ಹರಿಯಾಣದ ಕುರುಕ್ಷೇತ್ರದ ದೇವಸ್ಥಾನವೊಂದರ ಪ್ರಾಂಗಣದಲ್ಲಿ ಮುಸ್ಲಿಮರ ಗೋರಿಯನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗೀತೋಪದೇಶ ನಡೆದಿದ್ದ ಸ್ಥಳದಲ್ಲಿ ಈ ಗೋರಿ ನಿರ್ಮಾಣವಾಗಿದೆ ಎಂದು ಕೆಲವರು ಉಲ್ಲೇಖಿಸಿದ್ದಾರೆ. ಗೋರಿನಿರ್ಮಾಣದ ಹಿಂದೆ ದೇವಸ್ಥಾನವನ್ನು ಒತ್ತುವರಿ ಮಾಡುವ ಹುನ್ನಾರವಿದೆ ಎಂದು ಜಾಲತಾಣ ಬಳಕೆದಾರರು ಆರೋಪಿಸಿದ್ದಾರೆ.
ವಿಡಿಯೊದಲ್ಲಿ ಉಲ್ಲೇಖಿಸಿರುವಂತೆ ಕುರುಕ್ಷೇತ್ರದಲ್ಲಿ ಗೀತೋಪದೇಶ ನಡೆದಿದ್ದ ಸ್ಥಳದಲ್ಲಿ ಇಸ್ಲಾಮ್‌ಗೆ ಸಂಬಂಧಿಸಿದ ಗೋರಿ ಪತ್ತೆಯಾಗಿಲ್ಲ ಎಂದು ಫ್ಯಾಕ್ಟ್ಲಿ ವೆಬ್‌ಸೈಟ್ ವರದಿ ಮಾಡಿದೆ. ಭೋಕ್ರಾ ಎಂಬ ಸ್ಥಳದಲ್ಲಿ ಗೋರಿ ಸ್ವರೂಪದ ನಿರ್ಮಾಣ ಕಂಡುಬಂದಿದೆ. ಬ್ರಾಹ್ಮಣರ ಕುಟುಂಬವೊಂದು ತಮ್ಮ ಪೂರ್ವಜರ ಸಮಾಧಿಗಳನ್ನು ಈ ಜಾಗದಲ್ಲಿ ನಿರ್ಮಿಸಿದೆ. ಇದನ್ನು ಅಧಿಕಾರಿಗಳು ಹಾಗೂ ಪೊಲೀಸರು ಖಚಿತಪಡಿಸಿದ್ದಾರೆ. ಕೆಲವು ಕಿಡಿಗೇಡಿಗಳು ಈ ಸಮಾಧಿಯ ಮೇಲೆ ಚಾದರ್ ಹೊದಿಸಿ, ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದು ದಾರಿತಪ್ಪಿಸುವ ವಿಡಿಯೊ ಎಂದು ವೆಬ್‌ಸೈಟ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.