ADVERTISEMENT

ಅಗ್ನಿ -1 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 14:31 IST
Last Updated 12 ಡಿಸೆಂಬರ್ 2012, 14:31 IST

ಬಾಲಸೋರ್ (ಒಡಿಶಾ) (ಪಿಟಿಐ): ಪರಮಾಣು ಸಿಡಿತಲೆಗಳನ್ನು ಹೊತ್ತು ಸುಮಾರು 700 ಕಿ.ಮೀ ದೂರದ ಗುರಿಯನ್ನು ಕರಾರುವಕ್ಕಾಗಿ ಹೊಡೆದುರುಳಿಸಬಲ್ಲ ಸ್ವದೇಶಿ ನಿರ್ಮಿತ ಅಗ್ನಿ -1 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವು ಬುಧವಾರ ಇಲ್ಲಿನ ಕರಾವಳಿ ತೀರದಲ್ಲಿ ಯಶಸ್ವಿಯಾಗಿ ನಡೆಯಿತು.

ಬೆಳಿಗ್ಗೆ 8.30ರ ಸುಮಾರಿಗೆ ಇಲ್ಲಿಗೆ ಸಮೀಪದ ವಿಲ್ಹರ್ ದ್ವೀಪದಲ್ಲಿರುವ ಸಮಗ್ರ ಪರೀಕ್ಷಾ ವಲಯದ (ಐಟಿಆರ್) ಉಡಾವಣೆ ಸಂಕಿರ್ಣ 4 ರಲ್ಲಿ ಸಂಚಾರಿ ಉಡಾವಣಾ ವಾಹಕದಿಂದ ಕ್ಷಿಪಣಿಯನ್ನು ಉಡಾಯಿಸಲಾಯಿತು ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

'ಭಾರತೀಯ ಸೇನೆಯ ಯುದ್ಧ ತಂತ್ರ ರಚನಾ ದಳವು ನಡೆಸಿದ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವು ಯಶಸ್ವಿಯಾಗಿದೆ' ಎಂದು ಉಡ್ಡಯನ ಕೇಂದ್ರದ ನಿರ್ದೇಶಕ ಎಮ್.ವಿ.ಕೆ.ವಿ ಪ್ರಸಾದ್ ತಿಳಿಸಿದರು.

15 ಮೀಟರ್ ಉದ್ದ ಹಾಗೂ 12ಟನ್ ತೂಕವುಳ್ಳ ಅಗ್ನಿ -1 ಕ್ಷಿಪಣಿಯು ಸುಮಾರು 1000 ಕೆ.ಜಿ ತೂಕದ ಪರಮಾಣು ಸಿಡಿತಲೆಗಳನ್ನು ಹೊತ್ತು ಸುಮಾರು 700 ಕಿ.ಮೀ ದೂರದ ಗುರಿಯನ್ನು ತಲುಪಬಲ್ಲದು. ಈಗಾಗಲೇ ಸೇನೆಯಲ್ಲಿ ಬಳಕೆಯಲ್ಲಿರುವ ಈ ಕ್ಷಿಪಣಿಯನ್ನು ಇದೇ ಸ್ಥಳದಲ್ಲಿ ಕಳೆದ ಜುಲೈ 13 ರಂದು ಪರೀಕ್ಷಾರ್ಥ ಪರೀಕ್ಷೆಗೆ ಒಳಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.