ADVERTISEMENT

ಫ್ಯಾಕ್ಟ್‌ ಚೆಕ್‌: ರೈಲು ಹಳಿಗಳ ನಡುವೆ ಸೌರಫಲಕ ಅಳವಡಿಕೆ ಸುಳ್ಳು ಸುದ್ದಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 23:56 IST
Last Updated 7 ಜುಲೈ 2025, 23:56 IST
   

ರೈಲು ಹಳಿಗಳ ನಡುವೆ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್‌ ಉತ್ಪಾದಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಭಾರತದ ನವೋದ್ಯಮ  ‘ಸನ್‌ –ವೇಸ್‌’ ಕಳಚಬಹುದಾದಂತಹ ಸೌರಫಲಕಗಳನ್ನು ಅಳವಡಿಸಲಿದೆ. ಇದರಿಂದಾಗಿ ವಾರ್ಷಿಕವಾಗಿ ಒಂದು ಟೆರಾ ವ್ಯಾಟ್‌ನಷ್ಟು ವಿದ್ಯುತ್‌ ಉತ್ಪಾದನೆಯಾಗಲಿದೆ ಎಂದು ಹೇಳಿಕೊಳ್ಳುವ ಪೋಸ್ಟ್‌ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಸುಳ್ಳು. 

ಪೋಸ್ಟ್‌ನೊಂದಿಗೆ ಇರುವ ಫೋಟೊವನ್ನು ಗೂಗಲ್‌ ರಿವರ್ಸ್‌ ಸರ್ಚ್‌ ವಿಧಾನದಲ್ಲಿ ಹುಡುಕಾಟ ನಡೆಸಿದಾಗ ಹಲವರು ಈ ಪೋಸ್ಟ್‌ ಅನ್ನು ಹಂಚಿಕೊಂಡಿರುವುದು ಕಂಡು ಬಂತು. ನಂತರ ನಿರ್ದಿಷ್ಟ ಪದಗಳನ್ನು ಬಳಸಿ ಹುಡುಕಾಡಿದಾಗ ಸಿಟ್ಜರ್ಲೆಂಡ್‌ನ ಸುದ್ದಿ ಪೋರ್ಟಲ್‌ swissinfo.ch ನಲ್ಲಿ ಈ ವರ್ಷದ ಏಪ್ರಿಲ್‌ 25ರಂದು ಪ್ರಕಟವಾದ ವರದಿ ಸಿಕ್ಕಿತು. ಆ ವರದಿಯಲ್ಲಿದ್ದ ಚಿತ್ರ ಹಾಗೂ ಪೋಸ್ಟ್‌ನಲ್ಲಿದ್ದ ಚಿತ್ರ ಒಂದೇ ಆಗಿತ್ತು. ಆ ಯೋಜನೆಯನ್ನು ಸ್ವಿಟ್ಜರ್ಲೆಂಡ್‌ನಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ನವೋದ್ಯಮ ಸನ್‌–ವೇಸ್‌ ಕೂಡ ಅಲ್ಲಿಯದ್ದೇ ಎಂದು ವರದಿಯಲ್ಲಿ ಹೇಳಲಾಗಿತ್ತು. ಇಂಡೊನೇಷ್ಯಾ ಬ್ಯುಸಿನೆಸ್‌ ಪೋಸ್ಟ್‌ ಎಂಬ ಮಾಧ್ಯಮದಲ್ಲೂ ಈ ಬಗ್ಗೆ ಪ್ರಕಟವಾದ ವರದಿ ಸಿಕ್ಕಿತು. ಇನ್ನಷ್ಟು ಹುಡುಕಿದಾದ ಭಾರತೀಯ ರೈಲ್ವೆಯು ಇಂತಹ ಯೋಜನೆ ರೂಪಿಸಿರುವ ಬಗ್ಗೆ ವಿಶ್ವಾಸವಾದ ಸುದ್ದಿಗಳು ಸಿಗಲಿಲ್ಲ. ಸ್ವಿಟ್ಜರ್ಲೆಂಡ್‌ನಲ್ಲಿ ಜಾರಿಯಾಗುತ್ತಿರುವ ಯೋಜನೆಯನ್ನು ಭಾರತೀಯ ರೈಲ್ವೆಯ ಯೋಜನೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್‌ಚೆಕ್‌ ವರದಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT