ನವದೆಹಲಿ (ಪಿಟಿಐ): ಅಂತರಧರ್ಮೀಯ ವೈವಾಹಿಕ ಸಂಬಂಧಕ್ಕೆ ಕಾನೂನಿನ ಸಮ್ಮತಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಸಂಬಂಧ ಮಸೂದೆಯೊಂದನ್ನು ಬಜೆಟ್ ಅಧಿವೇಶನದಲ್ಲಿ ಮಂಡಿಸಲಿದೆ.
1969ರ ಜನನ ಹಾಗೂ ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದು, ಏಪ್ರಿಲ್ 24ರಿಂದ ಆರಂಭವಾಗಲಿರುವ ಮುಂದುವರಿದ ಬಜೆಟ್ ಅಧಿವೇಶನದಲ್ಲಿ ಈ ಹೊಸ ಮಸೂದೆ ಮಂಡಿಸಲಾಗುತ್ತಿದೆ.
ಅಂತರಧರ್ಮೀಯ ವಿವಾಹ ಮಾಡಿಕೊಂಡ ಮಹಿಳೆಯರು ಪತಿಯ ಮನೆಯಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಲ್ಲಿ ಈ ತಿದ್ದುಪಡಿ ಮಸೂದೆ ಅಡಿ ರೂಪಿಸುವ ಕಾನೂನು ಅವರಿಗೆ ನೆರವಾಗಲಿದೆ.ಮಸೂದೆ ಅನ್ವಯ ವಿಚ್ಛೇದನದಂತಹ ಸಂದರ್ಭಗಳಲ್ಲಿ ಅಂತಹ ಮಹಿಳೆಯರು ಜೀವನ ನಿರ್ವಹಣಾ ವೆಚ್ಚ ಪಡೆಯಬಹುದಾಗಿದೆ.
ಮಕ್ಕಳ ಕಸ್ಟಡಿ, ಅಂತರಧರ್ಮೀಯ ಪಾಲಕರಿಗೆ ಜನಿಸಿದ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ವಿವಾಹಿತರ ವಯಸ್ಸು ನಿರ್ಧರಿಸುವಲ್ಲಿಯೂ ಇಂತಹ ವಿವಾಹ ನೋಂದಣಿ ನೆರವಾಗಲಿದೆ.
ಸಿಖ್ಖರು, ಜೈನರು, ಬೌದ್ಧರು ಸೇರಿದಂತೆ ಇತರ ಅಲ್ಪಸಂಖ್ಯಾತರು ಸಹ ಇಂತಹ `ಧರ್ಮ ತಟಸ್ಥ~ ನೋಂದಣಿ ಕಾಯ್ದೆಗೆ ಒತ್ತಾಯಿಸುತ್ತಿದ್ದರು. ಏಕೆಂದರೆ ಈ ಸಮುದಾಯಗಳ ವಿವಾಹಗಳನ್ನು ಪ್ರಸ್ತುತ `ಹಿಂದೂ ವಿವಾಹ ಕಾಯ್ದೆ~ ಅನ್ವಯ ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು ಹಾಗೂ ಅಧಿಕೃತ ದಾಖಲೆಗಳಲ್ಲಿ ಅವರನ್ನು ಹಿಂದೂಗಳು ಎಂದು ತೋರಿಸಲಾಗುತ್ತಿತ್ತು.
ಆನಂದ್ ವಿವಾಹ ಕಾಯ್ದೆ
ಸಿಖ್ ಸಮುದಾಯದ ಬಹುವರ್ಷಗಳ ಬೇಡಿಕೆಯಂತೆ ಅವರ ವಿವಾಹವನ್ನು 1909ರ `ಆನಂದ್ ವಿವಾಹ ಕಾಯ್ದೆ~ಯಡಿ ನೋಂದಣಿ ಮಾಡಲು ಸಹ ಸಂಪುಟ ಒಪ್ಪಿಗೆ ನೀಡಿದೆ.
ಈ ಕಾಯ್ದೆಯನ್ನು ಬ್ರಿಟಿಷರು ಜಾರಿಗೆ ತಂದಿದ್ದರು. ದೇಶವಿಭಜನೆಯ ನಂತರ ಕಾಯ್ದೆ ರದ್ದುಗೊಳಿಸಲಾಗಿತ್ತು. ಆಗಿನಿಂದ ಸಿಖ್ಖರ ಮದುವೆಯನ್ನು ಹಿಂದೂ ವಿವಾಹ ಕಾಯ್ದೆ ಅಡಿ ನೋಂದಣಿ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.