ADVERTISEMENT

FactCheck: ಮಾಲ್ಡೀವ್ಸ್ ಬೀಚ್‌ನಲ್ಲಿ ಸಿಕ್ಕಿದ್ದು ಯುವತಿ ಶವವಲ್ಲ, ಸೆಕ್ಸ್ ಡಾಲ್!

ಏಜೆನ್ಸೀಸ್
Published 13 ಜನವರಿ 2024, 3:36 IST
Last Updated 13 ಜನವರಿ 2024, 3:36 IST
<div class="paragraphs"><p>ಸುಳ್ಳು ಸುದ್ದಿಯೊಂದಿಗೆ ಹರಿದಾಡುತ್ತಿರುವ ಚಿತ್ರ</p></div>

ಸುಳ್ಳು ಸುದ್ದಿಯೊಂದಿಗೆ ಹರಿದಾಡುತ್ತಿರುವ ಚಿತ್ರ

   

ಮಾಲ್ಡೀವ್ಸ್‌ ಬೀಚ್‌ನಲ್ಲಿ ಪ್ರವಾಸಿ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಭಾರತ ಮತ್ತು ಮಾಲ್ಡೀವ್ಸ್‌ ನಡುವಣ ಬಾಂಧವ್ಯದಲ್ಲಿ ಬಿರುಕು ಮೂಡಿರುವ ಹೊತ್ತಿನಲ್ಲಿ ಕೇಳಿ ಬಂದಿರುವ ಈ ಸುದ್ದಿ ನಿಜವಲ್ಲ.

@Leeonie_2 ಎಂಬ ಟ್ವಿಟರ್‌/ಎಕ್ಸ್‌ ಖಾತೆಯಲ್ಲಿ ಶವದಂತೆ ಕಾಣುವ ಅಸ್ಪಷ್ಟ ಚಿತ್ರವೊಂದನ್ನು ಜನವರಿ 10ರಂದು ಹಂಚಿಕೊಳ್ಳಲಾಗಿದೆ. 'ಮಾಲ್ಡೀವ್ಸ್‌ ಪ್ರವಾಸಕ್ಕೆ ತೆರಳಿದ್ದ ಯುವತಿಯ ನಗ್ನ ಮೃತದೇಹ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಆಕೆಯನ್ನು ಹತ್ಯೆ ಮಾಡುವ ಮುನ್ನ ಕಿರುಕುಳ ನೀಡಿ, ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ' ಎಂಬ ಒಕ್ಕಣೆಯನ್ನೂ ಬರೆಯಲಾಗಿದೆ. ಈ ಚಿತ್ರ ನೋಡಿದ ಸಾಕಷ್ಟು ಮಂದಿ ಆಘಾತ ವ್ಯಕ್ತಪಡಿಸಿದ್ದಾರೆ.

ADVERTISEMENT

ಇದೊಂದೇ ಅಲ್ಲ, ಟ್ವಿಟರ್‌ನಲ್ಲಿ ಇಂತಹ ಇನ್ನಷ್ಟು ಪೋಸ್ಟ್‌ಗಳು ಹರಿದಾಡುತ್ತಿವೆ.

ವಾಸ್ತವವೇನು?
ಹರಿದಾಡುತ್ತಿರುವ ಚಿತ್ರದ ಬಗ್ಗೆ ಫ್ಯಾಕ್ಟ್‌ಚೆಕ್‌ ನಡೆಸಿರುವ 'ಇಂಡಿಯಾ ಟುಡೇ' ಸೇರಿದಂತೆ ಹಲವು ಮಾಧ್ಯಮಗಳು, ಅದು ಮನುಷ್ಯನ ದೇಹವೇ ಅಲ್ಲ. ಸೆಕ್ಸ್‌ ಡಾಲ್‌ (ಲೈಂಗಿಕ ಕ್ರಿಯೆಗೆ ಬಳಸಲಾಗುವ ಮಾನವರೂಪದ ಗೊಂಬೆ) ಎಂದು ವರದಿ ಮಾಡಿವೆ.

ಥೈಲ್ಯಾಂಡ್‌ನ ಚೋನ್‌ ಬುರಿಯಲ್ಲಿರುವ ಬಾಂಗ್ ಸಯೀನ್‌ ತೀರದಲ್ಲಿ 2022ರ ಆಗಸ್ಟ್‌ 18ರಂದು ಈ ಗೊಂಬೆ ಪತ್ತೆಯಾಗಿತ್ತು. ಅದನ್ನು ನೋಡಿದವರು ಶವವೆಂದೇ ಭಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು, ಅದು ಮನುಷ್ಯ ದೇಹವಲ್ಲ. ಗೊಂಬೆ ಎಂದು ಸ್ಪಷ್ಟಪಡಿಸಿದ್ದರು. ಈ ಪ್ರಕರಣ, 'ನ್ಯೂಯಾರ್ಕ್‌ ಪೋಸ್ಟ್‌'ನಂತಹ ಸುದ್ದಿ ಮಾಧ್ಯಮಗಳಲ್ಲಿ ಆಗ ವರದಿಯಾಗಿತ್ತು.

ಮಾಲ್ಡೀವ್ಸ್‌ನಲ್ಲಿ ಈಗ ಈ ಕೃತ್ಯ ನಡೆದಿದೆ ಎಂಬುದನ್ನು ಸಮರ್ಥಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಪ್ರಕಟವಾಗಿಲ್ಲ ಎಂದು 'ಇಂಡಿಯಾ ಟುಡೇ' ಹೇಳಿದೆ. ಭಾರತ–ಮಾಲ್ಡೀವ್ಸ್‌ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಹೊತ್ತಿನಲ್ಲಿ ಇಂತಹ ಹಲವು ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಇಂಡೊನೇಷ್ಯಾದ ಬಾಲಿಯಲ್ಲಿ ಟ್ಯಾಕ್ಸಿ ಚಾಲಕನೊಬ್ಬ ಮಹಿಳಾ ಪ್ರವಾಸಿಗೆ ಕಿರುಕುಳ ನೀಡಿದ್ದ ವಿಡಿಯೊವನ್ನು ಮಾಲ್ಡೀವ್ಸ್‌ನದ್ದು ಎಂದು ಇದಕ್ಕೂ ಮೊದಲು ಹರಿಬಿಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.