ADVERTISEMENT

Fact Check: ಮನಮೋಹನ್‌ ಸಿಂಗ್‌, ಮೋದಿ ಅವರನ್ನು ಹೊಗಳಿದ್ದಾರೆ ಎನ್ನುವುದು ಸುಳ್ಳು

ಫ್ಯಾಕ್ಟ್ ಚೆಕ್
Published 22 ಫೆಬ್ರುವರಿ 2024, 19:27 IST
Last Updated 22 ಫೆಬ್ರುವರಿ 2024, 19:27 IST
fact check
fact check   

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಮಾಡಿದ್ದಾರೆ ಎನ್ನಲಾದ ಟ್ವೀಟ್‌ನ ಸ್ಕ್ರೀನ್‌ಶಾಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ನಾನೂ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೆ. ಆದರೆ, ಕಾಂಗ್ರೆಸ್‌ ಪಕ್ಷ ಮಾತ್ರ ನನ್ನ ಅಪೇಕ್ಷೆಗೆ ತಕ್ಕಂತೆ ಕೆಲಸ ಮಾಡುವ ಅವಕಾಶವನ್ನೇ ಕೊಡಲಿಲ್ಲ. ನರೇಂದ್ರ ಮೋದಿ ಅವರು ಅವರ ನಿರ್ಧಾರವನ್ನು ಅವರೇ ತೆಗೆದುಕೊಳ್ಳುತ್ತಾರೆ. ಅದಕ್ಕಾಗಿಯೇ ದೇಶ ಪ್ರಗತಿ ಸಾಧಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಸ್ಕ್ರೀನ್‌ಶಾಟ್‌ನಲ್ಲಿ ಬರೆದುಕೊಳ್ಳಲಾಗಿದೆ. ಮತ್ತೊಂದು ಟ್ವೀಟ್‌ ಅನ್ನು ಕೂಡ ಇದೇ ಸ್ಕ್ರೀನ್‌ಶಾಟ್‌ಗೆ ಸೇರಿಸಲಾಗಿದೆ. ‘ಮೋದಿ ಅವರಂತೆ ಒಬ್ಬ ನಾಯಕ, ಒಬ್ಬ ಪ್ರಧಾನಿ ಇಡೀ ಜಗತ್ತಿನಲ್ಲಿಯೇ ಮತ್ತೆಂದೂ ಹುಟ್ಟುವುದಿಲ್ಲ. ಇದನ್ನು ನಾನಿಂದು ಬಹಿರಂಗವಾಗಿಯೇ ಹೇಳುತ್ತಿದ್ದೇನೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಇದೆ. ‘ಕೊನೆಗೂ ಸರ್ದಾರರ ಆತ್ಮಸಾಕ್ಷಿ ಜಾಗರೂಕವಾಗಿದೆ’ ಎಂದೂ ಸ್ಕ್ರೀನ್‌ಶಾಟ್‌ನಲ್ಲಿ ಇದೆ. ಆದರೆ, ಇದು ಸುಳ್ಳು ಸುದ್ದಿ.

ಮನಮೋಹನ್‌ ಸಿಂಗ್‌ ಅವರು ಮಾಡಿದ್ದಾರೆ ಎನ್ನಲಾದ ಎರಡು ಟ್ಚೀಟ್‌ಗಳನ್ನು ಕೊಲಾಜ್‌ ಮಾಡಿ, ನಂತರ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಲಾಗಿದೆ. ಈ ಎರಡೂ ಟ್ವೀಟ್‌ಗಳನ್ನು ‘@manmohan_5’ ಎನ್ನುವ ಖಾತೆಯಿಂದ ಮಾಡಲಾಗಿದೆ. ಹಿಂದಿ ಹಾಗೂ ಇಂಗ್ಲಿಷ್‌ ಎರಡರಲ್ಲಿಯೂ ಟ್ವೀಟ್‌ ಇರುವ ಸ್ಕ್ರೀನ್‌ಶಾಟ್‌ ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಲವು ವರ್ಷಗಳಿಂದ ಇದೇ ಸ್ಕ್ರೀನ್‌ಶಾಟ್‌ ಅನ್ನು ಬಳಸಿಕೊಂಡು ತಪ್ಪು ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ. ನಿಜದಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಟ್ವಿಟರ್‌ ಖಾತೆಯೇ ಇಲ್ಲ. ‘@manmohan_5’ ಈ ಖಾತೆಯನ್ನು ಹುಡುಕಿದರೆ, ‘ಈ ಖಾತೆ ನಿಷ್ಕ್ರಿಯವಾಗಿದೆ’ ಎಂದು ಬರುತ್ತಿದೆ. ‘ಸೋನಿಯಾ ಹಾಗೂ ಮನಮೋಹನ್‌ ಸಿಂಗ್‌ ಅವರು ಟ್ವಿಟರ್‌ಗೆ ಬರಬೇಕು ಅನ್ನಿಸಿದರೆ, ಅವರು ವೆರಿಫೈಡ್‌ ಖಾತೆಯೊಂದಿಗೆ ಬರುತ್ತಾರೆ’ ಎಂದು ಕಾಂಗ್ರೆಸ್‌ ನಾಯಕ ಸರಲ್‌ ಪಟೇಲ್‌ ಅವರು 2020ರಲ್ಲಿಯೇ ಟ್ವೀಟ್‌ ಮಾಡಿದ್ದರು. ಆದ್ದರಿಂದ, ಮನಮೋಹನ್‌ ಸಿಂಗ್‌ ಅವರು ಪ್ರಧಾನಿ ಮೋದಿ ಅವರನ್ನು ಈ ರೀತಿ ಎಲ್ಲಿಯೂ ಹೊಗಳಲಿಲ್ಲ ಮತ್ತು ಇದೊಂದು ಸುಳ್ಳು ಸುದ್ದಿ ಎಂದು ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT