
ಬಾಲಿವುಡ್ ನಟ ಶಾರುಕ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ನಿಂತು ಮಾತನಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಜಿಹಾದ್’ನ ಅರ್ಥವೇನು ಎನ್ನುವುದನ್ನು ಶಾರುಕ್ ಅವರು ಪ್ರಧಾನಿಗೆ ವಿವರಿಸಿದರು. ‘ನಾನು ಒಬ್ಬ ಮುಸ್ಲಿಂ ಆಗಿದ್ದು, ಇಸ್ಲಾಂನಲ್ಲಿ ನಂಬಿಕೆ ಹೊಂದಿದ್ದೇನೆ’ ಎಂದು ಶಾರುಕ್ ಪ್ರಧಾನಿಗೆ ಹೇಳಿದರು ಎಂಬುದಾಗಿ ಪೋಸ್ಟ್ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ವಿಡಿಯೊದ ಕೀಫ್ರೇಮ್ ಅನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಅದೇ ವಿಡಿಯೊ 2019ರ ಅಕ್ಟೋಬರ್‌ನಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿರುವುದು ಕಂಡಿತು. ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ಆಚರಣೆ ಸಂಬಂಧ ಪ್ರಧಾನಿ ಮೋದಿ ಅವರು ಚಿತ್ರರಂಗದ ಗಣ್ಯರೊಂದಿಗೆ ಸಂವಾದ ನಡೆಸಿದರು ಎಂದು ಅಡಿಬರಹದಲ್ಲಿ ಉಲ್ಲೇಖಿಸಲಾಗಿದೆ. ವಿಡಿಯೊದಲ್ಲಿ ಶಾರುಕ್ ಅವರು ಎಲ್ಲಿಯೂ ‘ಜಿಹಾದ್’ ಪದ ಬಳಸಿಲ್ಲ. ಮತ್ತಷ್ಟು ಹುಡುಕಾಟ ನಡೆಸಿದಾಗ, ‘ತೇಜ್‌ಗ್ಯಾನ್’ನಲ್ಲಿ ಅಪ್‌ಲೋಡ್ ಆಗಿರುವ ವಿಡಿಯೊ ಕಂಡಿತು. ಅದು ಪುಣೆಯಲ್ಲಿ ನಡೆದಿದ್ದ ಪುಸ್ತಕ ಬಿಡುಗಡೆಯ ಸಮಾರಂಭವೊಂದರ (2011.ನ.14) ವಿಡಿಯೊ. ಅದರಲ್ಲಿ ಶಾರುಕ್ ‘ಜಿಹಾದ್’ ಪದ ಬಳಸಿದ್ದಾರೆ. ‘ಜಿಹಾದ್ ಪದ ತುಂಬಾ ದುರ್ಬಳಕೆಯಾಗುತ್ತಿದೆ. ವಾಸ್ತವವಾಗಿ ಜಿಹಾದ್ ಎಂದರೆ, ನಮ್ಮ ಒಳಗಿನ ಕೇಡಿನ ಆಲೋಚನೆಗಳ ವಿರುದ್ಧ ಹೋರಾಡುವುದು’ ಎಂದು ಹೇಳಿದ್ದಾರೆ. ವಿವಿಧ ವಿಡಿಯಯೊಗಳಲ್ಲಿನ ಧ್ವನಿಯನ್ನು ಪ್ರಧಾನಿ ಜತೆಗಿನ ವಿಡಿಯೊದೊಂದಿಗೆ ಸಂಯೋಜಿಸಿ, ತಪ್ಪು ಅರ್ಥ ಬರುವಂತೆ ಹಂಚಿಕೊಳ್ಳಲಾಗುತ್ತಿದೆ ಎಂದು ಫ್ಯಾಕ್ಟ್‌ಲಿ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.