:
ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಎನ್‌ಡಿಎಯಿಂದ ಹೊರ ಬಂದಿದ್ದಾರೆ ಎಂದು ಹೇಳಿಕೊಳ್ಳುತ್ತಾ, ಅವರು ಮಾಧ್ಯಮಗಳೊಂದಿಗೆ ಮಾತನಾಡುವ ವಿಡಿಯೊ ತುಣುಕೊಂದನ್ನು ‘ಎಕ್ಸ್’ ಬಳಕೆದಾರರೊಬ್ಬರು ಶುಕ್ರವಾರ ಪೋಸ್ಟ್ ಮಾಡಿದ್ದರು. ಇದನ್ನು ಹಲವರು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು. ವಿಡಿಯೊ ಈಗಿನದ್ದಲ್ಲ.
ವಿಡಿಯೊ ತುಣಕನ್ನು ಇನ್‌ವಿಡ್ ಟೂಲ್ ಮೂಲಕ ಹುಡುಕಿದಾಗ, ಅದರಲ್ಲಿ ಹಲವು ಕೀಫ್ರೇಮ್‌ಗಳು ಕಂಡು ಬಂದವು. ಒಂದು ಕೀ ಫ್ರೇಮ್ ಅನ್ನು ಗೂಗಲ್ ಲೆನ್ಸ್‌ನಲ್ಲಿ ಹಾಕಿದಾಗ ಈ ವರ್ಷದ ಜನವರಿ 28ರಂದು ಮಾಧ್ಯಮವೊಂದರ ಯುಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾದ ವಿಡಿಯೊ ಸಿಕ್ಕಿತು. ಜೆಡಿಯು ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಹಾಗೂ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅದರಲ್ಲಿ ಹೇಳಲಾಗಿತ್ತು. ಜೆಡಿಯು ‘ಮಹಾಘಟಬಂಧನ್’ ಕೂಟದಿಂದ ಹೊರಬಂದಿದ್ದ ಸಂದರ್ಭದ ವಿಡಿಯೊ ಅದಾಗಿತ್ತು. ಇದರ ಆಧಾರದಲ್ಲಿ ನಿರ್ದಿಷ್ಟ ಪದಗಳನ್ನು ಹಾಕಿ ಇಂಟರ್‌ನೆಟ್‌ನಲ್ಲಿ ಹುಡುಕಿದಾಗ ಬೇರೆ ಮಾಧ್ಯಮದಲ್ಲೂ ಈ ಬಗ್ಗೆ ವರದಿ ಪ್ರಕಟವಾಗಿರುವುದು ಕಂಡು ಬಂತು. ಮೈತ್ರಿಕೂಟ ತೊರೆದ ಬಳಿಕ ಮಾಧ್ಯಮಗಳೊಂದಿಗೆ ನಿತೀಶ್ ಮಾತನಾಡಿದ್ದ ವಿಡಿಯೊ ಅದಾಗಿತ್ತು. ಆ ಹಳೆಯ ವಿಡಿಯೊವನ್ನೇ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ನಿತೀಶ್‌ಕುಮಾರ್ ಅವರು ಈಗ ಎನ್‌ಡಿಎ ತೊರೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.