ADVERTISEMENT

ಅಕ್ರಮ ಗಣಿಗಾರಿಕೆ: ವಿವರ ಕೇಳಿದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 19:00 IST
Last Updated 23 ಫೆಬ್ರುವರಿ 2011, 19:00 IST

ನವದೆಹಲಿ: ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು, ಅರಣ್ಯ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನಿಷೇಧಿಸಲಾಗಿರುವ ಗಣಿಗಾರಿಕೆ ಬಗ್ಗೆಯೂ ಮಾಹಿತಿ ಕೇಳಿದೆ.

ಸಚಿವ ಜೈರಾಂ ರಮೇಶ್ ಅವರು ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದೆ.  ಅಕ್ರಮ ಗಣಿಗಾರಿಕೆ ತಡೆಯಲು ರಾಜ್ಯ ಸರ್ಕಾರದ ನೀತಿ- ನಿಲುವುಗಳೇನು ಮತ್ತು ಇದಕ್ಕೆ ಹಾಕಿಕೊಂಡಿರುವ ಕಾಲಮಿತಿ ಎಷ್ಟು ಎಂದು ಕೇಳಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕುಮಸ್ವಾಮಿ ಅರಣ್ಯ ವಲಯದ 200.73 ಹೆಕ್ಟೇರ್ ಜಾಗದಲ್ಲಿ ಬೆಂಗಳೂರು ಮೂಲದ ಜೆಎಸ್‌ಡಬ್ಲ್ಯು ಸ್ಟೀಲ್ ಲಿಮಿಟೆಡ್‌ಗೆ ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ರಾಜ್ಯದ ಬಿಜೆಪಿ ಸರ್ಕಾರ ಸಚಿವಾಲಯದ ಅನುಮತಿ ಕೋರಿದ್ದ ಹಿನ್ನೆಲೆಯಲ್ಲಿ ಜೈರಾಂ ಈ ಪತ್ರ ಬರೆದಿದ್ದಾರೆ.

ಅಂತಿಮ ವರದಿ ಶೀಘ್ರ ಬಹಿರಂಗ
ಪುಣೆ (ಪಿಟಿಐ): ‘ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ದೇಶಕ್ಕೆ ಉಂಟಾಗುತ್ತಿರುವ ನಷ್ಟದ ವಿವರ ಒಳಗೊಂಡ ಅಂತಿಮ ವರದಿಯನ್ನು ಶೀಘ್ರವೇ ಬಹಿರಂಗ ಪಡಿಸಲಾಗುವುದು’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.

ಪುಣೆಯ ಕಾನೂನು ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಭ್ರಷ್ಟಾಚಾರ ಆರೋಪಿಯನ್ನು ಸರ್ಕಾರದ ಅನುಮತಿಗಾಗಿ ಕಾಯದೆ ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಅಧಿಕಾರವನ್ನು ಲೋಕಾಯುಕ್ತ ಸಂಸ್ಥೆಗೆ  ನೀಡಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.