ADVERTISEMENT

Fact Check | ತಿರುಪತಿ: ಮಗುವಿನ ಮೃತದೇಹ ಬೈಕ್‌ನಲ್ಲಿ ಕೊಂಡೊಯ್ದರು ಎಂಬುದು ತಪ್ಪು

ಫ್ಯಾಕ್ಟ್ ಚೆಕ್
Published 14 ಜನವರಿ 2025, 0:30 IST
Last Updated 14 ಜನವರಿ 2025, 0:30 IST
   

‘ತಿರುಪತಿ ದೇವಾಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ ಮಗುವಿನ ಮೃತದೇಹ ಒಯ್ಯಲು ತಿರುಪತಿ ಸರ್ಕಾರಿ ಆಸ್ಪತ್ರೆಯವರು ₹20 ಸಾವಿರ ಕೇಳಿದರು. ಅಷ್ಟೊಂದು ಹಣ ಇಲ್ಲದ ಮಗುವಿನ ತಂದೆಯು ಮೃತದೇಹವನ್ನು 90 ಕಿ.ಮೀ ದೂರದಲ್ಲಿರುವ ತಮ್ಮ ಊರಿಗೆ ಬೈಕ್‌ನಲ್ಲಿ ಕೊಂಡೊಯ್ದರು’ ಎಂದು ಹೇಳಿಕೊಂಡು ಪೋಸ್ಟ್‌ ಮಾಡಲಾದ ವಿಡಿಯೊ ತುಣುಕೊಂದನ್ನು ‘ಎಕ್ಸ್‌’ನಲ್ಲಿ ಹಲವರು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು.  

ಘಟನೆಗೆ ಸಂಬಂಧಿಸಿದ ಪದಗಳನ್ನು ಬಳಸಿ ಇಂಟರ್‌ನೆಟ್‌ನಲ್ಲಿ ಹುಡುಕಾಟ ನಡೆಸಿದಾಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು  2022ರ ಏಪ್ರಿಲ್‌ 26ರಂದು ಇದೇ ವಿಡಿಯೊವನ್ನು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದು ಕಂಡು ಬಂತು. ಆ ವಿಡಿಯೊದ ಪ್ರಕಾರ, ಮೃತಪಟ್ಟ ಬಾಲಕನ ಹೆಸರು ಜೆಸವಾ. ಮತ್ತಷ್ಟು ಹುಡುಕಾಟ ನಡೆಸಿದಾಗ 2022ರ ಏಪ್ರಿಲ್‌ನಲ್ಲಿ ಆ ವಿಡಿಯೊಗೆ ಸಂಬಂಧಿಸಿ ಮಾಧ್ಯಮಗಳು ಮಾಡಿದ್ದ ವರದಿಗಳು ಸಿಕ್ಕಿದವು. ಜೆಸವಾ ಎಂಬ 10 ವರ್ಷದ ಬಾಲಕ ತಿರುಪತಿಯ ವೆಂಕಟೇಶ್ವರ ರಾಮ್‌ನಾರಾಯಣ್‌ ರುಯಿಯಾ ಆಸ್ಪತ್ರೆಯಲ್ಲಿ ಯಕೃತ್ತು ಮತ್ತು ಕಿಡ್ನಿ ಸಮಸ್ಯೆಯಿಂದಾಗಿ ಮೃತಪಟ್ಟಿದ್ದ. ಬಾಲಕನ ತಂದೆ ಶವವನ್ನು ಊರಿಗೆ ತೆಗೆದುಕೊಂಡು ಹೋಗಲು ಸರ್ಕಾರಿ ಆಂಬುಲೆನ್ಸ್‌ಗೆ ಕಾದಿದ್ದರು. ಆದರೆ, ಆಂಬುಲೆನ್ಸ್‌ ಬರಲಿಲ್ಲ. ಖಾಸಗಿ ಆಂಬುಲೆನ್ಸ್‌ಗೆ ಪಾವತಿಸುವಷ್ಟು ಹಣ ಅವರಲ್ಲಿ ಇರಲಿಲ್ಲ. ಹಾಗಾಗಿ, ತನ್ನ ಬೈಕ್‌ನಲ್ಲೇ ಮಗನ ಶವವನ್ನು ಅವರು ಊರಿಗೆ ಕೊಂಡೊಯ್ದಿದ್ದರು. ಈಗ, ಜನವರಿ 8ರಂದು ತಿರುಪತಿಯಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೂ ಈ ವಿಡಿಯೊಗೂ ತಳಕುಹಾಕಲಾಗುತ್ತಿದೆ. ಈ ಬಗ್ಗೆ ಆಂಧ್ರಪ್ರದೇಶ ಪೊಲೀಸರು ಕೂಡ ‘ಎಕ್ಸ್‌’ನಲ್ಲಿ ಸ್ಪಷ್ಟನೆ ನೀಡಿದ್ದು ಇದು ತಿರುಪತಿಯಲ್ಲಿ 2022ರಲ್ಲಿ ನಡೆದ ವಿಡಿಯೊ ಎಂದು ಹೇಳಿದ್ದಾರೆ ಎಂಬುದಾಗಿ ಬೂಮ್‌ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT