ADVERTISEMENT

ಅಕ್ರಮ ಗಣಿಗಾರಿಕೆ: ಸಿಇಸಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 18:45 IST
Last Updated 10 ಮಾರ್ಚ್ 2011, 18:45 IST

ನವದೆಹಲಿ: ರಾಜ್ಯದ ಬಳ್ಳಾರಿ, ಹೊಸಪೇಟೆ ಮತ್ತು ಸಂಡೂರುಗಳಲ್ಲಿ  ವ್ಯಾಪಕವಾಗಿ ನಡೆದಿರುವ ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಸುಪ್ರೀಂ ಕೋರ್ಟ್‌ನ ಉನ್ನತಾಧಿಕಾರ ಸಮಿತಿ (ಸಿಇಸಿ) ಸದ್ಯದಲ್ಲೇ ಭೇಟಿ ನೀಡಿ ಪರಿಶೀಲಿಸಲಿದೆ.

ಹೊಸಪೇಟೆ, ಸಂಡೂರು ಮತ್ತು ಬಳ್ಳಾರಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ತಡೆಗೆ ಕೋರಿ ಪರಿಸರ ಹೋರಾಟಗಾರ ಎಸ್.ಆರ್.ಹಿರೇಮಠ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸುತ್ತಿರುವ ಜಯಕೃಷ್ಣನ್ ನೇತೃತ್ವದ ಉನ್ನತಾಧಿಕಾರ ಸಮಿತಿ ರಾಜ್ಯಕ್ಕೆ ಭೇಟಿ ಕೊಡುವುದಾಗಿ ಗುರುವಾರ ತಿಳಿಸಿತು.

ಅರ್ಜಿ ಸಂಬಂಧ ಸಿಇಸಿ ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್. ವಿ. ರಂಗನಾಥ್, ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಸಮಿತಿ ಮುಂದೆ ಹಾಜರಾಗಿತ್ತು. ಅಕ್ರಮ ಗಣಿಗಾರಿಕೆ ಅಡೆತಡೆ ಇಲ್ಲದೆ ಮುಂದುವರಿದಿರುವ ಬಗ್ಗೆ ಸಿಇಸಿ ತೀವ್ರ ಅಸಮಾಧಾನ  ವ್ಯಕ್ತಪಡಿಸಿತು. ರಾಜ್ಯದಲ್ಲಿ ಸರ್ಕಾರ ಇದೆಯೇ ಎಂದು ಅಚ್ಚರಿ ವ್ಯಕ್ತಪಡಿಸಿದ ಸಮಿತಿ ಅಕ್ರಮವಾಗಿ ನಡೆದಿರುವ ಗಣಿಗಾರಿಕೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿತು.

ಕರ್ನಾಟಕ ಲೋಕಾಯುಕ್ತ 1079.12  ಹೆಕ್ಟೇರ್ ಅತಿಕ್ರಮಣ ಆಗಿದೆ ಎಂದು ವರದಿ ನೀಡಿದೆ. ಯಾರ್ಯಾರು ಅತಿಕ್ರಮಣ ಮಾಡಿದ್ದಾರೆ ಎಂದು ಪಟ್ಟಿ ಕೊಟ್ಟಿದೆ. ಈ ವರದಿ ಮೇಲೆ ಯಾವ ಕ್ರಮ ಜರುಗಿಸಲಾಗಿದೆ ಎಂದು ಕೇಳಿತು.

ಅಕ್ರಮ ಗಣಿಗಾರಿಕೆ ಪ್ರೋತ್ಸಾಹಿಸುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಮಾಡಿರುವ ಮಾಜಿ ಮುಖ್ಯಮಂತ್ರಿ, ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ಬಯಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.