ಸೇನಾ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಟರ್ಕಿ ವಿರುದ್ಧ ಭಾರತೀಯರಲ್ಲಿ ಅಸಮಾಧಾನ ಮೂಡಿರುವಂತೆಯೇ ಟರ್ಕಿಗೆ ಸಂಬಂಧಿಸಿದ ವಸ್ತುಗಳು, ಅಲ್ಲಿಗೆ ಪ್ರವಾಸ ಹೋಗುವುದಕ್ಕೆ ಬಹಿಷ್ಕಾರ ಹಾಕುವ ಬಗ್ಗೆ ಚರ್ಚೆಯಾಗುತ್ತಿದೆ. ಇದೇ ಹೊತ್ತಿನಲ್ಲಿ ಟರ್ಕಿಯ ಪ್ರವಾಸೋದ್ಯಮ ಇಲಾಖೆ, ತಮ್ಮ ಪ್ರವಾಸವನ್ನು ರದ್ದು ಮಾಡಬೇಡಿ ಎಂದು ಭಾರತೀಯ ಪ್ರವಾಸಿಗರಲ್ಲಿ ಮನವಿ ಮಾಡುತ್ತಿದೆ ಎಂದು ಪ್ರತಿಪಾದಿಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ನೋಟಿಸ್ ರೂಪದ ಫೋಟೊವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್ ಆಧಾರದಲ್ಲಿ ಹಲವು ಮಾಧ್ಯಮಗಳೂ ಈ ಬಗ್ಗೆ ವರದಿ ಮಾಡಿವೆ. ರಾಜಕಾರಣಿಗಳು ಕೂಡ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ಟರ್ಕಿಯ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಖಾತೆಗಳನ್ನು ಪರಿಶೀಲಿಸಿದಾಗ ಇಂತಹ ಪ್ರಕಟಣೆ ಎಲ್ಲೂ ಕಂಡು ಬರಲಿಲ್ಲ. ಟರ್ಕಿಯ ವಿವಿಧ ಇಲಾಖೆಗಳು ಈ ಹಿಂದೆ ಪ್ರಕಟಿಸಿರುವ ಅಧಿಕೃತ ನೋಟಿಸ್‌ಗಳನ್ನು ನೋಡಿದಾಗ, ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ನೋಟಿಸ್‌ನ ವಿನ್ಯಾಸ ಮತ್ತು ಅದರಲ್ಲಿ ಬಳಸಿರುವ ಭಾಷೆಯಲ್ಲಿ ವ್ಯತ್ಯಾಸವಿದೆ. ಭಾರತದ ಪ್ರವಾಸಿಗರಲ್ಲಿ ಮನವಿ ಮಾಡಿರುವ ಬಗ್ಗೆ ಟರ್ಕಿ ಮಾಧ್ಯಮಗಳಲ್ಲಿ ವರದಿಯೂ ಆಗಿಲ್ಲ. ಟರ್ಕಿಯ ಫ್ಯಾಕ್ಟ್‌ಚೆಕ್ ಸಂಸ್ಥೆ ‘ಟೆಯಿಟ್’ ಅನ್ನು ಸಂಪರ್ಕಿಸಿದಾಗ, ಸಂಸ್ಥೆಯ ಸಂಪಾದಕ ಬೆಸಿರ್ ಕೊರ್ಕ್‌ಮಜ್ ಅವರು ‘ಅಂತಹ ಯಾವುದೇ ಪ್ರಕಟಣೆಯನ್ನು ಸರ್ಕಾರ ಹೊರಡಿಸಿಲ್ಲ. ನೋಟಿಸ್‌ನಲ್ಲಿ ಇಂಗ್ಲಿಷ್‌ನಲ್ಲಿ ಬರೆದಿರುವುದು ಕೂಡ ಸಮರ್ಪಕವಾಗಿಲ್ಲ’ ಎಂದು ಹೇಳಿದ್ದಾರೆ ಎಂದು ಬೂಮ್ ಫ್ಯಾಕ್ಟ್‌ಚೆಕ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.