೇಳಿದರು ಎಂದು ವಿಡಿಯೊದ ಒಕ್ಕಣೆಯಲ್ಲಿತ್ತು. ಬೇರೆ ಮಾಧ್ಯಮಗಳು ಕೂಡ ಈ ಬಗ್ಗೆ ವರದಿ ಮಾಡಿದ್ದವು. ಧರ್ಮೇಂದ್ರ ಅವರ ನಿಧನ ಕುರಿತಾಗಿ ಇನ್ನಷ್ಟು ವಿವರಗಳನ್ನು ಹುಡುಕಿದಾಗ, ಅವರ ಅಂತ್ಯಸಂಸ್ಕಾರ ಮುಂಬೈನ ಪವನ್‌ ಹಂಸ ಚಿತಾಗಾರದಲ್ಲಿ ನಡೆದಿರುವ ಬಗ್ಗೆ ವರದಿಗಳು ಸಿಕ್ಕವು. ‌ಹೀಗಾಗಿ, ಇದು ಹಳೆಯ ವಿಡಿಯೊವಾಗಿದ್ದು ಧರ್ಮೇಂದ್ರ ಅವರಿಗೆ ಸಂಬಂಧಿಸಿದ್ದಲ್ಲ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT