ADVERTISEMENT

ಫ್ಯಾಕ್ಟ್‌ಚೆಕ್:ಜ್ಞಾನವಾಪಿ ಸಮೀಕ್ಷೆ ವಿರೋಧಿಸಿದವರ ಮೇಲೆ ಲಾಠಿ ಪ್ರಹಾರ ನಿಜವೇ?

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 20:50 IST
Last Updated 2 ಜೂನ್ 2022, 20:50 IST
   

ಗುಂಪೊಂದರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡುತ್ತಿರುವ 28 ಸೆಕೆಂಡುಗಳ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರು ಜನರನ್ನು ಎಳೆದಾಡುವ ದೃಶ್ಯವೂ ವಿಡಿಯೊದಲ್ಲಿ ಇದೆ. ಉತ್ತರ ಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿರುವ ವಿಡಿಯೊ ಇದು. ಈ ವಿಡಿಯೊಗೆ, ‘ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆಯನ್ನು ನಿಲ್ಲಿಸುವಂತೆ ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸರು ಪ್ರತಿಭಟನಕಾರರ ಮೇಲೆಯೇ ಸಮೀಕ್ಷೆ ನಡೆಸಿ, ಬುದ್ಧಿ ಕಲಿಸಿದ್ದಾರೆ’ ಎಂದು ವಿವರಣೆ ನೀಡಲಾಗಿದೆ. ಪೊಲೀಸರು ಸರಿಯಾಗಿ ಮಾಡಿದ್ದಾರೆ ಎಂದು ಹಲವರು ಟ್ವೀಟ್‌ ಮಾಡಿದ್ದಾರೆ.

ಈ ವಿಡಿಯೊ ಜೊತೆ ನೀಡಲಾಗಿರುವ ಮಾಹಿತಿ ಸುಳ್ಳು ಎಂದು ‘ದಿ ಲಾಜಿಕಲ್‌ ಇಂಡಿಯನ್‌’ ವೇದಿಕೆ ವರದಿ ಮಾಡಿದೆ. ನವಭಾರತ್‌ ಟೈಮ್ಸ್‌ ವೆಬ್‌ಸೈಟ್‌ನಲ್ಲಿ ವರದಿ ಸಮೇತ ಈ ವಿಡಿಯೊವನ್ನು 2021ರ ಜುಲೈ 3ರಂದು ಪ್ರಕಟಿಸಲಾಗಿದೆ. ಉತ್ತರ ಪ್ರದೇಶದ ಪ್ರಯಾಗರಾಜ್‌ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚುನಾವಣೆಯ ಮತ ಎಣಿಕೆಯಲ್ಲಿ ಮೋಸ ನಡೆದಿದೆ ಎಂದು ಸಮಾಜವಾದಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು ಎಂದು ಲಾಜಿಕಲ್ ಇಂಡಿಯನ್‌ ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT