ನವದೆಹಲಿ(ಪಿಟಿಐ): ಅಂಗವಿಕಲರಿಗೆ ಯಾವುದೇ ಕಾರಣಕ್ಕೂ ಪ್ರಯಾಣ ನಿರಾಕರಿಸುವಂತಿಲ್ಲ ಎಂದು ವಿಮಾನಯಾನ ಸಂಸ್ಥೆಗಳಿಗೆ ಸರ್ಕಾರ ಸೂಚಿಸಿದ್ದು, ಹಲವು ವರ್ಷಗಳ ಮನವಿ ಮತ್ತು ಹೋರಾಟಕ್ಕೆ ಕೊನೆಗೂ ಜಯ ದೊರಕಿದಂತಾಗಿದೆ.
ಈ ಸಂಬಂಧ ಸರ್ಕಾರ ಹೊಸ ಮಾರ್ಗದರ್ಶಿ ಸೂತ್ರಗಳನ್ನೂ ರೂಪಿಸಿದೆ.
‘ಯಾವುದೇ ವಿಮಾನ ಸಂಸ್ಥೆಯೂ ಅಂಗವಿಕಲರು ಅವರ ಸಹಾಯಕ ಸಾಧನಗಳೊಂದಿಗೆ ಪ್ರಯಾಣಿಸುವುದನ್ನು ನಿರಾಕರಿಸುವಂತಿಲ್ಲ. ವಿಮಾನ ಟಿಕೆಟ್ ಸಂದರ್ಭದಲ್ಲಿ ಅವರ ಪ್ರತಿನಿಧಿಗಳನ್ನೂ ನಿರಾಕರಿಸುವಂತಿಲ್ಲ’ ಎಂದು ಸರ್ಕಾರ ರೂಪಿಸಿರುವ ಮಾರ್ಗದರ್ಶಿ ಸೂತ್ರದಲ್ಲಿ ಹೇಳಲಾಗಿದೆ.
ವಿಮಾನಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಅಂಧರು ಮತ್ತು ಅಂಗವಿಕಲರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಮೂರು ತಿಂಗಳ ಒಳಗಾಗಿ ಒದಗಿಸಿಕೊಡಬೇಕು. ಮತ್ತು
ಸಿಬ್ಬಂದಿಗೂ ಈ ಕುರಿತು ಅಗತ್ಯ ತರಬೇತಿ ನೀಡುವುದು ಕಡ್ಡಾಯ ಅಂಧ ಪ್ರಯಾಣಿಕರ ಜತೆಯಲ್ಲಿ ಮಾರ್ಗದರ್ಶಿ ನಾಯಿಗಳನ್ನು ಸಹ ಕರೆದುಕೊಂಡು ಹೋಗುವುದಕ್ಕೆ ಅನುಮತಿ ನೀಡಬೇಕು ಎಂದು ಸೂಚಿಸಲಾಗಿದೆ.
ಅಲ್ಲದೇ ವಿಮಾನದಲ್ಲಿ ಪ್ರಯಾಣಿಸುವ ಅಂಗವಿಕಲ ಪ್ರಯಾಣಿಕರಿಗೆ ವೈದ್ಯಕೀಯ ಪ್ರಮಾಣಪತ್ರ ನೀಡುವಂತೆ ಅಥವಾ ವಿಶೇಷ ಅರ್ಜಿ ನಮೂನೆ ಭರ್ತಿ ಮಾಡುವಂತೆ ಒತ್ತಡ ಹೇರಬಾರದು. ಒಂದೊಮ್ಮೆ ಅಂತಹ ಪ್ರಯಾಣಿಕರು ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ಮತ್ತು ಪ್ರಯಾಣ ಮಧ್ಯ ಅವರ
ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಉಂಟಾಗುವ ಸಂಭವವಿದ್ದರೆ ಮಾತ್ರ ವೈದ್ಯಕೀಯ ಪ್ರಮಾಣಪತ್ರವನ್ನು ಕೇಳಬೇಕು ಎಂದೂ ಅದು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.