ADVERTISEMENT

ಫ್ಯಾಕ್ಟ್‌ ಚೆಕ್‌: ಗಾಂಧೀಜಿ ಸಂವಿಧಾನ ರಚಿಸಿದರು ಎಂದು ರಾಹುಲ್ ಗಾಂಧಿ ಹೇಳಿಲ್ಲ

ಫ್ಯಾಕ್ಟ್ ಚೆಕ್
Published 2 ಸೆಪ್ಟೆಂಬರ್ 2025, 23:30 IST
Last Updated 2 ಸೆಪ್ಟೆಂಬರ್ 2025, 23:30 IST
.
.   

ಕಾಂಗ್ರೆಸ್‌ ಮುಖಂಡ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮಾತನಾಡುತ್ತಿರುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 25 ಸೆಕೆಂಡುಗಳ ಈ ತುಣುಕಿನಲ್ಲಿ ರಾಹುಲ್‌ ಗಾಂಧಿ ಅವರು ‘ಸಂವಿಧಾನವನ್ನು ರಚಿಸಿದವರು ಯಾರು? ಗಾಂಧೀಜಿಯವರು ತಮ್ಮ ಜೀವನವನ್ನೇ ಮುಡುಪಾಗಿಟ್ಟು ಸಂವಿಧಾನ ರಚಿಸಿದರು’ ಎಂದು ಹೇಳುತ್ತಿರುವುದು ಕೇಳಿಸುತ್ತದೆ. ಈ ಹೇಳಿಕೆಗಾಗಿ ಅವರನ್ನು ಹಲವರು ಟೀಕಿಸುತ್ತಲೂ ಇದ್ದಾರೆ. ಆದರೆ, ಇದು ಸುಳ್ಳು. ಹೇಳಿಕೆ ಪೂರ್ಣ ನಿಜವಲ್ಲ. 

ವಿಡಿಯೊ ತುಣುಕನ್ನು ಹಲವು ಕೀ ಫ್ರೇಮ್‌ಗಳಾಗಿ ವಿಂಗಡಿಸಿ, ಕೆಲವನ್ನು ರಿವರ್ಸ್‌ ಇಮೇಜ್‌ ವಿಧಾನದಲ್ಲಿ ಹಾಕಿ ಹುಡುಕಿದಾಗ, ರಾಹುಲ್‌ ಗಾಂಧಿ ಅವರ ಅಧಿಕೃತ ಯುಟ್ಯೂಬ್‌ ಚಾನೆಲ್‌ನಲ್ಲಿ ಆಗಸ್ಟ್‌ 21ರಂದು ಪೋಸ್ಟ್‌ ಮಾಡಲಾದ ವಿಡಿಯೊ ಸಿಕ್ಕಿತು. 22.25 ನಿಮಿಷಗಳ ಈ ವಿಡಿಯೊವು ಬಿಹಾರದ ಮುಂಗೆರ್‌ನಲ್ಲಿ ನಡೆದ ‘ಮತದಾರರ ಅಧಿಕಾರ ಯಾತ್ರೆ’ಯಲ್ಲಿ ಮಾಡಿದ ಭಾಷಣದ್ದಾಗಿದೆ. ವಿಡಿಯೊದಲ್ಲಿ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌ ಅವರು ಕೂಡ ಇರುವುದು ಕಾಣಿಸುತ್ತದೆ. ಆ ವಿಡಿಯೊದ 19.59 ನಿಮಿಷದ ನಂತರದ ತುಣುಕು ಸಾಮಾಜಿಕ ಜಾಲಜಾಣದಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿ ರಾಹುಲ್‌ ಅವರು, ‘ಸಂವಿಧಾನವನ್ನು ರಚಿಸಿದವರು ಯಾರು? ಅಂಬೇಡ್ಕರ್‌ ಅವರು ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟು, ಸಂವಿಧಾನವನ್ನು ರಚಿಸಿದರು. ಗಾಂಧೀಜಿಯವರು ತಮ್ಮ ಜೀವನವನ್ನೇ ನೀಡಿ ಸಂವಿಧಾನ ರಚಿಸಿದರು. ಮತ ಕಳವು ಪ್ರಕರಣವು ಸಂವಿಧಾನದ ಮೇಲಿನ ದಾಳಿ, ನಿಮ್ಮನ್ನು ಸುರಕ್ಷಿತವಾಗಿ ಇಟ್ಟಿರುವ ಈ ಸಂವಿಧಾನದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು. ಇದು ನಿಮ್ಮ ಧ್ವನಿ. ಅದನ್ನು ಮೋದಿ ಮತ್ತು ಅದಾನಿ ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಅಂಬೇಡ್ಕರ್‌ ಅವರ ಸಂವಿಧಾನವನ್ನು ನಾಶ ಮಾಡಲು ಅವರು ಬಯಸಿದ್ದಾರೆ. ಅದನ್ನು (ಸಂವಿಧಾನ) ನಿರ್ಮೂಲನೆ ಮಾಡಲು ಯಾವುದೇ ಕಾರಣಕ್ಕೂ ನಾವು ಅವಕಾಶ ನೀಡುವುದಿಲ್ಲ’ ಎಂದು ಹೇಳುವುದು ಕೇಳಿಸುತ್ತದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿರುವ ವಿಡಿಯೊದಲ್ಲಿ ಅಂಬೇಡ್ಕರ್‌ ಅವರ ಹೆಸರು ಕೇಳುವುದಿಲ್ಲ. ಕೇವಲ ಗಾಂಧೀಜಿಯವರ ಹೆಸರು ಕೇಳುವಂತೆ ಎಡಿಟ್‌ ಮಾಡಲಾಗಿದೆ. ಮೂಲ ವಿಡಿಯೊದಲ್ಲಿ ರಾಹುಲ್‌ ಗಾಂಧಿ ಅವರು ಮೊದಲು ಅಂಬೇಡ್ಕರ್‌ ಅವರ ಹೆಸರು ಹೇಳಿ, ನಂತರ ಗಾಂಧೀಜಿಯವರ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ಆಲ್ಟ್‌ನ್ಯೂಸ್‌ ಫ್ಯಾಕ್ಟ್‌ ಚೆಕ್‌ ವರದಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT