ADVERTISEMENT

ಅಖಂಡ ಆಂಧ್ರಕ್ಕಾಗಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2013, 10:00 IST
Last Updated 22 ಡಿಸೆಂಬರ್ 2013, 10:00 IST

ರಾಜಮುಂಡ್ರಿ (ಆಂಧ್ರಪ್ರದೇಶ)(ಪಿಟಿಐ): ಆಂಧ್ರ ಪ್ರದೇಶ ವಿಭಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಳೆದ 144 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸೀಮಾಂಧ್ರ ವಕೀಲರ ಜಂಟಿ ಕ್ರಿಯಾ ಸಮಿತಿ ಕೋರ್ಟ್ ಕಲಾಪ ಬಹಿಷ್ಕಾರವನ್ನು ಜನವರಿ 23ರವರೆಗೆ ವಿಸ್ತರಿಸಲು ನಿರ್ಧರಿಸಿದೆ.

ಅಖಂಡ ಆಂಧ್ರಕ್ಕಾಗಿ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿದ್ದೇವೆ. 13 ಜಿಲ್ಲೆಗಳಲ್ಲಿ 35 ಸಾವಿರಕ್ಕೂ ಹೆಚ್ಚು ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ. ಜನವರಿ 23ರವರೆಗೆ ನಾವು ಕೋರ್ಟ್ ಕಲಾಪ ಬಹಿಷ್ಕರಿಸಲಿದ್ದು, ಒಕ್ಕೂಟ ಆಂಧ್ರದ ಪರವಾಗಿ ಕೇಂದ್ರ ಸರ್ಕಾರ ಹೇಳಿಕೆ ನೀಡುವವರೆಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಜಾಕ್ ಸಹ ಸಂಚಾಲಕ ಮುಪ್ಪಲ್ಲ ಸುಬ್ಬಾ ರಾವ್ ತಿಳಿಸಿದರು.

ಕಳೆದ 144 ದಿನಗಳಿಂದ ವಕೀಲರು ಆಂಧ್ರ ವಿಭಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಸೀಮಾಂಧ್ರದ 13 ಜಿಲ್ಲೆಗಳಲ್ಲಿ 18 ಲಕ್ಕಕ್ಕೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ ಎಂದರು.

ADVERTISEMENT

ಕೇಂದ್ರ ಸರ್ಕಾರದ ಆಂಧ್ರ ಪ್ರದೇಶ ಪುನರ್‌ರಚನೆ ಮಸೂದೆಯಲ್ಲಿ ಹಲವು ಲೋಪಗಳಿವೆ. ತೆಲಂಗಾಣ ಮತ್ತು ಸೀಮಾಂಧ್ರದ ಮಧ್ಯೆ ಸಮಸ್ಯೆಗಳನ್ನು ತಂದೊಡ್ಡಲಿದೆ ಹೀಗಾಗಿ ಮಸೂದೆ ವಿರುದ್ಧ ಬಾರ್ ಕೌನ್ಸಿಲ್ ಮತ್ತು ಬಾರ್ ಅಸೋಸಿಯೇಷನ್ ಸದಸ್ಯರು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಸುಬ್ಬಾ ರಾವ್ ತಿಳಿಸಿದರು.

ಟಿಡಿಪಿ, ವಿದ್ಯಾರ್ಥಿಗಳ ಪ್ರತಿಭಟನೆ
ಕಾಕಿನಾಡ ವರದಿ:
ಆಂಧ್ರ ವಿಭಜನೆ ವಿರೋಧಿಸಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಕಾರ್ಯಕರ್ತರ ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಮಾನವ ಸರಪಣಿ ನಿರ್ಮಿಸಿ ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.