
ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆಯಲ್ಲಿ ಭಾರತ ಭಾಗಿಯಾಗಿರುವುದನ್ನು ಅಲ್ ಜಝೀರಾ ಮಾಧ್ಯಮವು ದೃಢಪಡಿಸಿದೆ ಎಂದು ಪ್ರತಿಪಾದಿಸುತ್ತಾ ಅಲ್ ಜಝೀರಾದಲ್ಲಿ ಪ್ರಸಾರವಾಗಿದೆ ಎನ್ನಲಾದ ವಿಡಿಯೊ ತುಣುಕೊಂದನ್ನು ಪಾಕಿಸ್ತಾನ ಡಿಫೆನ್ಸ್ (@PakDef) ಎಂಬ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಅಲ್ ಜಝೀರಾದ ವರದಿಗಾರರೊಬ್ಬರು, ‘ಈ ಹತ್ಯೆಯಲ್ಲಿ ಭಾರತ ಭಾಗಿಯಾಗಿರುವ ಬಗ್ಗೆ ಅನುಮಾನಗಳು ಹೆಚ್ಚಾಗಿವೆ. ಭಾರತದ ಪರವಾಗಿರುವ ಸಂಘಟನೆಗಳು ಇದರ ಹಿಂದಿವೆ’ ಎಂದು ಹೇಳಿರುವುದು ವಿಡಿಯೊದಲ್ಲಿದೆ. ಆದರೆ, ಇದು ಸುಳ್ಳು ಸುದ್ದಿ.
ಇದರ ಮೂಲ ವಿಡಿಯೊಕ್ಕಾಗಿ ಇಂಟರ್‌ನೆಟ್‌ನಲ್ಲಿ ಹುಡುಕಾಟ ನಡೆಸಿದಾಗ ಅಲ್ ಜಝೀರಾದಲ್ಲಿ ‘ಬಾಂಗ್ಲಾದೇಶದಲ್ಲಿ ಆಕ್ರೋಶ: ವಿದ್ಯಾರ್ಥಿ ನಾಯಕನ ಹತ್ಯೆಯ ನಂತರ ಹಿಂಸಾತ್ಮಕ ಪ್ರತಿಭಟನೆಗಳು’ ಎಂಬ ತಲೆಬರಹದಲ್ಲಿ ಇದೇ 19ರಂದು ಪ್ರಕಟವಾದ ವರದಿ ಸಿಕ್ಕಿತು. ಇಡೀ ವರದಿಯನ್ನು ಪರಿಶೀಲಿಸಿದಾಗ, ಯುವನಾಯಕನ ಸಾವಿನಲ್ಲಿ ಭಾರತದ ಪಾತ್ರ ಇದೆ ಎಂಬುದರ ಪ್ರಸ್ತಾಪ ಎಲ್ಲೂ ಇರಲಿಲ್ಲ. ವಿಡಿಯೊವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ವಿಡಿಯೊದಲ್ಲಿ ಮಾತನಾಡುವ ವರದಿಗಾರನ ಮುಖದ ಹಾವಭಾವ ಮತ್ತು ಪದಗಳ ಉಚ್ಚಾರಣೆಯಲ್ಲಿ ವ್ಯತ್ಯಾಸವಿರುವುದು ಕಂಡು ಬಂತು. ಅನುಮಾನ ಬಂದು ವಿಡಿಯೊದಲ್ಲಿರುವ ಧ್ವನಿ ಮತ್ತು ವಿಡಿಯೊವನ್ನು ಪ್ರತ್ಯೇಕಿಸಿ ಡೀಪ್‌ಫೇಕ್–ಒ–ಮೀಟರ್ ಎಂಬ ಟೂಲ್ ಮೂಲಕ ಪರಿಶೀಲನೆಗೆ ಒಳಪಡಿಸಿದಾಗ ಆಡಿಯೊ ಮತ್ತು ವಿಡಿಯೊ ಎರಡನ್ನೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಸೃಷ್ಟಿಸಿರುವುದು ಗೊತ್ತಾಯಿತು. ಇದಕ್ಕೆ ಪೂರಕವಾಗಿ, ಬಾಂಗ್ಲಾದ ತನಿಖಾಧಿಕಾರಿಗಳು ಹಾದಿ ಹತ್ಯೆಯ ತನಿಖೆಯನ್ನು ಇನ್ನೂ ನಡೆಸುತ್ತಿವೆ. ಎಐ ತಂತ್ರಜ್ಞಾನವನ್ನು ಬಳಸಿಕೊಂಡು ವರದಿಯನ್ನು ತಿರುಚಿ ಭಾರತದ ವಿರುದ್ಧ ನಕಾರಾತ್ಮಕ ಕಥನವನ್ನು ಸೃಷ್ಟಿಸಲಾಗಿದೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.