ADVERTISEMENT

ದಾವೂದ್‌ನನ್ನು ಕಾಂಗ್ರೆಸ್‌ನ ಸು‍ಪ್ರಿಯಾ ಸಂದರ್ಶಿಸಿದ್ದರು ಎಂಬುದು ಸುಳ್ಳು ಸುದ್ದಿ

ಫ್ಯಾಕ್ಟ್ ಚೆಕ್
Published 2 ಜನವರಿ 2024, 0:09 IST
Last Updated 2 ಜನವರಿ 2024, 0:09 IST
fact check
fact check   

ಭಾರತಕ್ಕೆ ಅಗತ್ಯವಾಗಿ ಬೇಕಿರುವ ಭೂಗತಪಾತಕಿ ದಾವೂದ್‌ ಇಬ್ರಾಹಿಂ ಎದುರಿಗೆ ಮಹಿಳೆಯೊಬ್ಬರು ಕುಳಿತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಮಹಿಳೆಯನ್ನು ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನಾತೆ ಎಂದೂ ಹೇಳಲಾಗುತ್ತಿದೆ. ‘ದಾವೂದ್‌ ಇಬ್ರಾಹಿಂನೊಂದಿಗೆ ಪತ್ರಕರ್ತೆಯೊಬ್ಬರು ಕುಳಿತಿದ್ದಾರೆ. ಈ ಚಿತ್ರವನ್ನು 1987ರಲ್ಲಿ ಸೆರೆಹಿಡಿಯಲಾಗಿದೆ. ಈ ಪತ್ರಕರ್ತೆಯು ಈಗಿನ ‘ಕಾಂಗ್ರೆಸ್‌’ ವಕ್ತಾರೆ ‘ಸುಪ್ರಿಯಾ ಶ್ರೀನಾತೆ’. ಈಗ ನಿಮಗೆ ಕಾಂಗ್ರೆಸ್‌ ಏನೆಂದು ತಿಳಿಯುತ್ತದೆ’ ಎಂದು ಚಿತ್ರದೊಂದಿಗೆ ಪೋಸ್ಟ್‌ ಅನ್ನೂ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.

ಈ ಚಿತ್ರವನ್ನು 2023ರ ಜೂನ್‌ನಲ್ಲಿ ಪತ್ರಕರ್ತೆ ಶೀಲಾ ಭಟ್‌ ಅವರು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ದಾವೂದ್‌ನನ್ನು 1987ರಲ್ಲಿ ದುಬೈನ ಪರ್ಲ್‌ ಕಟ್ಟಡದಲ್ಲಿ ಸಂದರ್ಶಿಸಿದ್ದು’ ಎಂದು ಶೀಲಾ ಅವರು ಬರಹವನ್ನು ಬರೆದುಕೊಂಡಿದ್ದಾರೆ. ಸರಣಿ ಪೋಸ್ಟ್‌ಗಳಲ್ಲಿ ಸಂದರ್ಶನದ ಕುರಿತು ಹಲವು ಮಾಹಿತಿಗಳನ್ನೂ ಅವರು ಹಂಚಿಕೊಂಡಿದ್ದಾರೆ. 1988ರಲ್ಲಿ ಈ ಸಂದರ್ಶನವು ‘ಇಲ್ಲಸ್ಟ್ರೇಟೆಡ್‌ ವೀಕ್ಲಿ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು, ಪತ್ರಿಕೆಯ ಮುಖಪುಟವನ್ನೂ ಅವರು ಹಂಚಿಕೊಂಡಿದ್ದಾರೆ. ತಮ್ಮ ಕುರಿತು ಸುಳ್ಳು ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಸುಪ್ರಿಯಾ, ‘ನಾನು ಹುಟ್ಟಿದ್ದು, ಅಕ್ಟೋಬರ್‌ 27, 1977ರಲ್ಲಿ. ಈ ಸಂದರ್ಶನ ನಡೆದಾಗ ನನಗೆ 10 ವರ್ಷವಾಗಿತ್ತು’ ಎಂದು ಹೇಳಿದ್ದಾರೆ. ಆದ್ದರಿಂದ, ಚಿತ್ರದಲ್ಲಿ ಇರುವವರು ಪತ್ರಕರ್ತೆ ಶೀಲಾ ಭಟ್‌ ಅವರೇ ಹೊರತು ಕಾಂಗ್ರೆಸ್‌ ವಕ್ತಾರೆ ಸು‍ಪ್ರಿಯಾ ಅಲ್ಲ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT