ADVERTISEMENT

ಅಕ್ಕಿ, ಗೋಧಿ ಬಂಪರ್ ಉತ್ಪಾದನೆ: ಶರದ್ ಪವಾರ್ ಸಂತಸ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): 2011-12ನೇ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ ಆಹಾರಧಾನ್ಯ ಉತ್ಪಾದನೆಯಾಗಿದ್ದು, ಹಿಂದಿನ ಸಾಲಿಗೆ ಹೋಲಿಸಿದರೆ 20 ಲಕ್ಷ ಟನ್ ಹೆಚ್ಚುವರಿ ಉತ್ಪಾದನೆಯಾಗಿದೆ.

ಅಕ್ಕಿ ಮತ್ತು ಗೋಧಿ ಬಂಪರ್ ಉತ್ಪಾದನೆಯಾಗಿದ್ದು, ದೇಶದ ಒಟ್ಟಾರೆ ಆಹಾರಧಾನ್ಯ ಉತ್ಪಾದನೆ 252.56 ದಶಲಕ್ಷ ಟನ್ ಆಗಿದೆ. ಅಕ್ಕಿಯ ಉತ್ಪಾದನೆ 102.75 ದಶಲಕ್ಷ ಟನ್‌ನಿಂದ 103.41ದಶಲಕ್ಷ ಟನ್‌ಗೆ ಏರಿದೆ. ಗೋಧಿ ಉತ್ಪಾದನೆಯು 88.31 ದಶಲಕ್ಷ ಟನ್‌ನಿಂದ 90.23 ದಶಲಕ್ಷ ಟನ್‌ಗೆ ಏರಿದೆ.

`ಏಕದಳ ಧಾನ್ಯ, ಬೇಳೆಕಾಳುಗಳ ಉತ್ಪಾದನೆ ಸ್ವಲ್ಪ ಇಳಿಮುಖವಾಗಿದೆ. ದೇಶದ ಒಟ್ಟಾರೆ ಆಹಾರಧಾನ್ಯ ಸಂಗ್ರಹ ತುಂಬಾ ತೃಪ್ತಿಕರವಾಗಿದ್ದು, ಇದಕ್ಕಾಗಿ ನಾನು ರೈತರನ್ನು ಅಭಿನಂದಿಸುತ್ತೇನೆ~  ಎಂದು ಕೃಷಿ ಸಚಿವ ಶರದ್ ಪವಾರ್ ಹೇಳಿದ್ದಾರೆ.
 
ರಾಷ್ಟ್ರೀಯ ಬೆಳೆ ಮುನ್ಸೂಚನೆ ಕೇಂದ್ರ ಉದ್ಘಾಟಿಸಿದ ನಂತರ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು, ಈಗ ದೇಶದಲ್ಲಿ ಆಹಾರಧಾನ್ಯ ಸಂಗ್ರಹಿಸಿ ಇಡುವುದೇ ದೊಡ್ಡ ಸಮಸ್ಯೆಯಾಗಿದೆ. ಆಹಾರಧಾನ್ಯಗಳು ಹಾಳಾಗದಂತೆ ಸೂಕ್ತ ರೀತಿಯಲ್ಲಿ ದಾಸ್ತಾನು  ಮಾಡಲು ಸರ್ಕಾರ ಆದ್ಯತೆ ನೀಡಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.