ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನದ ಸೇನೆಯು ಭಾರತೀಯ ವಾಯು ಪಡೆಯ ಮಹಿಳಾ ಪೈಲಟ್ ಒಬ್ಬರನ್ನು ಸೆರೆಹಿಡಿದಿದೆ ಎಂದು ಹೇಳಿಕೊಂಡು ಮಹಿಳಾ ಪೈಲಟ್ ಒಬ್ಬರು ನೆಲದಲ್ಲಿ ಮಲಗಿರುವ ಫೋಟೊವೊಂದನ್ನು ಪಾಕಿಸ್ತಾನದ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು.
ಆ ಫೋಟೊ ಪಾಕಿಸ್ತಾನದ್ದಲ್ಲ, ಇತ್ತೀಚಿನದ್ದೂ ಅಲ್ಲ. 2023ರ ಜೂನ್ 1ರಂದು ಚಾಮರಾಜನಗರ ಜಿಲ್ಲೆಯ ಭೋಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಪ್ಪಯ್ಯನಪುರದಲ್ಲಿ ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನಗೊಂಡಿತ್ತು. ತರಬೇತಿ ಪಡೆಯುತ್ತಿದ್ದ ಮಹಿಳಾ ಪೈಲಟ್ ಭೂಮಿಕಾ ಮತ್ತು ವಿಂಗ್ ಕಮಾಂಡರ್ ವಿಂಗ್ ಕಮಾಂಡರ್ ತೇಜ್ ಪಾಲ್ ಅವರು ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದರು. ‘ಪ್ರಜಾವಾಣಿ’ ಸೇರಿದಂತೆ ಎಲ್ಲ ಮಾಧ್ಯಮಗಳು ಈ ಘಟನೆಯ ವರದಿಯನ್ನು ಮಾಡಿದ್ದವು. ಸಣ್ಣ ಪುಟ್ಟ ಗಾಯಗಳಾಗಿದ್ದ ಇಬ್ಬರೂ ಪೈಲಟ್‌ಗಳು ನೆಲದಲ್ಲಿ ಮಲಗಿದ್ದ ಚಿತ್ರದಲ್ಲಿ ಮಹಿಳಾ ಪೈಲಟ್ ಚಿತ್ರವನ್ನು ಮಾತ್ರ ಕ್ರಾಪ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಈ ಪೋಸ್ಟ್ ಬಗ್ಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ಕೂಡ ತನ್ನ ಫೇಸ್ ಬುಕ್ ಪುಟದಲ್ಲಿ ಸ್ಪಷ್ಟನೆ ನೀಡಿದ್ದು, 2023ರ ಜೂನ್ 1ರಂದು ಸಂಭವಿಸಿದ್ದ ತರಬೇತಿ ವಿಮಾನ ಪತನದ ಸುದ್ದಿಯನ್ನು ತಪ್ಪಾಗಿ ಈಗ ಹಂಚಲಾಗುತ್ತಿದೆ ಎಂದು ಹೇಳಿದೆ. ತನ್ನ ಪೋಸ್ಟ್‌ನಲ್ಲಿ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ಪ್ರಕಟಿಸಿದ ವರದಿಯನ್ನೂ ಅದು ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.