ADVERTISEMENT

Fact Check: ಬದಲಾಗಿರುವ ಶ್ರೀನಗರದ ಚಿತ್ರ ಎಂದು ತಪ್ಪಾಗಿ ಹಂಚಿಕೆ

ಫ್ಯಾಕ್ಟ್ ಚೆಕ್
Published 26 ಮೇ 2023, 0:36 IST
Last Updated 26 ಮೇ 2023, 0:36 IST
   

ಶ್ರೀನಗರದ ಬುಲೆವಾರ್ಡ್ ರಸ್ತೆಯಲ್ಲಿ ಕ್ಲಿಕ್ಕಿಸಲಾಗಿದೆ ಎಂದು ಹೇಳಲಾಗುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಬದಲಾವಣೆಯ ಮಹಾಪರ್ವ ಆರಂಭವಾಗಿದ್ದು, ಈ ಚಿತ್ರವೇ ಅದ್ಭುತ ಬದಲಾವಣೆಯನ್ನು ಸಂಕೇತಿಸುತ್ತದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಹೇಳಿದ್ದಾರೆ. ಸೇವ್ ಯೂಥ್ ಸೇವ್ ಫ್ಯೂಚರ್ ಎಂಬ ಹೆಸರಿನ ಕಾಶ್ಮೀರದ ಸರ್ಕಾರೇತರ ಸಂಘಟನೆಯ ಮುಖ್ಯಸ್ಥ ವಜಾಹತ್ ಫಾರೂಕ್ ಭಟ್ ಎಂಬವರು ಈ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ಟ್ವಿಟರ್‌ನಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ಜಿ–20 ಸಭೆಗೆ ಕಾಶ್ಮೀರಕ್ಕೆ ಬರುತ್ತಿರುವ ಗಣ್ಯರನ್ನು ಸ್ವಾಗತಿಸಲು ಬುಲೆವಾರ್ಡ್ ರಸ್ತೆ ಅದ್ದೂರಿಯಾಗಿ ಸಿದ್ಧಗೊಂಡಿದೆ ಎಂದು @aquibmir71 ಹೆಸರಿನ ಟ್ವಿಟರ್ ಖಾತೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಚಿತ್ರ ಕಾಶ್ಮೀರದ್ದಲ್ಲ, ಬದಲಾಗಿ ಬಾಂಗ್ಲಾದೇಶದ್ದು. 

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರವು ಬಾಂಗ್ಲಾದೇಶದ ಪತೌಖಲಿ ಪಟ್ಟಣದಲ್ಲಿರುವ ಜೌತೋಲಾ ಪತೌಖಲಿ ಹೆಸರಿನ ಉದ್ಯಾನದ್ದು ಎಂದು ‘ಆಲ್ಟ್ ನ್ಯೂಸ್’ ವರದಿ ಮಾಡಿದೆ. ಗೂಗಲ್ ಸ್ಟ್ರೀಟ್‌ವ್ಯೂ ಮೂಲಕ ಪರಿಶೀಲಿಸಿದಾಗಲೂ ಇದು ದೃಢಪಟ್ಟಿದೆ. ಜಿ–20 ಸಭೆಗಾಗಿ ಶ್ರೀನಗರ ಸಜ್ಜಾಗಿದ್ದು, ಬುಲೆವಾರ್ಡ್ ರಸ್ತೆಯಲ್ಲಿ ಭದ್ರತಾ ಪಡೆ ನಿಗಾ ವಹಿಸಿರುವ ಸುದ್ದಿ ಹಾಗೂ ಚಿತ್ರವನ್ನು ಸಿಯಾಸತ್ ಸುದ್ದಿತಾಣ ವರದಿ ಮಾಡಿದೆ. ಬುಲೆವಾರ್ಡ್ ರಸ್ತೆಯ ನೈಜ ಚಿತ್ರಕ್ಕೂ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ಚಿತ್ರಕ್ಕೂ ಸಂಬಂಧವೇ ಇಲ್ಲ ಎಂದು ಆಲ್ಟ್ ನ್ಯೂಸ್ ತಿಳಿಸಿದೆ. ಬಾಂಗ್ಲಾದೇಶದ ಉದ್ಯಾನದ ಚಿತ್ರವನ್ನೇ ಶ್ರೀನಗರದ ಚಿತ್ರ ಎಂದು ತಪ್ಪಾಗಿ ಅರ್ಥೈಸಿ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT