ಹರಿಯಾಣ ಮೂಲದ ಯುಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಪೊಲೀಸರು ಬಂಧಿಸಿದ ನಂತರ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಇರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಜ್ಯೋತಿ ಹಾಗೂ ರಾಹುಲ್ ಅವರ ನಡುವೆ ಪರಿಚಯ ಇದೆ ಎಂದೂ ಆಪರೇಷನ್ ಸಿಂಧೂರದ ವಿಚಾರದಲ್ಲಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ನ ವರ್ತನೆಯನ್ನು ಈ ಚಿತ್ರಗಳ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು ಎಂದೂ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ಪೋಸ್ಟ್‌ನಲ್ಲಿರುವ ಚಿತ್ರಗಳ ಪೈಕಿ ಒಂದು ಚಿತ್ರದಲ್ಲಿ ರಾಹುಲ್ ಅವರ ಜತೆಗಿರುವ ಮಹಿಳೆ ನೀಲಿ ಉಡುಪು ಧರಿಸಿರುವುದು ಕಾಣುತ್ತದೆ. ಅದನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, 2018ರ ಮೇ 7ರಂದು ‘ಇಂಡಿಯಾ ಟುಡೆ’ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯೊಂದು ಕಂಡಿತು. ಅದರಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ನೀಲಿ ಉಡುಪು ಧರಿಸಿದ ಮಹಿಳೆ ಇದ್ದು, ಅವರು ಕಾಂಗ್ರೆಸ್ ಮುಖಂಡರಾಗಿದ್ದ ಅದಿತಿ ಸಿಂಗ್ ಎನ್ನುವುದು ವರದಿಯಲ್ಲಿತ್ತು. ಅದಿತಿ ಸಿಂಗ್ ಅವರ ಮುಖದ ಜಾಗದಲ್ಲಿ ಜ್ಯೋತಿ ಮಲ್ಹೋತ್ರಾ ಮುಖವನ್ನು ಅಳವಡಿಸಿ, ತಪ್ಪು ತಿಳಿವಳಿಕೆ ಮೂಡಿಸುವ ಸಲುವಾಗಿ ಅದನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.